21ರಂದು ಸಿದ್ದರಬೆಟ್ಟದಲ್ಲಿ ಜನಜಾಗೃತಿ ಧರ್ಮ ಸಮಾರಂಭ

Public awareness religious ceremony at Siddarbetta on the 21st
Public awareness religious ceremony at Siddarbetta on the 21st
Published on
ಕೊರಟಗೆರೆ: ತಾಲೂಕಿನ ಪವಿತ್ರ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ಬಾಲೇಹೊನ್ನೂರು ಖಾಸಾ ಶಾಖಾ ಮಠದ 20ನೇ ವಾರ್ಷಿಕೋತ್ಸವದ ಅಂಗವಾಗಿ ಜೂ.21ರಂದು ಜನಜಾಗೃತಿ ಧರ್ಮ ಸಮಾರಂಭ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಜಗಜ್ಯೋತಿ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ದಶಕಗಳಿಂದ ಸಮಾಜಮುಖಿ ಹಾಗೂ ಧಾರ್ಮಿಕ ಚಟುವಟಿಕೆಗಳ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಶ್ರೀಮಠವು ಈ ಬಾರಿಯೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಸಿದ್ದಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಜತೆಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ "ಗುರು ಸೇವಾ ರಕ್ಷ ರತ್ನ ಪ್ರಶಸ್ತಿ" ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ವಿವಾಹ ಆಯೋಜಿಸಲಾಗಿದ್ದು, ವಿವಾಹವಾಗಲು ಇಚ್ಛಿಸುವ ಅರ್ಹ ವಧು-ವರರು ಅಗತ್ಯ ದಾಖಲೆಗಳೊಂದಿಗೆ ಶ್ರೀಮಠದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.
ಜೂನ್​ 21ರಂದು ನಡೆಯುವ ಜನಜಾಗೃತಿ ಧರ್ಮ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ವಹಿಸಲಿದ್ದಾರೆ. ವೇದಿಕೆಯಲ್ಲಿ ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರದ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಿಸಿಎಂ ಡಾ.ಜಿ.ಪರಮೇಶ್ವರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಮಧುಗಿರಿ ಶಾಸಕ ಕೆ.ಎನ್​.ರಾಜಣ್ಣ, ಆಂಧ್ರ ಪ್ರದೇಶದ ಮಾಜಿ ಶಾಸಕ ರಘುವೀರರೆಡ್ಡಿ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ನೂತನ ಸಂಸತ ಶಾಲಾ ಕೊಠಡಿಗಳ ಉದ್ಘಾಟನೆ, ವಧು-ವರರಿಗೆ ಮಾಂಗಲ್ಯ ವಿತರಣೆ, ವಸ್ತ್ರ ವಿತರಣೆ, ರೈತರಿಗೆ ಸಸಿ ವಿತರಣೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮ ನಡೆಯಲಿದ್ದು. ವಿಶೇಷ ಆಹ್ವಾನಿತರಾಗಿ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್​ ಗೌಡ, ಮಾಜಿ ಶಾಸಕ ಗುಂಡಮಾಲ ತಿಪ್ಪೇಸ್ವಾಮಿ, ವಿಧಾನ ಪರಿಷತ್​ ಸದಸ್ಯರಾದ ಆರ್​.ರಾಜೇಂದ್ರ, ಎಂ.ಚಿದಾನಂದ ಗೌಡ, ಮಾಜಿ ಸಂಸದರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಚ್​.ಕೆ.ಮಹಾಲಿಂಗಯ್ಯ, ಎಲ್​.ರಾಜಣ್ಣ, ವೀರಭದ್ರಯ್ಯ, ಆರ್​.ಎಸ್​.ರಾಜಣ್ಣ, ರುದ್ರೇಶ್​, ಪವನ್​ ಕುಮಾರ್​, ಸದಾಶಿವಯ್ಯ, ರವಿಕುಮಾರ್​, ಮಲ್ಲಣ್ಣ, ದರ್ಶನ್​ ಬಾಲಾಜಿ, ಕೆ.ಎನ್​.ರಘು, ಆರಾಧ್ಯ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net