ರಾಜ್ಯದಲ್ಲಿ ವಾರಪೂರ್ತಿ ಮಳೆ: ದಕ್ಷಿಣ ಕರ್ನಾಟಕ ಭಾಗದಲ್ಲಿ ತುಸು ಬಿರುಸು-Rain

ರಾಜ್ಯದಲ್ಲಿ ವಾರಪೂರ್ತಿ ಮಳೆ
ರಾಜ್ಯದಲ್ಲಿ ವಾರಪೂರ್ತಿ ಮಳೆ
Published on
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಮತ್ತು ಅಂಡಮಾನ್ ನಿಕೋಬಾರ್‌ನಲ್ಲಿ ತೇವಾಂಶ ಭರಿತ ಮೋಡದ ಕಾರಣ ರಾಜ್ಯದಲ್ಲಿ ವಾರಪೂರ್ತಿ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಮತ್ತು ಉತ್ತರ ಕರ್ನಾಟಕದ ಭೌಗೋಳಿಕ ಪ್ರದೇಶಗಳಕ್ಕಿಂತ ದಕ್ಷಿಣ ಕರ್ನಾಟದ ವ್ಯಾಪ್ತಿಯ ಪ್ರದೇಶಗಳಲ್ಲಿ ತುಸು ಬಿರುಸಾಗಿ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮಂಗಳವಾರ ವರ್ಷಧಾರೆಯಾಗಿತ್ತು. ಇನ್ನೂ ಕೆಲ ಜಿಲ್ಲೆಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಬಿಸಿಲು ವಾತಾವರಣ ಇದ್ದರೆ ಸಂಜೆಯಲ್ಲಿ ಮೋಡ ಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗಿತ್ತು. ಮಳೆ ಹಿನ್ನೆಲೆಯಲ್ಲಿ ಉಷ್ಣಾಂಶ ಏರಿಳಿತವಾಗುತ್ತಿದೆ.
ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ. ದಕ್ಷಿಣ,ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರದಲ್ಲಿ ಮೇ 6ರಿಂದ ಮೇ 12ವರೆಗೆ ಜೋರಾಗಿ ಮಳೆಯಾಗಲಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮೇ 8ರಿಂದ ಮೇ 12ವರೆಗೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ ಮತ್ತು ಕಲಬುರಗಿಯಲ್ಲಿ ಮೇ 7ರಿಂದ ಮೇ 10ವರೆಗೆ ಸಾಧಾರಣ ವರ್ಷಧಾರೆಯಾಗಲಿದೆ. ಈ ಸಂದರ್ಭದಲ್ಲಿ ಕೆಲ ಜಿಲ್ಲೆಗಳಲ್ಲಿ ಬಿರುಗಾಳಿ ಜಾಸ್ತಿ ಇರಲಿದ್ದು, ಗುಡುಗು ಮತ್ತು ಮಿಂಚು ಕಾಣಿಸಿಕೊಳ್ಳಲಿದೆ.
ಪ್ರಸ್ತುತ ಹವಾಮಾನ ಸ್ಥಿತಿಯನ್ನು ಗಮನಿಸಿದರೆ ಮೇ 15ರ ಬಳಿಕ ಮಾನ್ಸೂನ್ ಸೃಷ್ಟಿಯಾಗಲು ಪೂರಕ ವಾತಾವರಣ ಇದೆ. ವಾಡಿಕೆ ಅಥವಾ ವಾಡಿಕೆಕ್ಕಿಂತ ಮುನ್ನ ಅಂಡಮಾನ್ ನಿಕೋಬಾರ್‌ನಿಂದ ಕೇರಳಕ್ಕೆ ಮಾರುತಗಳು ಪ್ರವೇಶಿಸಲಿವೆ. ಈ ಸಂದರ್ಭದಲ್ಲಿ ಮಾರುತಗಳು ಪ್ರಬಲವಾದರೆ ಅದೇ ದಿನದಂದು ಕರ್ನಾಟಕಕ್ಕೆ ಆಗಮಿಸಲಿವೆ. ಇಲ್ಲವಾದರೆ ಒಂದೆರಡು ದಿನ ವಿಳಂಬವಾಗಬಹುದು.
ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net