ಅಧಿಕಾರಿ ವಿರುದ್ಧ ಸಾರ್ವಜನಿಕರ ಆಕ್ರೋಶ

ಇಂಡಿ ಉಪ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಾರ್ವಜನಿಕರೊಂದಿಗೆ ವಾಗ್ವಾದ ಮಾಡುತ್ತಿರುವ ಉಪ ನೋಂದಣಾಧಿಕಾರಿ.
ಇಂಡಿ ಉಪ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಾರ್ವಜನಿಕರೊಂದಿಗೆ ವಾಗ್ವಾದ ಮಾಡುತ್ತಿರುವ ಉಪ ನೋಂದಣಾಧಿಕಾರಿ.
Published on

ಪ್ರಮುಖ ಮುಖ್ಯಾಂಶಗಳು

  • ರೈತರೊಂದಿಗೆ ತಕರಾರು
  • ಅಸಭ್ಯ, ಅಶ್ಲೀಲ ಭಾಷೆಗಳ ಬಳಕೆಯ ಆರೋಪ
  • ಶಾಸಕರಲ್ಲಿ ದೂರು
ಇಂಡಿ: ಸಾರ್ವಜನಿಕರೊಂದಿಗೆ ಸಮಾಧಾನದಿಂದ ವರ್ತಿಸಿ, ಅವರ ಕೆಲಸವನ್ನು ಕಾನೂನುಬದ್ಧವಾಗಿ ಮಾಡಿಕೊಡುವುದು ಸರ್ಕಾರಿ ಅಧಿಕಾರಿಗಳ ಕರ್ತವ್ಯ. ಆದರೆ ಇಂಡಿ ಉಪ ನೋಂದಾಣಾಧಿಕಾರಿ ವರ್ತನೆ ಮಿತಿಮೀರಿದ್ದು, ಅವರನ್ನು ಬದಲಿಸಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.
ಜನತೆಯ ಆರೋಪಕ್ಕೆ ಪೂರಕವೆನ್ನುವಂತೆ ಬುಧವಾರ ನಡೆದ ಘಟನೆಯೇ ಸಾಕ್ಷಿಯಾಗಿದೆ. ಸೊನಕನಹಳ್ಳಿ ಗ್ರಾಮದ ಭೀಮಾಶಂಕರ ವಿಲಾಸ ವಾಲಿಕಾರ ಎಂಬ ರೈತ ತಮ್ಮ ಜಮೀನಿನ ಪಹಣಿಯಲ್ಲಿ ಭೋಜ ದಾಖಲುಮಾಡಿಸಲು ಆನ್‌ಲೈನ್ ಅಪ್ಲಿಕೇಷನ್ ಹಾಕುವ ಸಂದರ್ಭ ಗ್ರಾಮ ಹೆಸರು ಸೊನಕನಹಳ್ಳಿ ಬದಲು ಬೆನಕನಹಳ್ಳಿ ಎಂದು ದಾಖಲಾಗಿತ್ತು.
ಊರಿನ ಹೆಸರಿನ ತಿದ್ದುಪಡಿಗೆ ಉಪ ನೋಂದಾಣಾಧಿಕಾರಿ ಅಂಜಲಿ ಸಿ. ಅವರನ್ನು ಭೇಟಿಯಾಗಿ ಅರ್ಜಿ ಹಾಕುವಾಗ ತಪ್ಪಾಗಿದೆ. ಅದನ್ನು ತಿದ್ದುಪಡಿ ಹೇಗೆ ಮಾಡಬೇಕು? ಎಂದು ರೈತ ಭೀಮಾಶಂಕರ ವಾಲಿಕಾರ ಕೇಳಿದ್ದಾರೆ.
ಅಷ್ಟಕ್ಕೇ ಅವರಿಗೆ ಅಸಭ್ಯ, ಅಶ್ಲೀಲ ಪದವನ್ನು ಬಳಕೆಮಾಡಿ ಬೈದಿದ್ದಾರೆ ಎಂದು ರೈತ ಆರೋಪಿಸುತ್ತಾರೆ. ಅದೇ ಸಂದರ್ಭದಲ್ಲಿ ಆನ್‌ಲೈನ್ ಅಪ್ಲಿಕೇಶನ್ ಹಾಕಿದ್ದ ಅಂಗಡಿಯವನೂ ‘ಮೇಡಂ ಅದನ್ನು ತಿದ್ದುಪಡಿ ಮಾಡಲು ನಿಮ್ಮಲ್ಲಿ ಅವಕಾಶವಿದೆ’ ಮಾಡಿಕೊಡಿ ಎಂದು ಹೇಳಿದರೆ, ಆತನ ಮೇಲೂ ರೇಗಾಡಿ, ‘ಪೊಲೀಸರನ್ನು ಕರೆಸಿ ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತೇನೆ’ ಎಂದು ಕೂಗಾಡಿದ್ದಾರೆ.
ಇದೊಂದು ಘಟನೆಯಷ್ಟೇ, ನಿತ್ಯವೂ ಉಪ ನೋಂದಣಾಧಿಕಾರಿಯ ದೌರ್ಜನ್ಯದ ದುರಹಂಕಾರದ ವರ್ತನೆಗೆ ಸಾರ್ವಜನಿಕರು ಬೇಸತ್ತು ಹೋಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದ್ದಾರೆ.
"

ಇಂಡಿ ಉಪ ನೋಂದಣಾಧಿಕಾರಿಗಳು ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ ಮಾಡುತ್ತಿದ್ದಾರೆ ಎಂದು ಸಾಕಷ್ಟು ಜನರಿಂದ ಆರೋಪಗಳು ಕೇಳಿಬಂದಿದೆ. ಅಲ್ಲಿ ನನ್ನ ಕ್ಷೇತ್ರದ ಜನರೇ ಹೆಚ್ಚಿಗೆ ಬರುತ್ತಾರೆ. ಅವರು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು. ಇಲ್ಲವಾದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಬೇಕಾಗುತ್ತದೆ.

ವಿಠ್ಠಲ ಕಟಕಧೋಂಡ, ಶಾಸಕರು, ನಾಗಠಾಣ ಮತಕ್ಷೇತ್ರ.

ಉಪ ನೋಂದಣಾಧಿಕಾರಿ ಅಂಜಲಿ ಸಿ. ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಲ್ಲದೆ ಏಜೆಂಟರ ಮೂಲಕ ಕಾರ್ಯ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಅವರನ್ನು ಕೂಡಲೆ ಸರ್ಕಾರ ಅಮಾನತು ಮಾಡಬೇಕು.

ಎಸ್.ಬಿ. ಕೆಂಬೋಗಿ, ಜಿಲ್ಲಾಧ್ಯಕ್ಷರು ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ).

ಉಪ ನೋಂದಣಿ ಕಚೇರಿಯಲ್ಲಿ ಏಜೆಂಟರ ಹಾವಳಿ

ಉಪ ನೋಂದಣಿ ಕಚೇರಿಯಲ್ಲಿ ಯಾವುದೇ ಕೆಲಸ ಆಗಬೇಕಾದರೂ ಏಜೆಂಟರ ನೆರವು ಬೇಕೇಬೇಕು ಎಂಬಂತಾಗಿದೆ. ನೇರವಾಗಿ ಹೋದರೆ ಇಲ್ಲದ ಸಬೂಬು ಹೇಳಿ ಕಳಿಸುತ್ತಾರೆ ಎಂಬುದು ನಾಗರಿಕರ ಆರೋಪವಾಗಿದೆ. ಏಜೆಂಟರ ಮೂಲಕ ಹೋದರೆ ನೀರಾವರಿ ಜಮೀನು ಇದ್ದರೂ ಅದಕ್ಕೆ ಒಣ ಬೇಸಾಯದ ವ್ಯಾಲ್ಯೂವೇಶನ್ ಮೂಲಕ ಖರೀದಿ ಹಾಕುತ್ತಾರೆ. ಅದೇ ನೇರವಾಗಿ ಹೋದರೆ ನೀರಾವರಿ ವ್ಯಾಲ್ಯೂವೇಶನ್ ಹಾಕಿ ಹೆಚ್ಚುವರಿ ಹಣಕ್ಕೆ ಚಲನ್ ತೆಗೆಯುವಂತೆ ತಿಳಿಸುತ್ತಾರೆ. ಅನಿವಾರ್ಯವಾಗಿ ಜನತೆ ಏಜೆಂಟರ ಮುಖಾಂತರೇ ಕೆಲಸ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂಬುದು ಹಲವು ಜನರ ಆರೋಪವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net