ದೃಷ್ಟಿ ಕೇಂದ್ರಗಳಲ್ಲಿ ನೇತ್ರಾಧಿಕಾರಿಗಳನ್ನು ಒದಗಿಸಿ - ಆರೋಗ್ಯ ಇಲಾಖೆ ಆದೇಶ

ಆಶಾಕಿರಣ ಯೋಜನೆಯಡಿ ದೃಷ್ಟಿ ಕೇಂದ್ರಗಳಿಗೆ ನೇತ್ರಾಧಿಕಾರಿಗಳನ್ನು ಒದಗಿಸಲು ಆರೋಗ್ಯ ಇಲಾಖೆ ಆದೇಶ
ಆಶಾಕಿರಣ ಯೋಜನೆಯಡಿ ದೃಷ್ಟಿ ಕೇಂದ್ರಗಳಿಗೆ ನೇತ್ರಾಧಿಕಾರಿಗಳನ್ನು ಒದಗಿಸಲು ಆರೋಗ್ಯ ಇಲಾಖೆ ಆದೇಶ
Published on

ಪ್ರಮುಖ ಮುಖ್ಯಾಂಶಗಳು

  • ಆಶಾ ಕಿರಣ ಯೋಜನೆ
  • ದೃಷ್ಟಿ ಕೇಂದ್ರಗಳಿಗೆ ನೇತ್ರಾಧಿಕಾರಿಗಳು
  • ಆರೋಗ್ಯ ಇಲಾಖೆ ಆದೇಶ
ಬೆಂಗಳೂರು: ‘ದೃಷ್ಟಿ ಕೇಂದ್ರ’ಗಳಲ್ಲಿ ನೇತ್ರಾಧಿಕಾರಿಗಳನ್ನು ಒದಗಿಸಲು ಕಡಿಮೆ ಕಾರ್ಯಕ್ಷಮತೆ ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ನೇತ್ರಾಧಿಕಾರಿಗಳನ್ನು ಸ್ಥಳಾಂತರಿಸುವಂತೆ ಸೂಚಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಹೊಸ ವಿಧಾನದ ಅಡಿಯಲ್ಲಿ ಆಶಾಕಿರಣ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ‘ದೃಷ್ಟಿ ಕೇಂದ್ರ’ಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ನೇತ್ರಾಧಿಕಾರಿಗಳ ಲಭ್ಯತೆ ಕಲ್ಪಿಸಲು, ಪ್ರಸ್ತುತ ಕಡಿಮೆ ಕಾರ್ಯಕ್ಷಮತೆ ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ನೇತ್ರಾಧಿಕಾರಿ ಹುದ್ದೆಗಳನ್ನು, ನೇತ್ರಾಧಿಕಾರಿ ಹುದ್ದೆಗಳು ಇಲ್ಲದಿರುವ ಕೇಂದ್ರಗಳಿಗೆ ಸ್ಥಳಾಂತರಿಸಲು ಇಲಾಖೆ ಸೂಚಿಸಿದೆ.
ಸಮುದಾಯ ಆರೋಗ್ಯ ಕೇಂದ್ರಗಳಿಗೆ - 83, ತಾಲೂಕು ಆಸ್ಪತ್ರೆಗಳಿಗೆ - 34 ಹಾಗೂ ವರ್ಷಕ್ಕೆ 200ಕ್ಕೂ ಹೆಚ್ಚು ಕಣ್ಣಿನ ಪೊರೆ ಶಸಚಿಕಿತ್ಸೆಗಳನ್ನು ನಡೆಸುವ ತಾಲೂಕು ಆಸ್ಪತ್ರೆಗಳಿಗೆ -30 ಹುದ್ದೆಗಳು, ಜಿಲ್ಲಾ ಆಸ್ಪತ್ರೆ ರಾಮನಗರಕ್ಕೆ - 2 ಹುದ್ದೆ ಹಾಗೂ ಜಿಲ್ಲಾ ಆಸ್ಪತ್ರೆ ಬಳ್ಳಾರಿ ಇಲ್ಲಿಗೆ - 1 ಹುದ್ದೆಯನ್ನು ಸ್ಥಳಾಂತರಿಸಲು ಅನುಮತಿ ನೀಡಿ ಈ ಆದೇಶ ಹೊರಡಿಸಿದೆ.

ಹಿರಿಯ ನಾಗರಿಕರಿಗೆ ಉಚಿತ ಕನ್ನಡಕ:

ಪ್ರತಿ ವರ್ಷವು ಜಿಲ್ಲೆಗಳ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ನೇತ್ರ ತಪಾಸಣ ಶಿಬಿರ, ಕಣ್ಣಿನ ಪೊರೆ ಶಸ ಚಿಕಿತ್ಸೆ, ಶಾಲಾ ಮಕ್ಕಳ ನೇತ್ರ ತಪಾಸಣೆ ಮತ್ತು ಕನ್ನಡಕ ವಿತರಣೆ ಹಾಗೂ ಬಿ.ಪಿ.ಎಲ್ ಕಾರ್ಡ್ ಹೊಂದಿರುವ 45 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ಕನ್ನಡಕ ವಿತರಣೆ, ಇತರೆ ಚಟುವಟಿಕೆಗಳು ನಡೆಯುತ್ತಿದ್ದು, ಈ ಎಲ್ಲಾ ಚಟುವಟಿಕೆಗಳಿಗೆ ನೇತ್ರಾಧಿಕಾರಿಗಳ ಅವಶ್ಯಕತೆ ಇರುತ್ತದೆ.

282 ಖಾಲಿ ಹುದ್ದೆಗಳು:

ರಾಜ್ಯದಲ್ಲಿ ಜಿಲ್ಲೆಗಳಿಂದ ಪಡೆದ ಮಾಹಿತಿಯ ಪ್ರಕಾರ ಒಟ್ಟು 619 ನೇತ್ರಾಧಿಕಾರಿಗಳ ಹುದ್ದೆ ಮಂಜೂರಾಗಿದ್ದು, ಪ್ರಸ್ತುತ ಒಟ್ಟಾರೆ 282 ಹುದ್ದೆಗಳು ಖಾಲಿ ಇರುತ್ತವೆ. ಕಾರ್ಯಕ್ರಮದ ಪ್ರಗತಿಯನ್ನು ಇನ್ನು ಹೆಚ್ಚು ಸಾಧಿಸಲು ಹಾಗು ಸಾರ್ವಜನಿಕರಲ್ಲಿ ಕಣ್ಣುಗಳ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದರಲ್ಲಿ ನೇತ್ರಾಧಿಕಾರಿಗಳ ಲಭ್ಯತೆ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಇಲಾಖೆ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net