188 ತಾಲೂಕಿನಲ್ಲಿ ಮಳೆ ಕೊರತೆ: ರಾಜ್ಯದಲ್ಲಿ ಕ್ಷೀಣಿಸಿದ ಮುಂಗಾರು

ರಾಜ್ಯದಲ್ಲಿ ನೈಋತ್ಯ ಮುಂಗಾರು ಕಣ್ಣಾಮುಚ್ಚಾಲೆ
ರಾಜ್ಯದಲ್ಲಿ ನೈಋತ್ಯ ಮುಂಗಾರು ಕಣ್ಣಾಮುಚ್ಚಾಲೆ
Published on

ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮುಂಗಾರು ಕಣ್ಣಾಮುಚ್ಚಾಲೆಯಾಡುತ್ತಿದ್ದು, ಬರದತ್ತ ಕರುನಾಡು ಮುಖಮಾಡಿದೆ. 240 ತಾಲೂಕುಗಳ ಪೈಕಿ 188ರಲ್ಲಿ ಮಳೆ ಅಭಾವ ಸೃಷ್ಟಿಯಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಾಡಿನ ಜಲಾಶಯಗಳಲ್ಲಿ ಕ್ರಮೇಣ ನೀರಿನ ಸಂಗ್ರಹ ಕುಸಿಯುತ್ತಿದೆ. ಬಿತ್ತನೆ ಕಾರ್ಯಕ್ಕೂ ಅಡ್ಡಿ ಉಂಟಾಗಿದೆ.

ವಾಡಿಕೆಯಂತೆ ಜುಲೈನ ಮೊದಲ 15 ದಿನಗಳಲ್ಲಿ ಸರಾಸರಿ 127 ಮಿ.ಮೀ. ಮಳೆ ಬದಲು 88 ಮಿ.ಮೀ. ಮಾತ್ರ ಸುರಿದು, ಶೇ.30 ಕೊರತೆ ಉಂಟಾಗಿದೆ. ಜು.9ರಿಂದ 15ರವರೆಗಿನ ಅವಧಿಯಲ್ಲಿ ಸರಾಸರಿ 60.5 ಮಿ.ಮೀ. ಬದಲು 13.2 ಮಿ.ಮೀ. ವರ್ಷಧಾರೆಯಾಗಿದ್ದು, ಶೇ.78 ಅಭಾವ ತಲೆದೋರಿದೆ. ಈ ಮಧ್ಯೆ ಆಷಾಢ ಮಾಸ ಆರಂಭವಾಗಿದ್ದು, ವಾತಾವರಣದಲ್ಲಿ ಗಾಳಿಯ ವೇಗ ಹೆಚ್ಚಲಿದ್ದು, ಮಳೆ ಮೋಡಗಳನ್ನು ದೂರಕ್ಕೆ ದೂಡಿ ಇನ್ನಷ್ಟು ಸಮಸ್ಯೆ ಸೃಷ್ಟಿಸುವ ಆತಂಕ ಎದುರಾಗಿದೆ.

28 ಜಿಲ್ಲೆಗಳಲ್ಲಿ ಕೊರತೆ

ಪ್ರಸಕ್ತ ರಾಜ್ಯದ 31 ಜಿಲ್ಲೆಗಳ ಪೈಕಿ 28ರಲ್ಲಿ ಕಡಿಮೆ ಅಥವಾ ಅತಿ ಕಡಿಮೆ ಪ್ರಮಾಣದ ಮಳೆಯಾಗಿದೆ. ಉತ್ತರಕನ್ನಡ ಹಾಗೂ ಹಾಸನ ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಹೆಚ್ಚು ಪ್ರಮಾಣದ ಮಳೆ ಸುರಿದಿದೆ. ತಾಲೂಕá-ವಾರು ಪೈಕಿ ನಿಪ್ಪಾಣಿ, ಚಿಕ್ಕೋಡಿ, ರಾಯಭಾಗ, ಹುಕ್ಕೇರಿ, ಕಾಗವಾಡ ಹಾಗೂ ಚಿಕ್ಕಮಗಳೂರಿನಲ್ಲಿ ಮಾತ್ರ ಹೆಚ್ಚು ಮಳೆ ಬಿದ್ದಿರುವುದನ್ನು ಹವಾಮಾನ ಇಲಾಖೆ ದೃಢಪಡಿಸಿದೆ.

ಮಳೆ ಪ್ರದೇಶಗಳಲ್ಲೇ ಅಭಾವ: ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗುವ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಸುರಿದಿಲ್ಲ. ಅತ್ಯಧಿಕ ವರ್ಷಧಾರೆಯಾಗುವ ಉಡುಪಿ ಜಿಲ್ಲೆಯಲ್ಲೂ ಮಳೆರಾಯ ಅಕ್ಷರಶಃ ಮುನಿಸುಕೊಂಡಂತಿದೆ. ಜುಲೈ ಆರಂಭದಲ್ಲಿ ಕೆಲ ಪ್ರದೇಶಗಳಲ್ಲಿ ಮಾತ್ರ ಮಳೆ ಯಾಗಿರುವುದನ್ನು ಹೊರತುಪಡಿಸಿ ಇನ್ನುಳಿದ ದಿನಮಾನಗಳಲ್ಲಿ ಕೃಷಿ ಬಿತ್ತನೆಗೆ ಪೂರಕ ವಾತಾವರಣ ಸೃಷ್ಟಿಯಾಗಿಲ್ಲ. ಇದರ ಪರಿಣಾಮ ಬಿತ್ತನೆ ಕಾರ್ಯ ಶೇ.38 ದಾಟಿಲ್ಲ.

ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಪತ್ರ

ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿ ಬರದ ವಾತಾವರಣ ನಿರ್ಮಾವಾಗಿದ್ದು, ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಧಾವಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಡಿಸಿಎಂ ಡಾ.ಜಿ. ಪರಮೇಶ್ವರ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಪ್ರಧಾನಿಗೆ ಇತ್ತೀಚೆಗೆ ಪತ್ರ ಬರೆದು ಸಂಕಷ್ಟಕ್ಕೆ ಧಾವಿಸುವಂತೆ ಕೋರಿದ್ದರು. ಪ್ರಧಾನಿ ಮೋದಿ, ಕೇಂದ್ರ ಕೃಷಿ ಸಚಿವ ಶಿವರಾಜ್​ಸಿಂಗ್ ಚವ್ಹಾಣ್, ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಪರಮೇಶ್ವರ ಪತ್ರ ಬರೆದಿದ್ದಾರೆ.

ಕರ್ನಾಟಕದಲ್ಲಿ ಜೂನ್​ನಲ್ಲಿ ಶೇ.42 ಮತ್ತು ಜುಲೈನಲ್ಲಿ ಶೇ.34 ಮಳೆ ಕೊರತೆಯಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದ ಪರಿಷ್ಕೃತ ಫ್ರೂಟ್ಸ್ ದತ್ತಾಂಶವನ್ನು ಅಂಗೀಕರಿಸಬೇಕು.

ಬೆಳೆ ನಷ್ಟ ಪರಿಹಾರಕ್ಕೆ ಸಂಬಂಧಿಸಿದ ಎಸ್​ಡಿಆರ್​ಎಫ್/ಎನ್​ಡಿಆರ್​ಎಫ್ ಬರ ಕೈಪಿಡಿ -2020ರ ಮಾನದಂಡಗಳನ್ನು ಏಕರೂಪಗೊಳಿಸಿ, ರೈತರಿಗೆ ತ್ವರಿತ, ಸಮಾನ ಪರಿಹಾರ ದೊರೆಯುವಂತೆ ಮಾಡಬೇಕು. ಬಿತ್ತನೆ ಅವಧಿಯಲ್ಲಿನ ಶೇ.20-59 ಮಳೆ ಕೊರತೆಯನ್ನೂ ಬರ ಘೊಷಣೆಗೆ ಮಾನದಂಡವಾಗಿ ಪರಿಗಣಿಸಬೇಕು, ಬರವನ್ನು ಮುಂಚಿತವಾಗಿಯೇ ಘೊಷಿಸಲು ರಾಜ್ಯಗಳಿಗೆ ಅವಕಾಶ ಕಲ್ಪಿಸಬೇಕು ಮತ್ತು ಕೇಂದ್ರ ಸರ್ಕಾರವು ಹೆಚ್ಚಿನ ನೆರವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಆನೇಕಲ್​ನಲ್ಲಿ ಒಂದು ಹನಿ ಮಳೆಯಿಲ್ಲ!

ಕಳೆದ 15 ದಿನಗಳಲ್ಲಿ ರಾಜ್ಯದ ವಿವಿಧೆಡೆ ಮಳೆ ಅಭಾವದ ಮಧ್ಯೆಯೂ ಅಲ್ಲಲ್ಲಿ ಸ್ವಲ್ಪ ಪ್ರಮಾಣದಷ್ಟು ವರ್ಷಧಾರೆ ಆಗಿದೆ. ಆದರೆ, ಬೆಂಗಳೂರಿನ ಮಗ್ಗುಲಲ್ಲಿರುವ ಆನೇಕಲ್ ತಾಲೂಕಿನಲ್ಲಿ ಒಂದು ಹನಿಯೂ ಬಿದ್ದಿಲ್ಲ. ಇಡೀ ರಾಜ್ಯದಲ್ಲಿ ಹಲವು ದಿನಗಳಿಂದ ಮಳೆಯಾ ಗದಿರುವುದು ಆನೇಕಲ್​ನಲ್ಲಿ ಮಾತ್ರ.

ಕುಡಿಯುವ ನೀರಿಗಾಗಿ ಪ್ರತಿ ಜಿಲ್ಲೆಗೆ 5 ಕೋಟಿ ರೂ. ನೀಡಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 329.61 ಕೋಟಿ ರೂ. ಇದೆ. ನಿರಂತರವಾಗಿ ತಾಲೂಕು ಮತ್ತು ಜಿಲ್ಲೆಗಳಲ್ಲಿ ಟಾಸ್ಕ್ ಫೋರ್ಸ್/ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗಳನ್ನು ನಡೆಸಲಾಗುತ್ತಿದೆ.
| ಡಾ.ಜಿ. ಪರಮೇಶ್ವರ ಡಿಸಿಎಂ

ಬರ ಅಧ್ಯಯನಕ್ಕಾಗಿ ಕೇಂದ್ರಕ್ಕೆ ಪತ್ರ ಬರೆಯುವ ಮುನ್ನ ಬರ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು. ಅದು ಬಿಟ್ಟು ವಿನಾಕಾರಣ ರಾಜಕೀಯ ಮಾಡುವುದು ಸಲ್ಲ. ಮಳೆ ಹೆಚ್ಚಾದರೂ ಪ್ರಧಾನಿ ಮೋದಿಯೇ ಕಾರಣ, ಮಳೆ ಕಡಿಮೆಯಾದರೂ ಅವರೇ ಕಾರಣ ಎನ್ನುವಂತಹ ಧೋರಣೆಯನ್ನು ಕಾಂಗ್ರೆಸ್ ಬಿಡಬೇಕು.
| ಪ್ರಲ್ಹಾದ ಜೋಶಿ ಕೇಂದ್ರ ಸಚಿವ

ಬೆಳೆ ವಿಮೆ ನೋಂದಣಿ 15 ದಿನ ವಿಸ್ತರಣೆ

ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ ಕಾರಣ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿ ಮೇರೆಗೆ ಕೇಂದ್ರ ಸರ್ಕಾರ ರೈತರಿಗೆ ಬೆಳೆ ವಿಮೆ ನೋಂದಣಿ ಅವಧಿಯನ್ನು 15 ದಿನಗಳ ಕಾಲ ವಿಸ್ತರಿಸಿದೆ. ಧಾರವಾಡ, ಗದಗ, ಹಾವೇರಿ ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರಿಗೆ ಬೆಳೆ ವಿಮೆ ನೋಂದಣಿಗೆ ಜುಲೈ 15ರವರೆಗೆ ಇದ್ದ ಕಾಲಮಿತಿಯನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ. ಈ ಜಿಲ್ಲೆಗಳ ರೈತರು ಬೆಳೆ ವಿಮೆ ಪಾವತಿಸುವಲ್ಲಿ ತಾಂತ್ರಿಕ ತೊಂದರೆ ಎದುರಿಸುತ್ತಿದ್ದರು. ಇದನ್ನು ಮನಗಂಡು ಸಚಿವ ಪ್ರಲ್ಹಾದ ಜೋಶಿ ವಿಮೆ ನೋಂದಣಿ ಅವಧಿ ವಿಸ್ತರಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್​ಸಿಂಗ್ ಚವ್ಹಾಣ್ ಅವರಿಗೆ ಮನವಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net