ಇನ್ನು ಬಿತ್ತನೆಯಾಗಿ 35 ರಿಂದ 40 ದಿನಗಳ ಹಂತ ತಲುಪಿರುವ ಬೆಳೆಗಳಲ್ಲಿ ತೇವಾಂಶದ ಕೊರತೆ ಕಂಡುಬಂದರೆ, ವಿಶೇಷ ಪೋಷಕಾಂಶಗಳ ದ್ರಾವಣವನ್ನು ನೀಡಬೇಕು. ಇದಕ್ಕಾಗಿ ಪ್ರತಿ ಲೀಟರ್ ನೀರಿಗೆ 1-3 ಗ್ರಾಂ 13:0:45, 1-3 ಗ್ರಾಂ 19 ಆಲ್ ಮತ್ತು 2-3 ಮಿಲೀ ಲಘು ಪೋಷಕಾಂಶಗಳ ಮಿಶ್ರಣವನ್ನು ಬೆರೆಸಿ ಸಿಂಪಡಣೆ ಹಾಗೂ ಬುಡಕ್ಕೆ ಸುರಿಯುವ (ಡ್ರೆಂಚಿಂಗ್) ಎರಡೂ ಕಾರ್ಯಗಳನ್ನು ಏಕಕಾಲದಲ್ಲಿ ಮಾಡಬೇಕು. ಈ ಪ್ರಕ್ರಿಯೆಗೆ ಪ್ರತಿ ಎಕರೆಗೆ ಕನಿಷ್ಠ 400 ಲೀಟರ್ ದ್ರಾವಣವನ್ನು ಕಡ್ಡಾಯವಾಗಿ ಬಳಸಬೇಕಾಗುತ್ತದೆ. ಒಂದು ವೇಳೆ ಈ ಹಂತದಲ್ಲಿ ಮಳೆ ಹೆಚ್ಚಾಗಿದ್ದರೆ, ಹೆಸರು, ಉದ್ದು ಮತ್ತು ಸೋಯಾ ಅವರೆ ಬೆಳೆಗಳಲ್ಲಿ ಕಾಣಿಸಿಕೊಳ್ಳುವ 'ಕುಂಕುಮ ಅಥವಾ ತುಕ್ಕು ರೋಗ'ದ ಬಾಧೆ ತಡೆಯಲು ಪ್ರತಿ ಲೀಟರ್ ನೀರಿಗೆ 1 ಮಿಲೀ ಹೆಕ್ಸಾಕೊನಾಜೋ಼ಲ್ ಬೆರೆಸಿ ಸಿಂಪಡಿಸಬೇಕು.