

ತಿ.ನರಸೀಪುರ:
ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶವನ್ನು ವಿರೋಧಿಸಿ ಪಟ್ಟಣದಲ್ಲಿ ಶುಕ್ರವಾರ ರೈತರು ನದಿಗೆ ಇಳಿದು ಪ್ರತಿಭಟನೆ ನಡೆಸಿದರು.
ಪಟ್ಟಣದ ಕಬಿನಿ ಅತಿಥಿ ಗೃಹದ ಆವರಣದಲ್ಲಿ ಸೇರಿದ್ದ ರೈತ ಸಂಘಟನೆಗಳ ಒಕ್ಕೂಟ ಮತ್ತು ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ರೈತ ಮುಖಂಡರು ನೆರೆಯ ರಾಜ್ಯಕ್ಕೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸುವ ನಿರ್ಣಯ ಕೈಗೊಂಡು ಬಳಿಕ ತ್ರಿವೇಣಿ ಸಂಗಮಕ್ಕೆ ತೆರಳಿ ನದಿಗಿಳಿದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿದರು.
ತಮಿಳುನಾಡಿಗೆ ನಿತ್ಯವೂ 3500 ಕ್ಯುಸೆಕ್ ನೀರು ಹರಿಸುವಂತೆ ಸಮಿತಿ ನೀಡಿರುವ ಆದೇಶದಿಂದ ರಾಜ್ಯದ ರೈತರಿಗೆ ತೀರಾ ಅನ್ಯಾಯವಾಗಲಿದೆ. ಕಬಿನಿ ಮತ್ತು ಕಾವೇರಿ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಕೂಡಲೇ ನೀರು ಹರಿಸಿ, ಕಬಿನಿ ಜಲಾಶಯ ವ್ಯಾಪ್ತಿಯ ಕೆರೆಕಟ್ಟೆಗಳು ಬತ್ತಿ ಹೋಗಿವೆ. ದನ ಕರುಗಳಿಗೆ ಕುಡಿಯಲು ನೀರಿಲ್ಲ. ಬೆಳೆದು ನಿಂತಿರುವ ಬೆಳೆಗಳು ಒಣಗಿ ಹೋಗಿವೆ. ಕನಿಷ್ಠ ರೈತರ ಜೀವನಕ್ಕಾದರೂ ದ್ವಿದಳ ಧಾನ್ಯ ಬೆಳೆದುಕೊಳ್ಳಲು ನಾಲೆಗಳಿಗೆ ಕೂಡಲೇ ನೀರು ಹರಿಸಬೇಕು ಎಂದು ಪ್ರತಿಭಟನಾನಿರತ ರೈತರು ಆಗ್ರಹಿಸಿದರು.
ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರುಗಸೂರು ಶಂಕರ್ ಮಾತನಾಡಿ, ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶವು ರಾಜ್ಯದ ಪಾಲಿಗೆ ಮರಣ ಶಾಸನವಾಗಿದೆ. ಸಂಕಷ್ಟದಲ್ಲೂ ಇಂತಹ ಆದೇಶ ಬರಲು ರಾಜ್ಯದ ನೀರಾವರಿ ಅಧಿಕಾರಿಗಳೇ ಕಾರಣ. ಅಧಿಕಾರಿಗಳು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸುವಾಗ ರಾಜ್ಯ ರೈತರ ವಾಸ್ತವ ಪರಿಸ್ಥಿತಿಯನ್ನು ಮನದಟ್ಟು ಮಾಡಿಕೊಟ್ಟಿಲ್ಲ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿಯಿದೆ. ಕೆರೆ, ಕಟ್ಟೆಗಳು ಬತ್ತಿದ್ದು, ತೋಟಗಾರಿಕಾ ಬೆಳೆಗಳು ಒಣಗುತ್ತಿವೆ. ಆದರೆ ಅಧಿಕಾರಿಗಳು ನಾಲೆ ಮೂಲಕ ನೀರು ಹರಿಸದೆ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದು ಈ ಭಾಗದ ರೈತರ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ ಎಂದು ಕಿಡಿಕಾರಿದರು.
ತಾಲೂಕು ಮಾಜಿ ಅಧ್ಯಕ್ಷ ಕುರುಬೂರು ಸಿದ್ದೇಶ್ ಮಾತನಾಡಿ, ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಯಲು ಸರ್ಕಾರ ಮುಂದಾಗಬೇಕು. ರಾಜ್ಯದಲ್ಲಿ ಬರ ಪರಿಸ್ಥಿತಿಯಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸ್ಥಿತಿ ತಲೆದೂರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಡಾ.ಎಂ.ಮಾದೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಇಇ ಯೋಗೇಶ್ ಸ್ಥಳಕ್ಕಾಗಮಿಸಿ ರೈತರಿಂದ ಮನವಿ ಪತ್ರವನ್ನು ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಕುರುಬೂರು ಕೆ.ಜೆ.ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ವಾಚ್ ಕುಮಾರ್, ಟೌನ್ ಅಧ್ಯಕ್ಷ ಬ್ಯಾಂಗಲ್ಸ್ ಅಪ್ಪಣ್ಣ, ಮುಖಂಡರಾದ ಕರೋಹಟ್ಟಿ ಉಮೇಶ್, ಬಿ.ಪಿ.ಪರಶಿವಮೂರ್ತಿ, ಹ್ಯಾಕನೂರು ರಾಜೇಶ್, ಆದಿಬೆಟ್ಟಳ್ಳಿ ನಂಜುಂಡಸ್ವಾಮಿ, ಕುರುಬೂರು ಪ್ರದೀಪ್, ಕರುವಟ್ಟಿ ರಾಮಮೂರ್ತಿ, ಚಂದ್ರು, ಕೆಇಬಿ ಯೋಗೇಶ್, ಶಾಂತರಾಜು, ಶೇಖರ್, ಚಿನ್ನಸ್ವಾಮಿ, ಮಾದಪ್ಪ, ರೂಪೇಶ್, ರಘು, ಬಸವಣ್ಣ, ನಿಲ್ಸೋಗೆ ಡೇರಿ ಅಧ್ಯಕ್ಷ ನಂಜುಂಡಸ್ವಾಮಿ, ರಾಜಬುದ್ಧಿ, ಬಸವಣ್ಣ, ಮಲ್ಲಣ್ಣ, ಅನುಕುಮಾರ್, ಸಿದ್ದಯ್ಯ, ಜಗದೀಶ್, ಗುರುಮಲ್ಲಪ್ಪ, ಎಸ್.ಮಲ್ಲಣ್ಣ, ಬಂಡಿ ಮಹೇಶ್, ತೀರ್ಥಳ್ಳಿ ಜಗದೀಶ್, ಆದಿಬೆಟ್ಟಳ್ಳಿ ಮಹೇಶ್, ಮಹದೇವಸ್ವಾಮಿ, ನಟರಾಜು, ಲೋಕೇಶ್, ಸೋಮಣ್ಣ, ನಾಗಪ್ಪ, ಆಲ್ಗೂಡು ಹರೀಶ್, ಕೇತಳ್ಳಿ ರೇವಣ್ಣ, ಸಿದ್ದರಾಜು ಇತರರು ಇದ್ದರು.