ತುಮಕೂರು: ನಮ್ಮ ಸುತ್ತಮುತ್ತಲು ಇರುವ ಕನಿಷ್ಟ ಮೂಲಸೌಕರ್ಯವನ್ನೂ ನೋಡದ ಬಡ ಕುಟುಂಬಗಳಿಗೆ ನೆರವು ನೀಡುವ ಮೂಲಕ ಹೊಸ ವರ್ಷಾಚರಣೆ ಮಾಡಿದ ಕಾಲೇಜು ವಿದ್ಯಾರ್ಥಿಗಳ ಹೊಸ ಆಲೋಚನೆ ಗಮನ ಸೆಳೆಯಿತು.
ಚಿಕ್ಕನಾಯಕನಹಳ್ಳಿ ತಾಲೂಕು ಬೆಳಗುಲಿ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಗುರುವಾರ ಗಾಂಧಿನಗರದ ಕೈಮರದಲ್ಲಿ ವಾಸವಿದ್ದ 14 ಅಲೆಮಾರಿ ಕುಟುಂಬಗಳ ಗುಡಿಸಲುಗಳಿಗೆ ತೆರಳಿ ಅವರಿಗೆ ಅಗತ್ಯವಾಗಿದ್ದ ನೀರಿನ ಟ್ಯಾಂಕ್ನ್ನು ಸ್ವಂತ ಹಣದಿಂದ ಕೊಡಿಸಿ ಸಾಮಾಜಿಕ ಕಾರ್ಯ ಕೈಗೊಂಡಿರುವುದು ಮಾದರಿ ಎನ್ನಿಸಿದೆ.
ಕೈಮರದಲ್ಲಿ ಇತ್ತೀಚೆಗೆ ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿಬಿದ್ದು ದಿನಬಳಕೆ ವಸ್ತುಗಳೆಲ್ಲವೂ ಸಂಪೂರ್ಣ ಸುಟ್ಟು ಭಸ್ಮವಾಗಿದ್ದವು. ಜೀವನಾಧಾರ ವಸ್ತುಗಳು, ಅಗತ್ಯ ದಾಖಲೆಗಳ ಜತೆಗೆ ಭವಿಷ್ಯದ ಕನಸುಗಳನ್ನೇ ಕಳೆದುಕೊಂಡಿದ್ದ ಈ ಕುಟುಂಬಗಳಿಗೆ ಸರ್ಕಾರದ ನೆರವು ಸಿಗದೆ ಕಂಗಾಲಾಗಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತೋರಿರುವ ಮಾನವೀಯತೆ ನಾಗರೀಕ ಸಮಾಜದ ಕಣ್ಣು ತೆರೆಸಬಹುದಾಗಿದೆ.
ಬರಗೂರು-ಬೆಳಗುಲಿ ಸ್ವತಂತ್ರ$್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸಮಾಜಕಾರ್ಯ ಗಮನ ಸೆಳೆದಿದ್ದು, ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಬೆಂಕಿ ಅವಘಡಕ್ಕೆ ಒಳಗಾದ ಕುಟುಂಬಗಳ ಸಮಸ್ಯೆಗಳನ್ನು ಅರಿತು, ಅವರ ಪ್ರಾಥಮಿಕ ಅಗತ್ಯವಾದ ಕುಡಿಯುವ ನೀರಿನ ಕೊರತೆಗೆ ಸ್ಪಂದಿಸಿದ್ದಾರೆ.
ಮಾನವೀಯ ನೆಲೆಯಲ್ಲಿ ಸ್ವಯಂ ಪ್ರೇರಿತರಾದ ವಿದ್ಯಾರ್ಥಿಗಳು ಹೊಸ ವರ್ಷಾಚರಣೆಗೆ ಖರ್ಚು ಮಾಡುತ್ತಿದ್ದ ಹಣವನ್ನು ಬಡಕುಟುಂಬದ ನೆರವಿಗೆ ನೀಡಿದ್ದಾರೆ. ಇದಕ್ಕಾಗಿ ಕಾಲೇಜು ಆಡಳಿತ ಹಾಗೂ ಉಪನ್ಯಾಸಕರ ಸಹಕಾರದೊಂದಿಗೆ ಕುಡಿಯುವ ನೀರಿನ ಟ್ಯಾಂಕ್ನ್ನು ಅಲೆಮಾರಿ ಕುಟುಂಬಗಳಿಗೆ ಒದಗಿಸುವ ಮೂಲಕ ನೆರವಿನ ಕೈ ಚಾಚಿದ್ದಾರೆ.
ಪ್ರಾಚಾರ್ಯ ಆರ್.ಧನಂಜಯಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕದ ಜ್ಞಾನಕ್ಕೆ ಸೀಮಿತರಾಗಬಾರದು. ಸಮಾಜದ ನೋವಿಗೆ ಸ್ಪಂದಿಸುವ ಹೃದಯ ಮತ್ತು ಸೇವಾ ಮನೋಭಾವವೇ ನಿಜವಾದ ಶಿಕ್ಷಣ. ಅದನ್ನು ನಮ್ಮ ಮಕ್ಕಳು ಇಂದು ಸಾಬೀತು ಮಾಡಿದ್ದಾರೆ' ಇವವ ಈ ಸಮಾಜಕಾರ್ಯ ನಮಗೂ ಹೆಮ್ಮೆ ಎನ್ನಿಸಿದೆ ಎಂದರು.
ಅಲೆಮಾರಿ ಕುಟುಂಗಳ ಜತೆ ಜನ್ಮದಿನ ಆಚರಿಸಿಕೊಂಡು ವಿದ್ಯಾರ್ಥಿನಿ ಜಿ.ಕೆ.ನಾಗಮಣಿ ಮಾತನಾಡಿ, ಹೊಸ ವರ್ಷ ಕೇವಲ ನಮ್ಮ ಖುಷಿಯ ಆಚರಣೆಗೆ ಸೀಮಿತವಾಗದೆ ಸಮಾಜಿಕ ಸಮಸ್ಯೆಗೆ ಮಿಡಿಯುವಂತಾಗಲಿ ಎಂಬ ಆಶಯದಿಂದ ನಮ್ಮೆಲ್ಲಾ ಸ್ನೇಹಿತರೂ ಚರ್ಚಿಸಿ ನಮ್ಮ ಕೈಲಾದ ಸಹಾಯವನ್ನು ಮಾಡಲು ಯೋಜಿಸಿದೆವು, ಉಪನ್ಯಾಸಕರ ಮಾರ್ಗದರ್ಶನದಲ್ಲಿ ಒಂದು ಸಣ್ಣ ಕಾರ್ಯ ಮಾಡಿದ್ದು ಈ ದಿನ ಸಾರ್ಥಕವಾಗಿದೆ ಎಂದರು.
ಉಪನ್ಯಾಸಕರಾದ ಆರ್.ಮಹದೇವ, ಟಿ.ಡಿ.ಕೃಷ್ಣಕಾಂತ್, ಬಿ.ಎನ್.ನಂದಿನಿ, ಬಿ.ನಂದನ, ಈ.ರಾಜಣ್ಣ, ಎ.ಬಿ.ಮಂಜುನಾಥ್ ವಿದ್ಯಾರ್ಥಿಗಳಿಗೆ ಸಾಥ್ ನೀಡಿದ್ದರು. ಅಲೆಮಾರಿಗಳಾದ ರಂಗಣ್ಣ, ಗುಂಡ, ನಾಗಮ್ಮ, ತಿಮ್ಮರಾಜು, ಶ್ರೀನಿವಾಸ್ ಮತ್ತಿತರರು ಇದ್ದರು.