ಯಾದಗಿರಿ ನಗರಸಭೆಯಲ್ಲಿ ಬುಧವಾರ ಕರೆದಿದ್ದ ಪಿಎಂ ಸ್ವ&ನಿಧಿ ಯೋಜನೆಯ ಲೋಕ ಕಲ್ಯಾಣ ಮೇಳ ನಿಮಿತ್ತ ಆಯೋಜಿಸಿದ್ದ ಬ್ಯಾಂಕರ್ಸ್ ಸಭೆಯಲ್ಲಿ ಪೌರಾಯುಕ್ತ ಉಮೇಶ ಚವ್ಹಾಣ್, ಶಾಂತಿಕುಮಾರಿ, ವಿಠೋಬ್ ಯಾದವ, ಸುಭಾಷಚಂದ್ರ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪೌರಾಯುಕ್ತ ಉಮೇಶ ಚವ್ಹಾಣ್ ಸೂಚನೆ
ಯಾದಗಿರಿಯಲ್ಲಿ ಬ್ಯಾಂಕರ್ಸ್ ಸಭೆ
ಯಾದಗಿರಿ: ಪ್ರಧಾನ ಮಂತ್ರಿ ಆತ್ಮ ನಿರ್ಭರ್ ನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳು ತಮ್ಮ ವ್ಯಾಪಾರ ವಿಸ್ತರಿಸಿಕೊಳ್ಳಲು 3 ಕಂತುಗಳಲ್ಲಿ ಕೇಂದ್ರ ಸರ್ಕಾರ ಸಾಲ ಸೌಲಭ್ಯವನ್ನು ಒದಗಿಸಿಕೊಟ್ಟಿದೆ ಎಂದು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್ ಹೇಳಿದರು.
ನಗರಸಭೆ ಬುಧವಾರ ಪಿಎಂ ಸ್ವ&ನಿಧಿ ಯೋಜನೆಯ ಲೋಕ ಕಲ್ಯಾಣ ಮೇಳ ನಿಮಿತ್ತ ಆಯೋಜಿಸಿದ್ದ ಬ್ಯಾಂಕರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ ಸಾಲಕ್ಕಾಗಿ ಬ್ಯಾಂಕ್ಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ನಿಗದಿತ ಅವಧಿಯೊಳಗಾಗಿ ಸಾಲ ಸೌಲಭ್ಯ ಒದಗಿಸಿಕೊಟ್ಟಲ್ಲಿ ಬೀದಿ ವ್ಯಾಪಾರಿಗಳಿಗೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 2999 ಗುರಿ ನಿಗಧಿಪಡಿಸಲಾಗಿದ್ದು, ಈವರೆಗೆ 1750 ಬೀದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ನಾವು ಇನ್ನೂ ಉಳಿದ ಗುರಿ ಸಾಧಿಸಬೇಕಾದರೆ ಬೀದಿ ವ್ಯಾಪಾರಿಗಳಿಂದ ಅರ್ಜಿ ಸ್ವೀಕರಿಸಬೇಕು. ಅದಕ್ಕಾಗಿ ಸಾಲ ಸೌಲಭ್ಯದ ಬಗ್ಗೆ ಅರಿವು ಮೂಡಿಸುವಂತ ಕಾರ್ಯಕ್ರಮ ಆಯೋಜಿಸಬೇಕು ಎಂದು ಹೇಳಿದರು.
ಸ್ವಚ್ಚ ಭಾರತ ಮಿಷನ್ ಕಸ ಸಂಗ್ರಹ ವಾಹನದ ಮೂಲಕ ಮಾರುಕಟ್ಟೆ ಪ್ರದೇಶ, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ, ಗಂಜ್ ಪ್ರದೇಶಗಳಲ್ಲಿ ಪ್ರಚಾರ ಮಾಡಬೇಕು. ಹಾಗೂ ಬ್ಯಾಂಕ್ಗಳಲ್ಲಿ ಸಾಲ ವಿಲೇವಾರಿಗಾಗಿ ಬಾಕಿ ಇರುವ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಪ್ರಗತಿಗೆ ತಾವು ಸಹಕರಿಸಬೇಕು ಎಂದರು.
ಎಸ್ಬಿಐ ಬ್ಯಾಂಕ್ನ ವ್ಯವಸ್ಥಾಪಕ ಶಾಂತಿಕುಮಾರಿ ಮಾತನಾಡಿ, ಇದು ಪ್ರಧಾನ ಮಂತ್ರಿ ಹೆಸರಿನಲ್ಲಿರುವ ಕೇಂದ್ರ ಸರ್ಕಾರದ ಪ್ರಾಯೋಜಿಕತ್ವದ ಯೋಜನೆಯಾಗಿದ್ದು, ಬೀದಿ ವ್ಯಾಪಾರಿಗಳಿಗೆ ಅವರ ವ್ಯಾಪಾರವನ್ನು ವಿಸ್ತರಿಸಕೊಳ್ಳಲು ಒಂದು ಚಿಕ್ಕ ಆರ್ಥಿಕ ಸಹಾಯವಾಗಿದೆ. ಬ್ಯಾಂಕ್ಗಳಿಂದ ನಿಗದಿತ ಅವಧಿಯೊಳಗಾಗಿ ಸಾಲ ವಿತರಣೆಯಾಗುತ್ತದೆ. ಬ್ಯಾಂಕ್ಗಳಲ್ಲಿರುವ ಸಿಬ್ಬಂದಿ ಕೊರತೆ ಹಾಗೂ ವೆಬ್ ಸೈಟ್ನಲ್ಲಿ ಹಾಗೂ ಇನ್ನತರೆ ತಾಂತ್ರಿಕ ಲೋಪದೋಷಗಳಿಂದಾಗಿ ಸಾಲ ನೀಡುವಲ್ಲಿ ವಿಳಂಭವಾಗುತ್ತದ್ದು, ಆದಾಗ್ಯೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ವ್ಯಾಪಾರಿಗಳಿಗೆ ಸಾಲ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಲೀಡ್ ಬ್ಯಾಂಕ್ ಪ್ರತಿನಿಧಿ ಕುಮಾರಸ್ವಾಮಿ, ಅಮೀರ ಪಟೇಲ್, ನಗರದ ವಿವಿಧ ಬ್ಯಾಂಕ್ಗಳ ವ್ಯವಸ್ಥಾಪಕರು, ನಗರಸಭೆ ಡೇ&ನಲ್ಮ್ ಶಾಖೆಯ ನಾಗರಾಜ, ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಸಾಬಮ್ಮ, ಪ್ರೇಮಾ ಪಾಟೀಲ್ ಹಾಗೂ ಅವ್ವಮ್ಮ ಇತರರಿದದ್ದರು. ಸಾಬಮ್ಮ ವಂದಿಸಿದರು.
ಫಲಾನುಭವಿಗಳಿಗೆ ಅನಗತ್ಯವಾಗಿ ತಿರುಗಾಡಿಸಬೇಡಿ
ಜಿಲ್ಲಾ ಕೌಶಲ ಮಿಷನ್ ನಗರ ಅಭಿಯಾನ ವ್ಯವಸ್ಥಾಪಕ ವಿಠೋಬ್ ಯಾದವ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕೇಲ ಬ್ಯಾಂಕ್ಗಳು ತೀವ್ರಗತಿಯಲ್ಲಿ ಸಾಲ ಸೌಲಭ್ಯ ಒದಗಿಸಿಕೊಡುತ್ತವೆ ಹಾಗೂ ಇನ್ನೂ ಕೆಲ ಬ್ಯಾಂಕ್ಗಳಲ್ಲಿ ಅರ್ಜಿಗಳು ಸುಮಾರು 2ರಿಂದ 3ತಿಂಗಳುಗಳವರೆಗೆ ವಿಲೇವಾರಿಗಾಗಿ ಬಾಕಿ ಇರುತ್ತವೆ. ಸಮರ್ಪಕವಾದ ಕಾರಣ ಇದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಬಹುದು. ಅರ್ಹತೆ ಇರುವ ಅರ್ಜಿಗಳಿಗೆ ಯಾವುದೇ ವಿಳಂಬವಿಲ್ಲದೆ ಸಾಲ ನೀಡಬೇಕು. ಆನ್ಲೈನ್ನಲ್ಲಿ ಯಾವುದೇ ತಾಂತ್ರಿಕ ಲೋಪದೋಷ ಇದ್ದಲ್ಲಿ, ಅವುಗಳ ಬಗ್ಗೆ ತಿಳಿಸಿದಲ್ಲಿ ನಾವು ಮೇಲಧಿಕಾರಿಗಳ ಸಹಾಯದಿಂದ ಸರಿಪಡಿಸುತ್ತೇವೆ. ಅನಗತ್ಯವಾಗಿ ಫಲಾನುಭವಿಗಳನ್ನು ಬ್ಯಾಂಕ್ಗಳಿಗೆ ತಿರುಗಾಡಿಸಿದಲ್ಲಿ ಫಲಾನುಭವಿಯು ಸಾಲ ಪಡೆಯುವಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ಹಾಗೂ ಕಟ್ಬಾಕಿ ಇರುವ ಫಲಾನುಭವಿಗಳ ವಿವರ ನೀಡಿದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಬಾಕಿ ಸಾಲ ಪಾವತಿಸುವಂತೆ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಫಲಾನುಭವಿಗಳಿಗೆ ಮನವರಿಕೆ ಮಾಡುತ್ತಾರೆ ಎಂದು ತಿಳಿಸಿದರು.
ಹೆಚ್ಚಿನ ದಾಖಲಾತಿಗಳ ಅಗತ್ಯ ಇರುವುದಿಲ್ಲ
ಕರ್ನಾಟಕ ಗ್ರಾಮೀಣ ಪ್ರಾದೇಶಿಕ ಬ್ಯಾಂಕ್ನ ಅಧಿಕಾರಿ ಸುಭಾಶಚಂದ್ರ ಬಿ. ಮಾತನಾಡಿ, ಬೀದಿ ವ್ಯಾಪಾರಿಗಳು ಈ ಯೋಜನೆಯಡಿ ಸುಲಭವಾಗಿ ಸಾಲ ಪಡೆಯಬಹುದು. ಹೆಚ್ಚಿನ ದಾಖಲಾತಿಗಳ ಅವಶ್ಯಕತೆ ಇರುವುದಿಲ್ಲ. ಬ್ಯಾಂಕ್ಗಳಲ್ಲಿ ಕೆಲವೊಂದು ಕಾರಣಗಳಿಂದಾಗಿ ಸಾಲ ವಿತರಣೆ ವಿಳಂಭವಾಗುತ್ತದೆ. ಆದಷ್ಟು ನಮ್ಮ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್ಗಳಲ್ಲಿ ಬಾಕಿ ಇರುವ ಅರ್ಜಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ನಗರಸಭೆಯಲ್ಲಿ ಪ್ರಥಮ ಹಂತದಲ್ಲಿ ಶೇ.59, ಎರಡನೇ ಹಂತದಲ್ಲಿ ಶೇ.90 ಹಾಗೂ ಮೂರನೇ ಹಂತದಲ್ಲಿ ಶೇ.87 ಬೀದಿ ವ್ಯಾಪಾರಿಗಳಿಗೆ ವಿವಿಧ ಹಂತಗಳಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರ ನಿಗದಿಪಡಿಸಿದ ಗುರಿಗಳಿಗೆ ಅನುಗುಣವಾಗಿ ಅರ್ಜಿಗಳನ್ನು ಸ್ವೀಕರಿಸಿ ಸಂಬಂಧಿಸಿದ ಬ್ಯಾಂಕ್ಗಳಿಗೆ ಸಲ್ಲಿಸಬೇಕು. ಆಯಾ ಬ್ಯಾಂಕ್ನ ವ್ಯವಸ್ಥಾಪಕರುಗಳು ವಿಳಂಬ ಮಾಡದೆ ಅರ್ಹತೆ ಹೊಂದಿರುವ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಿಕೊಡಬೇಕು. ಈ ಯೋಜನೆಯ ಪ್ರಗತಿಯಲ್ಲಿ ಬ್ಯಾಂಕ್ನ ಸಹಕಾರ ಬಹಳ ಪ್ರಮುಖವಾಗಿದ್ದು, ಆದ್ದರಿಂದ ಫಲಾನುಭವಿಗಳನ್ನು ಅನಾವಶ್ಯಕವಾಗಿ ಬ್ಯಾಂಕಿಗೆ ಅಲೆದಾಡಲು ಅವಕಾಶ ಮಾಡಿಕೊಡದೇ ಸಾಲ ನೀಡಬೇಕು ಎಂದು ಜಿಲ್ಲಾ ಕೌಶಲ ಮಿಷನ್ ಸಹಾಯಕ ನಿರ್ದೇಶಕ ಬಸಪ್ಪ ತಿಳಿಸಿದರು.