ಮಾತಿಗೆ ಬದ್ಧರಾಮಯ್ಯ ನವ ನಾಯಕತ್ವಕ್ಕೆ ನಾಂದಿ

ಮಾತಿಗೆ ಬದ್ಧರಾಮಯ್ಯ ನವ ನಾಯಕತ್ವಕ್ಕೆ ನಾಂದಿ
ಮಾತಿಗೆ ಬದ್ಧರಾಮಯ್ಯ ನವ ನಾಯಕತ್ವಕ್ಕೆ ನಾಂದಿ
Published on
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಮಧ್ಯಾಹ್ನ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇದರೊಂದಿಗೆ ಕರ್ನಾಟಕ ರಾಜಕೀಯದ ಅತ್ಯಂತ ಪ್ರಭಾವಶಾಲಿ ಮತ್ತು ಧೀಮಂತ ನಾಯಕರೊಬ್ಬರ ಸುವರ್ಣ ಅಧ್ಯಾಯವೊಂದು ಮುಕ್ತಾಯದ ಹಂತಕ್ಕೆ ತಲುಪಿದಂತಾಗಿದೆ.
ಸಿದ್ದರಾಮನಹುಂಡಿ ಎಂಬ ಸಣ್ಣ ಹಳ್ಳಿಯಿಂದ ಬಂದು, 2 ಬಾರಿ ರಾಜ್ಯ ರಾಜಕಾರಣದ ಅತ್ಯುನ್ನತ ಸ್ಥಾನ ಅಲಂಕರಿಸಿದ 77 ವರ್ಷದ ಈ ಹಿರಿಯ ಮುತ್ಸದ್ದಿಯ ನಿರ್ಗಮನ ಕಾಂಗ್ರೆಸ್ ವಲಯದಲ್ಲಷ್ಟೇ ಅಲ್ಲ ಇಡೀ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಗುರುವಾರ ಮಧ್ಯಾಹ್ನ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸುತ್ತಿದ್ದಂತೆ ಹೊಸ ನಾಯಕತ್ವದ ಆಯ್ಕೆಗಾಗಿ ಕಾಂಗ್ರೆಸ್‌ನಲ್ಲಿ ಹೈಡ್ರಾಮಾ ಮತ್ತು ಕಸರತ್ತುಗಳು ಅಧಿಕೃತವಾಗಿ ಚಾಲನೆ ಪಡೆದುಕೊಳ್ಳಲಿವೆ. ದಿನದ ಬೆಳವಣಿಗೆಯಲ್ಲಿ ಬುಧವಾರ ಸಿದ್ದರಾಮಯ್ಯ ಅವರನ್ನು ಸುತ್ತುವರಿದಿದ್ದ ಆಪ್ತ ಸಚಿವರು, ಶಾಸಕರು ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದರು. ಆದರೆ, ಸಿದ್ದರಾಮಯ್ಯ ಮಾತ್ರ ನಿಸ್ತೇಜರಾಗಿ ಕಾಣಿಸಿ ಯಾವುದಕ್ಕೂ ಪ್ರತಿಕ್ರಿಯಿಸಲೇ ಇಲ್ಲ. ಮುಖ್ಯಮಂತ್ರಿಯಾಗಿ ತಮ್ಮ ಕೊನೆಯ ಕರ್ತವ್ಯ ಎಂಬಂತೆ ಬುಧವಾರ ಸಂಜೆ ವಿಧಾನಸೌಧಕ್ಕೆ ಆಗಮಿಸಿ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ಜಾತಿ ಗಣತಿ ವರದಿ ಸ್ವೀಕರಿಸಿದರು. ಈ ಸಂದರ್ಭದಲ್ಲೂ ಸಿಎಂ ಮುಖದಲ್ಲಿ ಖುಷಿ ಕಾಣಲಿಲ್ಲ.
ಇನ್ನು ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನೂತನ ನಾಯಕನ ಆಯ್ಕೆ ಪ್ರಕ್ರಿಯೆ ತೀವ್ರಗೊಳ್ಳಲಿದೆ. ಹೈಕಮಾಂಡ್ ಸೂಚನೆಯಂತೆ ದೆಹಲಿಯಿಂದ ಬರುವವಿಶೇಷ ವೀಕ್ಷಕರ ಸಮ್ಮುಖದಲ್ಲಿ ಶಾಸಕರ ಸಭೆ ನಡೆಯಲಿದ್ದು, ಮುಂದಿನ ಮುಖ್ಯಮಂತ್ರಿ ಯಾರೆಂಬ ಯಕ್ಷಪ್ರಶ್ನೆಕ್ಕೆ ಉತ್ತರ ನೀಡುವ ಅಧಿಕೃತ ಪ್ರಕ್ರಿಯೆ ಆರಂಭವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಕ್ಷ ಮುನ್ನಡೆಸಬಲ್ಲ, ಎಲ್ಲ ಬಣಗಳನ್ನು ಸಮಾನವಾಗಿ ಕೊಂಡೊಯ್ಯಬಲ್ಲ ಮತ್ತು ಮುಂಬರುವ ಸವಾಲು ಎದುರಿಸಬಲ್ಲ ಸಮರ್ಥ ನಾಯಕನಾಗಿ ಡಿ.ಕೆ. ಶಿವಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಇವರನ್ನು ಹೊರತುಪಡಿಸಿ ಗೃಹ ಸಚಿವ ಪರಮೇಶ್ವರ ಹೆಸರು ಕೇಳಿಬಂದಿದೆಯಾದರೂ ಸ್ಪಷ್ಟ ರೂಪ ಪಡೆದುಕೊಂಡಿಲ್ಲ.
ಈ ನಡುವೆ ಶಾಸಕರ ಅಭಿಪ್ರಾಯ ಪಡೆದೇ ಹೈಕಮಾಂಡ್ ಮುಂದುವರಿಯಬೇಕೆಂಬ ಕೂಗು ಸಿಎಂ ಆಪ್ತ ಶಾಸಕರು, ಸಚಿವರಲ್ಲಿದೆ. ಹಾಗೆಯೇ ನೀವೇಕೆ ಹೈಕಮಾಂಡ್ ಮಾತು ಒಪ್ಪಿ ಬಂದಿರಿ, ನಮ್ಮ ಅಭಿಪ್ರಾಯ ಪಡೆದು ನೀವು ಮುಂದುವರಿಯಬೇಕಿತ್ತು ಎಂದು ಕೆಲವು ಶಾಸಕರು ವಾದ ಮಂಡಿಸಿದರೂ ಸಿದ್ದರಾಮಯ್ಯ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡಲಿಲ್ಲ.

ಕೆಪಿಸಿಸಿಗೆ ನೂತನ ಸಾರಥಿ

ಸರ್ಕಾರದಲ್ಲಿ ಮಹತ್ವದ ಬದಲಾವಣೆ ಆಗುತ್ತಿರುವಂತೆ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲೂ ದೊಡ್ಡ ಸರ್ಜರಿ ನಡೆಯಲಿದೆ. ಸಚಿವರಾಗಿ ಅನುಭವ ಪಡೆದ ಮೂವರು ಸಚಿವರು ಕಾರ್ಯಾಧ್ಯಕ್ಷರ ಜವಾಬ್ದಾರಿ ಹೊರಲಿದ್ದಾರೆ ಎಂಬ ಚರ್ಚೆಗಳಿವೆ. ಪ್ರಸ್ತುತ ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಹೆಸರು ಮುಂಚೂಣಿಯಲ್ಲಿದೆ. ಲಿಂಗಾಯತ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಎಂದು ನಿರ್ಧಾರವಾದರೆ ಸಿದ್ದರಾಮಯ್ಯ ಸಂಪುಟದ ಪ್ರಮುಖ ಸಚಿವರು ಈ ಸ್ಥಾನ ಅಲಂಕರಿಸಲಿರುವರು.

ಅರಸು ನಂತರದ ಧೀಮಂತ ಪರ್ವ

ಸಿದ್ದರಾಮಯ್ಯ ನಿರ್ಗಮನ ಕೇವಲ ಒಂದು ಅಧಿಕಾರ ಬದಲಾವಣೆಯಲ್ಲ, ಬದಲಿಗೆ ಕರ್ನಾಟಕದ ಅಹಿಂದ ರಾಜಕಾರಣದ ಧ್ವನಿಯಂತೆ ಬಿಂಬಿತವಾಗಿದ್ದ ಪರ್ವವೊಂದು ತೆರೆಯ ಮರೆಗೆ ಸರಿಯಲಿದೆ. ದೇವರಾಜ ಅರಸು ನಂತರ ಹಿಂದುಳಿದ ವರ್ಗಗಳ ಪರವಾಗಿ ಗಟ್ಟಿಯಾಗಿ ನಿಂತು, 5 ವರ್ಷ ಪೂರ್ಣಾವಧಿ ಆಡಳಿತ ನೀಡಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದಾಗಿತ್ತು. ಸಾಮಾಜಿಕ ನ್ಯಾಯ ಹೆಸರಿನಲ್ಲಿ ಕೈಗೊಂಡ ನೀತಿ, ನಿರ್ಧಾರ, ಆಡಳಿತ ಶೈಲಿ ಮತ್ತು ನೇರ ನುಡಿಯ ವ್ಯಕ್ತಿತ್ವ ಅವರ ಆಪ್ತರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ. ಕಳೆದ ಕೆಲವು ಸಮಯದಿಂದ ಎದುರಾದ ರಾಜಕೀಯ ಏರಿಳಿತ, ಆಡಳಿತಾತ್ಮಕ ಸವಾಲು ಮತ್ತು ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಹೈಕಮಾಂಡ್ ಸಲಹೆಯ ಮೇರೆಗೆ ಅವರು ಗೌರವಾನ್ವಿತ ನಿರ್ಗಮನಕ್ಕೆ ಸಮ್ಮತಿಸಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ಸುದೀರ್ಘ 5 ದಶಕಗಳ ರಾಜಕೀಯ ಜೀವನದಲ್ಲಿ ಹಲವು ಏಳುಬೀಳು ಕಂಡಿರುವ ಸಿದ್ದರಾಮಯ್ಯ, ಪಕ್ಷದ ಹಿತದೃಷ್ಟಿ ಹಾಗೂ ಮುಂಬರುವ ಚುನಾವಣೆ ಎದುರಿಸಲು ನಾಯಕತ್ವ ಬದಲಾವಣೆ ಅನಿವಾರ್ಯ ಎಂಬ ವಾಸ್ತವವನ್ನು ಒಪ್ಪಿಕೊಂಡು ಈ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಸಾಧ್ಯಾಸಾಧ್ಯತೆಗಳು

ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ನೂತನ ಸಿಎಂ ಜತೆ 3 ಡಿಸಿಎಂ ಸ್ಥಾನ ಸೃಷ್ಟಿ ಆಗಬಹುದು.
ಮುಸ್ಲಿಂ, ದಲಿತ, ಲಿಂಗಾಯತ ಅಥವಾ ಒಬಿಸಿ ಸಮುದಾಯಕ್ಕೆ ಸೇರಿದವರು ಡಿಸಿಎಂ ಆಗಬಹುದು.
ಸಿದ್ದರಾಮಯ್ಯ ಸಂಪುಟದಲ್ಲಿರುವ ನಾಲ್ವರು ಹಿರಿಯ ಸಚಿವರು ಹೊಸ ಸಂಪುಟ ಸೇರದಿರಲು ನಿರ್ಧರಿಸಿದ್ದಾರೆ.
ಡಿಸಿಎಂ ಹುದ್ದೆ, ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರ ನೇಮಕದಲ್ಲಿ ಜಾತಿ ಸಮೀಕರಣಕ್ಕೆ ಪ್ರಾಧಾನ್ಯತೆ ನಿರೀಕ್ಷೆ.

ಸಂಪುಟ ವಿಸರ್ಜನೆ

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಯೊಂದಿಗೆ ಇಡೀ ಸಂಪುಟವೇ ವಿಸರ್ಜನೆಗೊಳ್ಳುವುದರಿಂದ, ಹೊಸದಾಗಿ ಅಧಿಕಾರ ವಹಿಸಿಕೊಳ್ಳುವ ಸಿಎಂ ಜತೆ ಯಾರೆಲ್ಲ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಪ್ರಾದೇಶಿಕ ಸಮತೋಲನ, ಜಾತಿ ಸಮೀಕರಣ ಮತ್ತು ಹಿರಿಯ-ಕಿರಿಯ ಶಾಸಕರ ನಡುವಿನ ಸಮನ್ವಯತೆ ಕಾಯ್ದುಕೊಂಡು ಹೊಸ ತಂಡ ಕಟ್ಟುವುದು ಕಾಂಗ್ರೆಸ್ ಪಾಲಿಗೆ ಕತ್ತಿಯ ಮೇಲಿನ ನಡಿಗೆಯಾಗಲಿದೆ. ಹೈಕಮಾಂಡ್ ಅಂಗಳದಲ್ಲಿ ಈಗಾಗಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಸಿದ್ಧವಾಗಿದೆ.

ಸಂಭಾವ್ಯ ಬೆಳವಣಿಗೆಗಳು

ಹೊಸ ನಾಯಕನ ಆಯ್ಕೆ ಪ್ರಕ್ರಿಯೆಯನ್ನು ಸುಸೂತ್ರ ಮತ್ತು ಪಾರದರ್ಶಕವಾಗಿಸಲು ಎಐಸಿಸಿ ಅಧ್ಯಕ್ಷರು ಇಬ್ಬರು ಹಿರಿಯ ರಾಷ್ಟ್ರೀಯ ನಾಯಕರನ್ನು ವೀಕ್ಷಕರಾಗಿ ರಾಜ್ಯಕ್ಕೆ ಕಳುಹಿಸುತ್ತಾರೆ.
ಎಐಸಿಸಿ ನಿರ್ದೇಶನದ ಮೇರೆಗೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ತುರ್ತು ಸಭೆ ಕರೆಯಲಾಗುತ್ತದೆ. ಸಭೆಗೆ ಪಕ್ಷದ ಎಲ್ಲ ವಿಧಾನಸಭಾ ಮತ್ತು ಪರಿಷತ್ ಸದಸ್ಯರಿಗೂ ಆಹ್ವಾನ.
ಪಕ್ಷದ ಶಿಷ್ಟಾಚಾರದಂತೆ ನಡೆಯುವುದಾದರೆ ವೀಕ್ಷಕರು ಪ್ರತಿ ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಮುಂದಿನ ಸಿಎಂ ಯಾರಾಗಬೇಕು ಎಂಬ ಬಗ್ಗೆ ವೈಯಕ್ತಿಕ ಅಭಿಪ್ರಾಯ ಪಡೆಯಲಿದ್ದಾರೆ.
ಸಾಮಾನ್ಯವಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ನಾಯಕನನ್ನು ಆಯ್ಕೆ ಮಾಡುವ ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತನ್ನ ವಿವೇಚನೆಯಂತೆ ಪ್ರಕಟಿಸಲಿದೆ.
ಬಳಿಕ ಶಾಸಕಾಂಗ ಪಕ್ಷದ ನಾಯಕ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಂಡಿಸಲಿದ್ದು, ರಾಜಭವನ ಅನುಮತಿ ನೀಡಲಿದೆ.

ಅಚ್ಚರಿ ಸಂಪುಟ ಹೊಸಬರಿಗೆ ಮಣೆ

ಮುಂಬರುವವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹೊಸ ಸಂಪುಟ ರಚಿಸಲು ಹೈಕಮಾಂಡ್ ನಿರ್ಧರಿಸಿದೆ. ಮಾಹಿತಿ ಪ್ರಕಾರ 18ಕ್ಕಿಂತ ಹೆಚ್ಚು ಸಚಿವರು ಸಂಪುಟ ಸೇರುವ ಅವಕಾಶ ಪಡೆಯಲಿದ್ದಾರೆ. ಇದರಲ್ಲಿ ಬಹುತೇಕರು 50 ವರ್ಷದ ಒಳಗಿನವರಾಗಿರುತ್ತಾರೆ. 1-2 ಬಾರಿ ಆಯ್ಕೆಯಾದವರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ. ನಾಡಿನ ಜನರಿಗೆ ಪರಿಣಾಮಕಾರಿ ಬದಲಾವಣೆಯ ಸಂಗತಿ ಅನುಭವಕ್ಕೆ ತರುವ ಉದ್ದೇಶ ಇದರ ಹಿಂದಿದೆ.

ಬುಧವಾರ ಏನೇನಾಯ್ತು?

ಬೆಳಗ್ಗೆ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರ ಸಭೆ
ಸಿಎಂ ಪರ ನಿಂತ ನಾಯಕರು, ರಾಜೀನಾಮೆ ನೀಡದಂತೆ ಒತ್ತಾಯ
ವಿಧಾನಸೌಧಕ್ಕೆ ತೆರಳಿ ನೆಹರು ಪುಣ್ಯಸ್ಮರಣೆಯಲ್ಲಿ ಭಾಗಿಯಾದ ಸಿಎಂ
ಮತ್ತೆ ಕಾವೇರಿಯಲ್ಲಿ ಆಪ್ತರ ಜತೆ ಸಭೆ, ಸಹಿ ಸಂಗ್ರಹ ಬೇಡವೆಂದ ಸಿಎಂ
ತಮ್ಮ ಪರ ನಿಲ್ಲದ ರಾಹುಲ್ ಗಾಂಧಿ ಬಗ್ಗೆ ಸಿದ್ದರಾಮಯ್ಯ ಬೇಸರ
ಸಿದ್ದರಾಮಯ್ಯ ಭೇಟಿಯಾದ ಸುರ್ಜೆವಾಲ, ಯಾವುದೇ ಚರ್ಚೆಯಿಲ್ಲ
ಯಾವುದೂ ನಿಜವಲ್ಲ, ಎಲ್ಲವೂ ಊಹಾಪೋಹವೆಂದ ಸುರ್ಜೆವಾಲ
ಪಕ್ಷಕ್ಕಾಗಿ ಸಿದ್ದರಾಮಯ್ಯ ಅವರು ದುಡಿದಿದ್ದಾರೆ ಎಂದ ಸುರ್ಜೆವಾಲ
ವಿಧಾನಸೌಧಕ್ಕೆ ಆಗಮಿಸಿದ ಸಿಎಂ, ಜಾತಿಗಣತಿ ವರದಿ ಸ್ವೀಕಾರ
ತಮ್ಮ ಕಚೇರಿ ಸಿಬ್ಬಂದಿಗೆ ಧನ್ಯವಾದ ತಿಳಿಸಿದ ಸಿದ್ದರಾಮಯ್ಯ
ಮತ್ತೆ ಆಪ್ತ ಸಚಿವರಿಂದ ಸಿಎಂ ಭೇಟಿ, ನಾಳಿನ ಕಾರ್ಯತಂತ್ರ ಚರ್ಚೆ
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net