ರೈತರ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಖಂಡನೆ

ತಿ.ನರಸೀಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ರಸ್ತೆ ಸಂಚಾರ ತಡೆದ ಪ್ರತಿಭಟನೆ ನಡೆಸಿದರು. ಕಿರಗಸೂರು ಶಂಕರ್, ಅತ್ತಹಳ್ಳಿ ದೇವರಾಜ್, ಕೆ.ಜಿ.ಗುರುಸ್ವಾಮಿ, ಸಿದ್ದೇಶ್, ಬಿ.ಪಿ. ಪರಶಿವಮೂರ್ತಿ ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ರಸ್ತೆ ಸಂಚಾರ ತಡೆದ ಪ್ರತಿಭಟನೆ ನಡೆಸಿದರು. ಕಿರಗಸೂರು ಶಂಕರ್, ಅತ್ತಹಳ್ಳಿ ದೇವರಾಜ್, ಕೆ.ಜಿ.ಗುರುಸ್ವಾಮಿ, ಸಿದ್ದೇಶ್, ಬಿ.ಪಿ. ಪರಶಿವಮೂರ್ತಿ ಇತರರು ಇದ್ದರು.
Published on
ತಿ.ನರಸೀಪುರ: ಬಿಡದಿ ಟೌನ್‌ಶಿಪ್ ಭೂ ಸ್ವಾಧೀನ ವಿರೋಧಿಸಿ ಶಾಂತಿಯುತ ಹೋರಾಟ ನಡೆಸುತ್ತಿದ್ದವರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಹಳೇ ತಿರುಮಕೂಡಲು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾವಣೆಗೊಂಡ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ಪೊಲೀಸ್ ದೌರ್ಜನ್ಯದ ವಿರುದ್ಧ ಕಿಡಿಕಾರಿದರು. ಕಂದಾಯ ಅಧಿಕಾರಿಗಳು ರೈತರ ಅನುಮತಿ ಪಡೆಯದೆ ಏಕಪಕ್ಷೀಯವಾಗಿ ಮಂಡಲಹಳ್ಳಿ ಗ್ರಾಮದಲ್ಲಿ ಭೂಮಿ ಸರ್ವೇ ಕಾರ್ಯ ನಡೆಸಲು ಬಂದಾಗ ಪ್ರತಿಭಟನಾನಿರತರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದು ಸರಿಯಲ್ಲ ಎಂದು ಹರಿಹಾಯ್ದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗನೂರು ಶಂಕರ್ ಮಾತನಾಡಿ, ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಬೈರಮಂಗಲ, ಮಂಡಲಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಉದ್ದೇಶಿತ ಹೈಟೆಕ್ ಟೌನ್‌ಶಿಪ್‌ಗಾಗಿ ರೈತರ ಫಲವತ್ತಾದ ಕೃಷಿ ಭೂಮಿ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದನ್ನು ಕೈಬಿಡಬೇಕು. ಪೊಲೀಸರು ಪ್ರತಿಭಟನಾನಿರತರನ್ನು ಚದುರಿಸಲು ವಯೋವೃದ್ಧರು ಮತ್ತು ಮಹಿಳೆಯರ ಎನ್ನದೇ ಲಾಠಿ ಬೀಸಿರುವುದು ಖಂಡನೀಯ. ಅಲ್ಲದೆ ಹಲವು ಹೋರಾಟಗಾರರನ್ನು ಬಲವಂತವಾಗಿ ಬಂಧಿಸಲು ಯತ್ನಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ಶಾಂತಿಯುತವಾಗಿ ಹಕ್ಕೊತ್ತಾಯ ಮಂಡಿಸುತ್ತಿದ್ದ ಅನ್ನದಾತರ ಮೇಲೆ ಮತ್ತು ಮಹಿಳೆಯರ ಮೇಲೆ ಅಮಾನವೀಯವಾಗಿ ಲಾಠಿ ಬೀಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು. ಅಲ್ಲದೆ ಪ್ರತಿಭಟನೆಯ ವೇಳೆ ವಶಕ್ಕೆ ಪಡೆದಿರುವ ಎಲ್ಲ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರವು ಹಠಮಾರಿ ಧೋರಣೆ ಮುಂದುವರಿಸಿ ಬಲವಂತದ ಭೂ ಸ್ವಾಧೀನಕ್ಕೆ ಕೈಹಾಕಿದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಕೆ.ಜಿ.ಗುರುಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಕುರುಬೂರು ಸಿದ್ದೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಪಿ.ಪರಶಿವಮೂರ್ತಿ, ತಾಲೂಕು ಪ್ರಧಾನ ಕಾರ್ಯದರ್ಶಿ ವಾಚ್ ಕುಮಾರ್ , ಉಪಾಧ್ಯಕ್ಷ ಕರುವಟ್ಟಿ ಉಮೇಶ್, ಟೌನ್ ಅಧ್ಯಕ್ಷ ಅಪ್ಪಣ್ಣ, ಮುಖಂಡರಾದ ಕುರುಬೂರು ಪ್ರದೀಪ್, ಕಿರಗಸೂರು ಪ್ರಸಾದ್ ನಾಯಕ್, ವಾಟಾಳ್ ರಂಗಸ್ವಾಮಿ ಅವರು ಉಮೇಶ್, ಸೋಮನಾಥಪುರ ಶೇಖರ್, ಬನ್ನಳ್ಳಿಹುಂಡಿ ಶಾಂತರಾಜ್, ರಾಜೇಂದ್ರ, ಮೇಗಳಕೊಪ್ಪಲು ಕುಮಾರ್, ಬಸವನಹಳ್ಳಿ ನಂಜುಂಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net