ಇಂಡಿ ಕಾಂಗ್ರೆಸ್ ಕಾರ್ಯಕರ್ತರಿಂದ ಬೆಂಗಳೂರಿನಲ್ಲಿ ಪ್ರತಿಭಟನೆ
ಶಾಸಕ ಯಶವಂತರಾಯಗೌಡರಿಗೆ ಸಚಿವ ಸ್ಥಾನ ನೀಡಬೇಕೆಂದು ಬೆಂಗಳೂರಿನ ಕಾಂಗ್ರೆಸ್ ಕಚೇರಿ ಎದುರು ಇಂಡಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಿವಯೋಗೆಪ್ಪ ಜೋತಗೊಂಡ, ಪ್ರಶಾಂತ ಕಾಳೆ, ಜಾವೀದ ಮೋಮಿನ್, ಬಿ.ಸಿ. ಸಾಹುಕಾರ, ಶ್ರೀಕಾಂತ ಕೂಡಿಗನೂರ ಇತರರಿದ್ದರು.
ಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲ ಅವರ ಬೆಂಬಲಿಗರಿಂದ ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಕಚೇರಿ ಮುಂದೆ ಇಂಡಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡದಿದ್ದರೆ ಪಕ್ಷದ ಎಲ್ಲ ಹುದ್ದೆಗಳಿಗೆ ಹಾಗೂ ನಾಮ ನಿರ್ದೇಶಿತ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿ, ಎಚ್ಚರಿಕೆ ನೀಡಿದರು.
ಸೋಮವಾರ ಇಂಡಿಯಿಂದ ಬೆಂಗಳೂರಿಗೆ ತೆರಳಿದ್ದ ಕಾರ್ಯಕರ್ತರು ಮಂಗಳವಾರ ಬೆಳಗ್ಗೆ ಸಿಎಂ, ಡಿಸಿಎಂ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಪಕ್ಷದ ಕಾರ್ಯಾಲಯದಲ್ಲಿದ್ದ ಅಧ್ಯಕ್ಷ ಬಿ.ಕೆ. ಹರಿಪ್ರಸಾದ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಸಿಎಂ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾದ ಕಾರ್ಯಕರ್ತರು ಸುಮಾರು 10 ನಿಮಿಷಗಳ ಕಾಲ ಚರ್ಚಿಸಿ, ಇಂಡಿ ಕ್ಷೇತ್ರಕ್ಕೆ 1957 ರಿಂದ 2026ರವರೆಗೆ ಇಲ್ಲಿಯವರೆಗೂ ಒಮ್ಮೆಯೂ ಸಚಿವ ಸ್ಥಾನ ದೊರೆತಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ನೀವು ಕೇಳುತ್ತಿರುವುದು ಸರಿಯಿದೆ. ಯಶವಂತರಾಯ ಗೌಡರು ನಮಗೂ ಬೇಕಾದವರು ನೋಡೋಣ ಎಂದು ಹೇಳಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ನಾನು ಹಾಗೂ ಸಿದ್ದರಾಮಯ್ಯನವರು ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದ್ದಾರೆಂದು ಕಾಂಗ್ರೆಸ್ ಪಕ್ಷದ ಇಂಡಿ ನಗರ ಘಟಕದ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ ತಿಳಿಸಿದ್ದಾರೆ.