ವೀರೇಂದ್ರ ಪಾಟೀಲರಿಗೆ ರಾಜೀವ್ ಗಾಂಧಿ ಮಾಡಿದ ಅಪಮಾನವನ್ನೇ ಸಿದ್ದರಾಮಯ್ಯ ಅವರಿಗೆ ರಾಹುಲ್ ಮಾಡಿದ್ದಾರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ!

ವೀರೇಂದ್ರ ಪಾಟೀಲರಿಗೆ ರಾಜೀವ್ ಗಾಂಧಿ ಮಾಡಿದ ಅಪಮಾನವನ್ನೇ ಸಿದ್ದರಾಮಯ್ಯ ಅವರಿಗೆ ರಾಹುಲ್ ಮಾಡಿದ್ದಾರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ!
ವೀರೇಂದ್ರ ಪಾಟೀಲರಿಗೆ ರಾಜೀವ್ ಗಾಂಧಿ ಮಾಡಿದ ಅಪಮಾನವನ್ನೇ ಸಿದ್ದರಾಮಯ್ಯ ಅವರಿಗೆ ರಾಹುಲ್ ಮಾಡಿದ್ದಾರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ!
Published on
ಮಂಗಳೂರು: ಕರ್ನಾಟಕದ ಮಾಸ್ ಲೀಡರ್, ಜನಪ್ರಿಯ ನಾಯಕ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ತೀರಾ ಅಸಹನೀಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ರಾಜ್ಯ ರಾಜಕಾರಣದಲ್ಲಿ ಸದ್ಯ ಸೃಷ್ಟಿಯಾಗಿರುವ ಸಿಎಂ ಬದಲಾವಣೆಯ ಹೈ-ಡ್ರಾಮಾದ ಕುರಿತು ತೀವ್ರವಾಗಿ ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ನ ಈ ಆಂತರಿಕ ಕದನದಿಂದಾಗಿ ಇಡೀ ಕರ್ನಾಟಕದಲ್ಲಿ ಸದ್ಯ ಆಡಳಿತಾತ್ಮಕ ಅಸ್ಥಿರತೆ, ಅರಾಜಕತೆ ಹಾಗೂ ಪರಸ್ಪರ ಅವಿಶ್ವಾಸದ ವಾತಾವರಣ ನಿರ್ಮಾಣವಾಗಿದ್ದು, ನಿನ್ನೆ ಮೊನ್ನೆಯಿಂದ ಇದು ಪರಕಾಷ್ಠೆಗೆ ತಲುಪಿದೆ ಎಂದು ಕಿಡಿಕಾರಿದ್ದಾರೆ.

ಬೆಳಗ್ಗೆ ಎದ್ದರೆ ಒಬಿಸಿ ಮಂತ್ರ, ಇದ್ದ ಒಬ್ಬ ಒಬಿಸಿ ಸಿಎಂಗೆ ಅಪಮಾನ!

ಕಾಂಗ್ರೆಸ್ ಪಕ್ಷದ ಇಬ್ಬಂದಿ ನೀತಿಯನ್ನು ಕಟುವಾಗಿ ಟೀಕಿಸಿದ ಜೋಶಿ, ಇವರು ದಿನಬೆಳಗಾದರೆ ಒಬಿಸಿ ಜಪ ಮಾಡುತ್ತಾರೆ. ಇಡೀ ದೇಶದಲ್ಲಿ ಕಾಂಗ್ರೆಸ್ ಆಡಳಿತದಲ್ಲಿರುವ ನಾಲ್ಕು ರಾಜ್ಯಗಳ ಪೈಕಿ ಮೂರು ಕಡೆ ಮೇಲ್ಜಾತಿಯವರೇ ಮುಖ್ಯಮಂತ್ರಿಗಳಾಗಿದ್ದಾರೆ. ಇದ್ದ ಒಬ್ಬ ಒಬಿಸಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರಿಗೆ ದಿನನಿತ್ಯ ತೊಂದರೆ ನೀಡಿ ಈಗ ಕುರ್ಚಿಯಿಂದ ಕೆಳಗಿಳಿಸಲು ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ, ಹಿಂದೆ ಲಿಂಗಾಯತ ಸಮುದಾಯದ ಧೀಮಂತ ನಾಯಕ ವೀರೇಂದ್ರ ಪಾಟೀಲ್ ಅವರಿಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಯಾವ ರೀತಿ ವಿಮಾನ ನಿಲ್ದಾಣದಲ್ಲೇ ಅಪಮಾನ ಮಾಡಿ ಇಳಿಸಿದ್ದರೋ, ಅದೇ ಹಳೇ ಚಾಳಿಯನ್ನು ಈಗ ಮಗ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರ ವಿಷಯದಲ್ಲಿ ಮರುಕಳಿಸಿದ್ದಾರೆ. ಇದು ರಾಹುಲ್ ಗಾಂಧಿಗೆ ವಂಶಪಾರಂಪರ್ಯವಾಗಿ ಬಂದಿರುವ ಬಳುವಳಿ ಎಂದು ತೀವ್ರ ವಾಗ್ದಾಳಿ ನಡೆಸಿದರು. ಮುಂದುವರಿದು, ಸಿದ್ದರಾಮಯ್ಯ ಅವರೇನು ಭಾರಿ ಪ್ರಾಮಾಣಿಕ ಎಂದಲ್ಲ, ಆದರೆ ಒಬ್ಬ ಮಾಸ್ ಲೀಡರ್ ಅನ್ನು ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.

ತುಷ್ಟೀಕರಣ-ಭ್ರಷ್ಟಾಚಾರದ ವಿರುದ್ಧ ಕಮಲ ಸಾರಥ್ಯ!

ಕಾಂಗ್ರೆಸ್ ಕುರ್ಚಿ ಫೈಟ್‌ನಿಂದ ಬಿಜೆಪಿಗೆ ರಾಜಕೀಯ ಲಾಭವಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸದ್ಯ ಆಡಳಿತ ಎಂಬುದು ಸಂಪೂರ್ಣ ಶೂನ್ಯವಾಗಿದೆ. ಇಲ್ಲಿ ಕೇವಲ ಭ್ರಷ್ಟಾಚಾರ ಮತ್ತು ಒಂದು ವರ್ಗದ ತುಷ್ಟೀಕರಣ ಮಾತ್ರ ನಡೆಯುತ್ತಿದೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಇಳಿಸಿ ಡಿ.ಕೆ. ಶಿವಕುಮಾರ್ ಬಂದರೂ ಇದೇ ಭ್ರಷ್ಟ ಆಡಳಿತವೇ ಮುಂದುವರಿಯಲಿದೆ. ಕಾಂಗ್ರೆಸ್‌ನ ವೈಫಲ್ಯದಿಂದಲೇ ನಾವು ಅಧಿಕಾರಕ್ಕೆ ಬರಬೇಕೆಂದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ದಿವ್ಯ ಮಾರ್ಗದರ್ಶನ ಹಾಗೂ ನಮ್ಮ ಸಕಾರಾತ್ಮಕ ಅಭಿವೃದ್ಧಿ ಚಿಂತನೆಗಳ ಮೂಲಕವೇ ನಾವು ಜನರ ವಿಶ್ವಾಸ ಗಳಿಸುತ್ತೇವೆ ಎಂದು ತಿಳಿಸಿದ್ದಾರೆ.
ಯಾವ ರೀತಿ ಇತ್ತೀಚಿನ ಚುನಾವಣೆಗಳಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಮಹಾರಾಷ್ಟ್ರದಲ್ಲಿ ಇತಿಹಾಸ ಬರೆದು ಬಿಜೆಪಿ ವಿಜಯಪತಾಕೆ ಹಾರಿಸಿದೆಯೋ, ಅದೇ ಮಾದರಿಯಲ್ಲಿ ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲೂ ಹಿಂದೆಂದೂ ಕಾಣದಂತಹ ಭಾರಿ ಪ್ರಬಲ ಬಹುಮತದೊಂದಿಗೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ಎಂದು ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net