ಹೋಬಳಿಯ ಕೆ.ಜಿ. ಹಳ್ಳಿ ಗ್ರಾಪಂ ವ್ಯಾಪ್ತಿಯ ಕರಡುಗುರ್ಕಿ, ಹುಲಿಗುಟ್ಟೆ, ಊರುಗುರ್ಕಿ ಜಂಗಾನಹಳ್ಳಿ ಸಮೀಪದ ಗುಡ್ಡದಲ್ಲಿ ಕಲ್ಲುಗಣಿಗಾರಿಕೆಗೆ ಅವಕಾಶ ನೀಡಿದ್ದು, ಪರವಾನಗಿ ಪಡೆದವರು ಜಂಗಾನಹಳ್ಳಿ ಸರ್ವೇ ನಂ.11 ಹಾಗೂ ಕರಡುಗುರ್ಕಿಯ ಸರ್ವೇ ನಂ.35ರಲ್ಲಿ ಗಣಿಗಾರಿಕೆ ಪ್ರಾರಂಭಿಸುತ್ತಿದ್ದು, ಗ್ರಾಮಸ್ಥರು ಆತಂಕ ಹೊರಹಾಕಿದ್ದಾರೆ. ಗಣಿಗಾರಿಕೆ ಜಾಗದಿಂದ 100 ಮೀ. ಅಂತರದಲ್ಲಿ ಗ್ರಾಮಗಳು ಇವೆ. ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆ ಹಾಗೂ ಗೋಮಾಳಗಳಿದ್ದು, ನೂರಾರು ಜಾನುವಾರುಗಳಿಗೆ ಮೇವಿನ ತಾಣವಾಗಿದೆ. ಕಲ್ಲುಗಣಿಗಾರಿಕೆ ಶುರು ಮಾಡಿದರೆ ಪರಿಸರ ನಾಶವಾಗುವ ಜತೆಗೆ ಗ್ರಾಮಸ್ಥರ ನೆಮ್ಮದಿ ಹಾಳಾಗುತ್ತದೆ. ಡೈನಮೈಟ್ ಬ್ಲಾಸ್ಟ್‌ಗಳಿಂದ ಗ್ರಾಮಗಳ ಮನೆಗಳು ಬಿರುಕು ಬಿಡುತ್ತವೆ. ಆದ್ದರಿಂದ ಪರವಾನಗಿ ರದ್ದುಪಡಿಸಿ ಇಲ್ಲಿನ ಜನರ ಜೀವ ಉಳಿಸಬೇಕು ಎಂದು ಗ್ರಾಪಂ ಸದಸ್ಯ ವಿಜಯಕುಮಾರ್ ಆಗ್ರಹಿಸಿದರು.