

ಹೊಸಕೋಟೆ :
ಪತಿ ರಂಗಪ್ಪ ಮೃತಪಟ್ಟಿದ್ದಾನೆ. ನಾನು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದೇನೆ. ವಯಸ್ಸೂ ಆಗಿದೆ. ಮೂರು ದಶಕದ ಹಿಂದೆಯೇ ನನಗೆ ನೀಡಿರುವ ಸಾಗುವಳಿ ಚೀಟಿಗೆ ಖಾತೆ ಮಾಡಿಕೊಡಲು ಹೈಕೋರ್ಟ್ ಸಹ ತಾಲೂಕು ಆಡಳಿತಕ್ಕೆ ಸೂಚಿಸಿದೆ. ಆದರೆ ಅಧಿಕಾರಿಗಳು ಮಾತ್ರ ಖಾತೆ ಮಾಡಿಕೊಡದೆ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ದೇವನಗುಂದಿಯ ಚಂದ್ರಮ್ಮ ಅಳಲುತೋಡಿಕೊಂಡರು.
ಬುಧವಾರ ತಾಲೂಕು ಕಚೇರಿ ಮುಂಭಾಗ ವಿವಿಧ ಸಂಟನೆಗಳೊಂದಿಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, 1993ರಲ್ಲಿಯೇ ಸಾಗುವಳಿ ಚೀಟಿ ಸಿಕ್ಕಿದೆ. ಆದರೆ ಈವರೆಗೂ ಜಮೀನು ಖಾತೆಯಾಗಿಲ್ಲ. ಅಧಿಕಾರಿಗಳು ಖಾತೆ ಮಾಡಿಕೊಡದಿದ್ದರೆ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಸಿದರು.
ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಟನೆ ಅಧ್ಯಕ್ಷ ಡಾ.ಕೆ.ಎಂ.ಸಂದೇಶ್ ಮಾತನಾಡಿ, ದೇವನಗುಂದಿ ಸರ್ವೇ ನಂ.142ರಲ್ಲಿ ಸರ್ಕಾರಿ ಆದೇಶದಂತೆ 11 ಜನರಿಗೆ ಜಮೀನು ಮಂಜೂರಾತಿ ನೀಡಲಾಗಿತ್ತು. 11 ಫಲಾನುಭವಿಗಳ ಪೈಕಿ 7 ಮಂದಿಗೆ ಕಂದಾಯ ದಾಖಲೆ ಒದಗಿಸಿ, ಇನ್ನುಳಿದ 4 ಮಂದಿಗೆ ಮಂಜೂರಾತಿ ಮಾಡದೆ ಬಾಕಿ ಉಳಿಸಿಕೊಳ್ಳಲಾಗಿತ್ತು. ಸಾಗುವಳಿ ಚೀಟಿಗಾಗಿ ಮತ್ತೆ ಅರ್ಜಿ ಸಲ್ಲಿಸಿ ಜಮೀನು ಮಂಜೂರಿಗೆ ಒತ್ತಾಯಿಸಿದಾಗ ಕಂದಾಯ ಲೆಕ್ಕಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರು ಎರಡೆರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ, ಚಕ್ಕುಬಂದಿದಾರರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸ್ಥಳ ಪರಿಶೀಲಿಸಿ, ಗ್ರಾಮಸ್ಥರ ಸಹಿ ಪಡೆದು ತಹಸೀಲ್ದಾರರಿಗೆ ವರದಿ ಸಲ್ಲಿಸಿದ್ದರು.
ಅದರಂತೆ ಬಾಕಿ ನಾಲ್ವರಿಗೆ 2023ರಲ್ಲಿ ಭೂಮಿ ಮಂಜೂರು ಮಾಡಲಾಗಿದೆ. ಆದರೆ ಮೂವರಿಗಷ್ಟೇ ಖಾತೆ ಮಾಡಿಕೊಟ್ಟಿರುವ ತಾಲೂಕು ಆಡಳಿತ, ಚಂದ್ರಮ್ಮ ಅವರಿಗೆ ಮಾತ್ರ ಖಾತೆ ಮಾಡಿಕೊಡದೆ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.