ರಾಮಲಿಂಗಾ ರೆಡ್ಡಿ ಬಿಕ್ಕಟ್ಟು ದೊಡ್ಡದಲ್ಲ!...ಕಂದಾಯ ಸಚಿವರಾಗಿ ಕಾಲಮಿತಿಯ ಗುರಿ ಹಾಕಿಕೊಂಡ ಡಿಸಿಎಂ ಪರಮೇಶ್ವರ್! | Dr G Parameshwara

Dr G Parameshwara | ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್
Dr G Parameshwara | ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್
Published on
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಅಸಮಾಧಾನ ಹಾಗೂ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರ ಮುನಿಸಿನ ಕುರಿತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಹತ್ವದ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ರಾಮಲಿಂಗಾರೆಡ್ಡಿ ಅವರ ಅಸಮಾಧಾನವೇನು ಅಷ್ಟು ದೊಡ್ಡ ವಿಚಾರವಲ್ಲ. ಪಕ್ಷದ ಹಿರಿಯ ಮುಖಂಡರು ಇದನ್ನು ಶೀಘ್ರದಲ್ಲೇ ಬಗೆಹರಿಸಲಿದ್ದಾರೆ ಎಂದರು.
ಈಗಾಗಲೇ ನಿನ್ನೆ ಮುಖ್ಯಮಂತ್ರಿಗಳು ಸ್ವತಃ ರಾಮಲಿಂಗಾರೆಡ್ಡಿ ಅವರ ಮನೆಗೆ ತೆರಳಿ ಸುದೀರ್ಘವಾಗಿ ಮಾತನಾಡಿದ್ದಾರೆ. ಹೀಗಾಗಿ ಎಲ್ಲಾ ಸಮಸ್ಯೆಗಳು ಸೌಹಾರ್ದಯುತವಾಗಿ ಇತ್ಯರ್ಥವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮತ್ತೊಬ್ಬ ಹಿರಿಯ ಸಚಿವ ಮುನಿಯಪ್ಪ ಅವರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಮುನಿಯಪ್ಪ ಅವರಿಗೆ ಯಾವುದೇ ಅಸಮಾಧಾನವಿಲ್ಲ. ನಿನ್ನೆ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಬಂದಿದ್ದಾಗ ಮುನಿಯಪ್ಪ ಅವರು ನಮ್ಮ ಜೊತೆಯಲ್ಲೇ ಕುಳಿತು ಸುದೀರ್ಘವಾಗಿ ಮಾತನಾಡಿದ್ದಾರೆ ಎಂದು ಸ್ಪಷ್ಟಪಡಿಸುವ ಮೂಲಕ ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದಿದ್ದಾರೆ. ಇನ್ನು ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ, ರಾಜಕಾರಣದಲ್ಲಿ ಇವೆಲ್ಲವೂ ಸರ್ವೇಸಾಮಾನ್ಯ ಎಂದರು.

ಕೃಷ್ಣಬೈರೇಗೌಡರ ಕಾರ್ಯಕ್ಕೆ ಪರಮೇಶ್ವರ್ ಶಭಾಶ್​!..

ಇದೇ ಸಂದರ್ಭದಲ್ಲಿ ಹೊಸದಾಗಿ ಕಂದಾಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿರುವ ಕುರಿತು ಮಾತನಾಡಿದ ಡಿಸಿಎಂ, ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲೇ ನಿನ್ನೆಯಷ್ಟೇ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ್ದೇನೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಪತ್ರಿಕಾಗೋಷ್ಠಿ ಕರೆದು ಸಂಪೂರ್ಣ ವಿವರ ನೀಡಲಿದ್ದೇನೆ. ನಮ್ಮ ಸರ್ಕಾರದ ಅವಧಿಯಲ್ಲಿ ಈಗ ನಮಗೆ ಸಿಕ್ಕಿರುವುದು ಕೇವಲ ಎರಡು ವರ್ಷಗಳ ಕಾಲಾವಕಾಶ ಮಾತ್ರ, ಸಮಯ ಬಹಳ ಕಡಿಮೆ ಇದೆ. ಹೀಗಾಗಿ ನಿರ್ದಿಷ್ಟ ಕಾಲಮೀತಿಯನ್ನು ಹಾಕಿಕೊಂಡು ಇಲಾಖೆಯಲ್ಲಿ ಏನೇನು ಸುಧಾರಣೆಗಳನ್ನು ಮಾಡಬೇಕೋ ಅದನ್ನೆಲ್ಲಾ ಮಾಡುತ್ತೇನೆ ಎಂದು ತಿಳಿಸಿದರು.
ಹಿಂದಿನ ಕಂದಾಯ ಸಚಿವ ಕೃಷ್ಣಬೈರೇಗೌಡರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಪರಮೇಶ್ವರ್, ಕೃಷ್ಣಬೈರೇಗೌಡರು ಕಂದಾಯ ಇಲಾಖೆಯಲ್ಲಿ ಅತ್ಯಂತ ಅದ್ಭುತವಾದ ಕೆಲಸ ಮಾಡಿದ್ದಾರೆ. ಇಲಾಖೆಯಲ್ಲಿ ಉತ್ತಮ ಬದಲಾವಣೆಗಳನ್ನು ತಂದಿರುವುದಲ್ಲದೆ, ಹೊಸ ಕಾನೂನು ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಇಡೀ ದೇಶದಲ್ಲೇ ಮೊದಲ ಎನ್ನಬಹುದಾದ ಕೆಲವು ಐತಿಹಾಸಿಕ ತೀರ್ಮಾನಗಳನ್ನು ಅವರು ತಂದಿದ್ದು, ಆ ಎಲ್ಲಾ ಜನಪರ ಕೆಲಸಗಳನ್ನು ನಾನು ಯಥಾವತ್ತಾಗಿ ಮುಂದುವರಿಸಿಕೊಂಡು ಹೋಗಲಿದ್ದೇನೆ. ಇಲಾಖೆಯಲ್ಲಿ ಬಾಕಿ ಇರುವ ನೇಮಕಾತಿ ಪ್ರಕ್ರಿಯೆಗಳು, ರೈತರ ಸಮಸ್ಯೆಗಳು ಸೇರಿದಂತೆ ಏನೇನು ಅಡಚಣೆಗಳಿವೆಯೋ ಅದನ್ನೆಲ್ಲಾ ಆದ್ಯತೆಯ ಮೇರೆಗೆ ಬಗೆಹರಿಸುತ್ತೇನೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net