ರತಿ ಮನ್ಮಥರಿಗೆ 73ರ ಸಂಭ್ರಮ / TYAMAGONDLU

ರತಿ ಮನ್ಮಥ
ರತಿ ಮನ್ಮಥ
Published on
ತ್ಯಾಮಗೊಂಡ್ಲು ಲ್ಮಕಾಂತ್​
ತ್ಯಾಮಗೊಂಡ್ಲು ಮತ್ತು ಸುತ್ತಮುತ್ತಲ ಹತ್ತಾರು ಗ್ರಾಮಗಳ ಜನರ ಮನರಂಜನೆಗಾಗಿ ದಿ.ದೇವರಾಜ ಮೊದಲಿಯಾರ್​ ಮತ್ತು ಸಮಾನ ಮನಸ್ಕರು ಕಾಮನ ಭಜನೆ ಮಂಡಳಿ ಮೂಲಕ ಪ್ರಾರಂಭಿಸಿದ ರತಿ ಮನ್ಮಥಸ್ವಾಮಿ ವಿಜಯೋತ್ಸವಕ್ಕೆ 73 ವರ್ಷ ತುಂಬಿದ್ದು, ವಜ್ರ ಮಹೋತ್ಸವ ಪೂರೈಸಿ ಮುನ್ನಡೆಯುತ್ತಿದೆ.
ಈ ಹಿಂದೆ ದೇವರಾಜು ಮೊದಲಿಯಾರ್​, ಗೊಂಬೆ ರಾಮಣ್ಣ, ಅಬ್ದುಲ್​ ಖುದೂಸ್​, ಮುನಿಯಪ್ಪ, ದೊಡ್ಡಹನುಮಂತಯ್ಯ, ಟಿ.ವಿ.ಸುಬ್ಬಯ್ಯ, ಟಿ.ಎನ್​.ಶ್ರೀಕಂಠಯ್ಯ, ಅಪ್ಪಾಜಯ್ಯ, ಗುರು ಚನ್ನಬಸವಯ್ಯ, ಕಂಡಕ್ಟರ್​ ಶಿವಣ್ಣ, ಆಂಜಿನಪ್ಪ ಮತ್ತು ಸಮಾನ ಮನಸ್ಕರು ಕುಳಿತು ಮನರಂಜನೆಗೆ ಏನು ಮಾಡಬಹುದೆಂದು ಯೋಚಿಸಿದಾಗ ಹೊಳೆದದ್ದೇಚಿಕ್ಕಂದಿನಲ್ಲಿ ಯುವಕರು ಆಚರಿಸುತ್ತಿದ್ದ ಕಾಮದಹನ ಅಥವಾ ಹೋಳಿ ಹಬ್ಬ. ರತಿಮನ್ಮಥ ಸ್ವಾಮಿ ವಿಜಯೋತ್ಸವವಾಗಿ ನಾಮಕರಣವಾದ ಈ ಹಬ್ಬ 1953ರಲ್ಲಿ 11 ದಿನಗಳ ಆಚರಣೆಯಾಗಿ ಸಣ್ಣದಾಗಿ ಪ್ರಾರಂಭವಾಯಿತು.
ಮೊದಲ ದಿನ ಶಾಸವು ಗಂಡು ಸಿದ್ದಗಂಗಪ್ಪ ಅವರ ಮನೆಯಿಂದ, ಹೆಣ್ಣು ವೀರಸ್ವಾಮಿ ಮೊದಲಿಯಾರ್​ ಮನೆಯಿಂದ ಬರುತ್ತದೆ. ಎರಡನೇ ದಿನ ರತಿ ಮನ್ಮಥ ಸ್ವಾಮಿ ಧಾರೆ, ಮೂರನೇ ದಿನದಿಂದ ವಿವಿಧ ದೇವರ ಅಲಂಕಾರ ಮಾಡಲಾಗುತ್ತಿತ್ತು. ಇದರ ಉಸ್ತುವಾರಿಯನ್ನು ಪ್ರಾರಂಭದಲ್ಲಿ ಸ್ವಾತಂತ್ರ$್ಯ ಹೋರಾಟಗಾರ ಚಿನ್ನಕೋಟಪ್ಪ, ಪಶುಚಿಕಿತ್ಸಕ ಕೆಂಪಯ್ಯ, ಜಗತ್​ಪಾಲಯ್ಯ, ಸಿದ್ದಪ್ಪ, ನಾಗರಾಜು ನಡೆಸುತ್ತಿದ್ದರು. ಈಗ 5 ವರ್ಷದಿಂದ ಯುವಕ ನರಸಿಂಹಮೂರ್ತಿ ಮತ್ತು ಶ್ರೀನಿವಾಸ್​ ನಡೆಸಿಕೊಂಡು ಬರುತ್ತಿದ್ದಾರೆ. ಕೂಡಿಸುವ ಬೊಂಬೆಗಳಿಗೆ ಈಗ 73 ವರ್ಷವಾಗಿದೆ. ಈ ಬಾರಿ ಮಂಡಳಿಯಿಂದ ಹೊಸದಾಗಿ ಬಣ್ಣ ಹಾಕಿಸಲಾಗಿದೆ.
ಮೇಳೈಸಲಿವೆ ಜಾನಪದ ಕಲೆ : ಪ್ರಾರಂಭದ ವರ್ಷಗಳಲ್ಲಿ ಪ್ರತಿದಿನ ಮನೋರಂಜನೆಗಾಗಿ ಜಾನಪದ ಕಲೆಗಳಿಗೆ ಒತ್ತು ನೀಡಲಾಗಿತ್ತು. ಪ್ರತಿದಿನ ಹರಿಕಥೆ, ನಾಟಕ, ಕೊನೆಯ ದಿನ ಬಾಣ ಬಿರುಸು ಹೆಚ್ಚಿನದಾಗಿತ್ತು. ಇತ್ತೀಚೆಗೆ ಕಾನೂನಿನ ತೊಡಕು ಕಾರಣ ಪ್ರತಿದಿನ ಮನರಂಜನೆ ಕಾರ್ಯಕ್ರಮ ಇಲ್ಲ, ಸಾಂಪ್ರದಾಯಿಕ ಅಲಂಕಾರಕ್ಕೆ ಸೀಮಿತವಾಗಿದ್ದು, ಕೊನೆಯ ದಿನವಷ್ಟೇ ಹೂವಿನ ಪಲ್ಲಕ್ಕಿ, ತುಮಕೂರು ನಿಸಾರ್​ ಅಹಮದ್​ ಅವರ ಕರ್ನಾಟಕ ಫೈರ್​ ವರ್ಕ್ಸ್​ನಿಂದ ಬಾಣ ಬಿರುಸು, ಅತ್ತಿಬೆಲೆಯ ಎಂ.ಮುನಿಯಪ್ಪ ತಂಡದಿಂದ ಕೀಲು ಕುದುರೆ, ಮರಳಕುಂಟೆಯ ಹರ್ಷಕುಮಾರ್​ ಮತ್ತು ತಂಡದವರಿಂದ ವೀರಗಾಸೆ, ದೊಡ್ಡರಾಜು ಮತ್ತು ತಂಡದವರಿಂದ ತಮಟೆ ವಾದ್ಯ ಸೇರಿ ಇನ್ನಿತರ ಹಲವಾರು ಜಾನಪದ ಕಲಾತಂಡಗಳು ಮೇಳೈಸಲಿವೆ. ಈಗ ದೇವರಾಜ ಮೊದಲಿಯಾರ್​ ಮಕ್ಕಳಾದ ಟಿ.ಡಿ.ಕೇಶವನ್​, ಶಿವರಾಜ್​, ಸಂಬಂಧಿ ಸುನೀಲ್​, ಸತೀಶ್​ ಹಂದೆ, ನಾರಾಯಣ ಮೂರ್ತಿ, ಕಾಂತರಾಜು, ಮೂರ್ತಿ ಇತರರು ಆಚರಣೆಯನ್ನು ಮುಂದುವರಿಸಿದ್ದಾರೆ.
ಸರ್ಕಾರವೇ ಆಯೋಜಿಸಿದರೆ ಉತ್ತಮ : ಸಚಿವರಾಗಿದ್ದ ದಿ.ಚನ್ನಿಗಪ್ಪನವರು 2003ರಲ್ಲಿ ರತಿ ಮನ್ಮಥ ವಿಜಯೋತ್ಸವಕ್ಕೆ 50 ವರ್ಷ ತುಂಬಿದ ಸಂದರ್ಭದಲ್ಲಿ ಸುವರ್ಣ ಮಹೋತ್ಸವವನ್ನುವಿಜೃಂಭಣೆಯಿಂದ ಆಚರಿಸಿದ್ದರು. ಜಾನಪದ ಕಲೆಗಳು, ಆಚರಣೆಗಳು ನಶಿಸುತ್ತಿರುವ ಈ ಕಾಲ ಟ್ಟದಲ್ಲಿ 73 ವರ್ಷ ತುಂಬಿರುವ ಪ್ರದರ್ಶನಕ್ಕೆ ಅನುಮತಿ ನೀಡುವಲ್ಲಿ ಇಲಾಖೆಗಳು ಮೃದು ಧೋರಣೆ ತೋರಿಸಿದಲ್ಲಿ ಇನ್ನೂ ವೈಭವೋಪೇತ ಉತ್ತಮ ಕಾರ್ಯಕ್ರಮ ಆಯೋಜಿಸಬಹುದು. ಈ ಆಚರಣೆಯನ್ನು ಸರ್ಕಾರವೇ ಆಯೋಜಿಸಿದರೆ ಹೆಚ್ಚಿನ ಅರ್ಥ ಸಿಗುತ್ತದೆ.
ಕಾರ್ಯಕ್ರಮ ವಿವರ : ಅಂತೆಯೇ, ರತಿ ಮನ್ಮಥಸ್ವಾಮಿ ವಿಜಯೋತ್ಸವಕ್ಕೆ ಈಗಾಗಲೇ ಚಾಲನೆ ದೊರಕಿದ್ದು, ೆ.21ರಂದು ಶಾಸ, 22ರಂದು ರತಿ ಮನ್ಮಥ ಸ್ವಾಮಿ ಧಾರೆ ನಡೆದಿದ್ದು, ಮಾ.3ವರೆಗೆ ದೇವರ ವಿವಿಧ ಅಲಂಕಾರ ನಡೆಯಲಿವೆ. ಅದೇ ದಿನ ರಾತ್ರಿ 8.30ಕ್ಕೆ ಮುತ್ತಿನ ಪಲ್ಲಕ್ಕಿಯಲ್ಲಿ ರತಿ ಮನ್ಮಥ ಸ್ವಾಮಿ ಮೆರವಣಿಗೆ ಇರಲಿದೆ. ೆ.28ರಂದು ಬೈಲಾಂಜನೇಯ ಕಲಾ ವೃಂದದವರಿಂದ ಕುರುೇತ್ರ ನಾಟಕ, ಮಾ.3ರಂದು ಆದರ್ಶ ಕಲಾವೃಂದದವರಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನಗೊಳ್ಳಲಿದೆ.

ಟಿವಿ ಇಲ್ಲದ ಕಾಲದಲ್ಲಿ ಸುತ್ತಮುತ್ತಲ 10 ಕಿಮೀ ವ್ಯಾಪ್ತಿಯ ಹಳ್ಳಿಗಳ ಐದಾರು ಸಾವಿರ ಜನರು ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಉತ್ಸವಕ್ಕೆ ಬೇಕಾದ ಧನಸಹಾಯವನ್ನು ಗ್ರಾಮೀಣ ಜನರೇ ಹುಡುಕಿಕೊಂಡು ಬಂದು ದೇವರಾಜ ಮೊದಲಿಯಾರ್​ ಅವರಿಗೆ ಕೊಡುತ್ತಿದ್ದರು. ಕೊನೆಯ ದಿನ ಬಾಣ ಬಿರುಸು ನೋಡಲು ಇನ್ನೂ ಹೆಚ್ಚಿನ ಜನ ಸೇರುತ್ತಿದ್ದರು. ಈ ಸಂಪ್ರದಾಯ ಇಂದಿಗೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net