ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರವು 2025ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳ ಜತೆಗೆ ಇದೇ ಮೊದಲ ಬಾರಿಗೆ ಚುಟುಕು ಸಾಹಿತಿಗಳಿಗಾಗಿ ಎರಡು ದತ್ತಿ ಬಹುಮಾನ ಪ್ರಕಟಿಸಿದೆ. ‘ಅತ್ಯುತ್ತಮ ಪ್ರಕಾಶನ ಪ್ರಶಸ್ತಿ’ಗೆ ಪಲ್ಲವ ಪ್ರಕಾಶನ (ಹೊಸಪೇಟೆ) ಆಯ್ಕೆಯಾಗಿದ್ದು, ಪ್ರಶಸ್ತಿಯು ಒಂದು ಲಕ್ಷ ನಗದು ಒಳಗೊಂಡಿದೆ. ‘ಡಾ.ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ ಗೆ ಮೈಸೂರಿನ ಡಾ.ರಾಮೇಗೌಡ (ರಾಗೌ) ಭಾಜನರಾಗಿದ್ದಾರೆ. ಪ್ರಶಸ್ತಿಯು 75 ಸಾವಿರ ನಗದು ಹೊಂದಿದೆ. ‘ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಗೆ ಬೀದರ್ ಜಿಲ್ಲೆಯ ಹಾರಕೂಡಿನ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಆಯ್ಕೆಯಾಗಿದ್ದು, ಪ್ರಶಸ್ತಿಯು 50 ಸಾವಿರ ನಗದು ಒಳಗೊಂಡಿದೆ. ‘ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ ಗೆ ಮಂಗಳೂರಿನ ಡಾ.ಬಿ.ಶ್ರೀನಿವಾಸ ಕಕ್ಕಿಲಾಯ ಭಾಜನರಾಗಿದ್ದು, ಪ್ರಶಸ್ತಿಯು 25 ಸಾವಿರ ನಗದು ಹೊಂದಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ತಿಳಿಸಿದ್ದಾರೆ.