ಹುಣಸೂರು ನಗರಸಭೆ ಕಚೇರಿ ಮುಂಭಾಗ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅಹಿಂದ ರೈತಸಂಘದ ರಾಜ್ಯಾಧ್ಯಕ್ಷ ಸೋಮನಹಳ್ಳಿ ಶಿವಶೇಖರ್ ಮಾತನಾಡಿದರು. ಸಮಿತಿ ಅಧ್ಯಕ್ಷ ಸ್ವಾಮಿಗೌಡ, ಉಪಾಧ್ಯಕ್ಷ ಇಂಟೆಕ್ ರಾಜು, ಕೆ.ಎಸ್.ಶ್ರೀನಿವಾಸ್ ಇತರರಿದ್ದಾರೆ.
ಹುಣಸೂರು: ಹುಣಸೂರು ನಗರವ್ಯಾಪ್ತಿಯ ಬಡಜನರಿಗೆ ಆಶ್ರಯ ಸಮಿತಿಯಿಂದ ವಿತರಿಸಲಾಗಿದ್ದ ನಿವೇಶನದ ಹಕ್ಕುಪತ್ರ ಹೊಂದಿರುವ ಫಲಾನುಭವಿಗಳಿಗೆ 20 ವರ್ಷಗಳೇ ಸಂದರೂ ನಿವೇಶನ ಗುರುತಿಸುವ ಮತ್ತು ಖಾತೆ ಮಾಡಿಕೊಡದಿರುವುದನ್ನು ಖಂಡಿಸಿ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ನಗರಸಭೆ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದ ಫಲಾನುಭವಿಗಳು ಮತ್ತು ಸಮಿತಿ ಸದಸ್ಯರು ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು. ಹಕ್ಕುಪತ್ರ ನೀಡಿದ್ದೀರಿ, ನಿವೇಶನ ಗುರುತಿಸಿಕೊಡಿ, ಶಾಶ್ವತ ಸೂರು ಪಡೆಯುವುದು ನಮ್ಮ ಹಕ್ಕು, ನೀವು ನೀಡುವ ಭಿಕ್ಷೆಯಲ್ಲ ಎಂಬಿತ್ಯಾದಿ ಘೋಷಣೆ ಕೂಗಿದರು.
ಅಹಿಂದ ರೈತ ಸಂಘದ ರಾಜ್ಯಾಧ್ಯಕ್ಷ ಸೋಮನಹಳ್ಳಿ ಶಿವಶೇಖರ್ ಮಾತನಾಡಿ, 22 ವರ್ಷಗಳ ಹಿಂದೆ ಅಂದಿನ ಶಾಸಕರಾಗಿದ್ದ ದಿ.ಕೋಡಿ ಪಾಪಣ್ಣ ನೇತೃತ್ವದ ಆಶ್ರಯ ಸಮಿತಿ ನಗರ ವ್ಯಾಪ್ತಿಯ ಬಡಜನರಿಗಾಗಿ 870 ನಿವೇಶನಗಳನ್ನು ಗುರುತಿಸಿ ಹಕ್ಕುಪತ್ರ ವಿತರಿಸಿದೆ. ಆದರೆ ಎರಡು ದಶಕಗಳೇ ಸಂದರೂ ಈವರೆಗೆ ಫಲಾನುಭವಿಗಳು ನಿವೇಶನ ಕಂಡಿಲ್ಲ.
ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿತು. ಐವರು ಶಾಸಕರು ಆಳಿ ಹೋದರು. ಆದರೂ ಸಮಸ್ಯೆ ಪರಿಹಾರವಾಗಿಲ್ಲ ಏಕೆ? ಬಡಜನರಿಗೆ ಸೂರು ಕಲ್ಪಿಸಲಾಗದ ನಗರಸಭೆ ಇದ್ದರೆಷ್ಟು ಹೋದರೆಷ್ಟು? ನಗರವ್ಯಾಪ್ತಿಯಲ್ಲಿ ಜೋಪಡಿಗಳೇ ಕಾಣಸಿಗುತ್ತವೆ.ಇದು ಸರಿಯೇ? ನಗರಸಭೆ ಪೌರಾಯುಕ್ತರು ಈ ಕೂಡಲೇ ಪ್ರಸ್ತುತ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಆಯೋಜಿಸಿ ಆಯ್ಕೆಯಾಗಿರುವ ಎಲ್ಲ 870 ಫಲಾನುಭವಿಗಳಿಗೆ ನಿವೇಶನ ಗುರುತಿಸಿಕೊಡಬೇಕು. ಈ ಕಾರ್ಯ ಮುಂಬರುವ ನಗರಸಭೆ ಕೌನ್ಸಿಲರ್ ಚುನಾವಣೆಯೊಳಗೆ ಸಂಪನ್ನಗೊಳ್ಳಬೇಕು. ಇಲ್ಲದಿದ್ದರೆ ನಗರಸಭೆ ವ್ಯಾಪ್ತಿಯ ಬಡ ಜನರು ಚುನಾವಣೆ ಬಹಿಷ್ಕಾರ ಮಾಡಲಿದ್ದಾರೆಂದು ಎಚ್ಚರಿಸಿದರು.
ಸಮಿತಿ ಉಪಾಧ್ಯಕ್ಷ ಇಂಟೆಕ್ ರಾಜು ಮಾತನಾಡಿ, ನಗರಸಭೆ ನಾಗರಿಕರ ಪಾಲಿಗೆ ನರಕಸಭೆಯಾಗಿದೆ. 22ವರ್ಷಗಳಿಂದ ಬಡಜನರಿಗೆ ಒಂದೇ ಒಂದು ನಿವೇಶನ ನೀಡದಿರುವ ಸಾಧನೆಯನ್ನು ಹುಣಸೂರು ನಗರಸಭೆ ಮಾಡಿದೆ. ನಿವೇಶನ ಹಂಚಿಕೆಯಲ್ಲಿ ಅನರ್ಹರು ಇದ್ದಾರೆ ಎಂದು ಹೇಳುವುದು ಸರಿಯಲ್ಲ. ಒಂದೆರಡು ಪ್ರಕರಣಗಳನ್ನು ಗುರಿಯಾಗಿರಿಸಿಕೊಂಡು ಬಡಕುಟುಂಬಗಳಿಗೆ ಅನ್ಯಾಯವೆಸಗಲಾಗುತ್ತಿದೆ. ನಗರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಇದಕ್ಕೆ ಮೂಲಕಾರಣವಾಗಿದೆ. ಶೀಘ್ರ ನಿವೇಶನ ಗುರುತಿಸಿಕೊಡದಿದ್ದಲ್ಲಿ ನಗರಸಭೆ ಮುಂಬಾಗದ ಮೈದಾನದಲ್ಲಿ ಜೋಪಡಿಗಳನ್ನು ಬಡಜನರು ಹಾಕಿಕೊಳ್ಳಲಿದ್ದಾರೆಂದು ಎಚ್ಚರಿಸಿದರು.
ಸಮಿತಿ ಅಧ್ಯಕ್ಷ ಸ್ವಾಮಿಗೌಡ ಮಾತನಾಡಿ, ಆಶ್ರಯ ಸಮಿತಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ನಿವೇಶನ ನೀಡದಿರಲು ಕಾರಣವೇನು ಎನ್ನುವುದನ್ನು ಅಧಿಕಾರಿಗಳು ತಿಳಿಸಬೇಕು. ಇದೀಗ ಹಕ್ಕುಪತ್ರ ಹೊಂದಿರುವವರ ಅರ್ಜಿಗಳ ಮರುಪರಿಶೀಲನೆ ಮಾಡಲಾಗುತ್ತಿದೆ ಎನ್ನಲಾಗಿದ್ದು, ಮರುಪರಿಶೀಲನೆ ಮಾಡಲು ನಿಮಗೆ ಅಧಿಕಾರ ನೀಡಿದವರ‌್ಯಾರು? ಅಂದಿನ ಶಾಸಕ, ಜಿಲ್ಲಾಧಿಕಾರಿಗಳು ಸಹಿ ಹಾಕಿ ನೀಡಿರುವ ಹಕ್ಕುಪತ್ರದ ಕುರಿತು ನಿಮಗೆ ಇರುವ ತಕರಾರು ಏನು? ಯಾವುದೇ ಕಾರಣಕ್ಕೂ 870 ಫಲಾನುಭವಿಗಳಿಗೆ ನಿವೇಶನ ನೀಡುವಲ್ಲಿ ಅನ್ಯಾಯವಾಗಬಾರದು. ಜಿಲ್ಲಾಡಳಿತ ಈ ಕೂಡಲೇ ಇತ್ತ ಗಮನಹಿಸಿ ಕ್ರಮವಹಿಸದಿದ್ದರೆ ನಿರಂತರ ಹೋರಾಟ ಅನಿವಾರ್ಯವಾಗಲಿದೆ ಎಂದರು.
ಫಲಾನುಭವಿ ವಿಪಿ ಬೋರೆಯ ಫರಾನ ಮಾತನಾಡಿ, ನಿವೇಶನ ನೀಡುವಲ್ಲಿ ನಗರಸಭೆ ಅಧಿಕಾರಿಗಳು ಮಾನವೀಯತೆ ಮೆರೆಯಬೇಕೆಂದು ಒತ್ತಾಯಿಸಿದರು. ಪೌರಾಯುಕ್ತೆ ಕೆ.ಮಾನಸ ಸ್ಥಳಕ್ಕಾಗಮಿಸಿ ಈ ಕುರಿತು ನಗರಸಭೆ ಅರ್ಜಿಗಳ ಪರಿಶೀಲನೆ ನಡೆಸುತ್ತಿದ್ದು, ನಿವೇಶನಗಳ ಸ್ಚಚ್ಛತೆ ಕಾರ್ಯ ನಡೆಸುತ್ತಿದೆ. ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ಆದಷ್ಟು ಶೀಘ್ರವಾಗಿ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.