ರಸ್ತೆಯಲ್ಲಿ ಟೀ ಮಾಡಿ ಕುಡಿದು ಪ್ರತಿಭಟನೆ / DODABALLAPUR
ನೀಟ್ ಪರೀಕ್ಷೆ ವೈಫಲ್ಯ, ಇಂಧನ ಬೆಲೆ ಏರಿಕೆ ಖಂಡಿಸಿ ದೊಡ್ಡಬಳ್ಳಾಪುರದ ಹಳೇ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ವೆಂಕಟರಮಣಯ್ಯ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ, ಜಿಲ್ಲಾಧ್ಯಕ್ಷ ಸಿ.ಆರ್ ಗೌಡ, ಡಿಪಿಎ ಅಧ್ಯಕ್ಷ ಚುಂಚೇಗೌಡ, ಮುಖಂಡರಾದ ಭೈರೇಗೌಡ, ಅಂಜನ್ಮೂರ್ತಿ, ಅಪ್ಪಿ ವೆಂಕಟೇಶ್, ವಿಶ್ವನಾಥ್ರೆಡ್ಡಿ, ಆದಿತ್ಯನಾಗೇಶ್, ಆರ್.ವಿ. ಮನು, ಶಿವಕುಮಾರ್ ಇದ್ದರು.
ದೊಡ್ಡಬಳ್ಳಾಪುರ : ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆ ಮತ್ತು ನೀಟ್ ಪರೀಕ್ಷೆ ಅಕ್ರಮಗಳನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಹಾಗೂ ತಾಲೂಕು ಕಾಂಗ್ರೆಸ್ ಸಮಿತಿಯಿಂದ ತಾಲೂಕು ಕಚೇರಿ ಬಳಿ ಸೌದೆ ಒಲೆಯಲ್ಲಿ ಟೀ ಮಾಡಿ ಕುಡಿಯುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಕುದುರೆ ಗಾಡಿಯಲ್ಲಿ ಪ್ರತಿಭಟನೆ: ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಆರಂಭವಾದ ಪ್ರತಿಭಟನಾ ಮೆರವಣಿಗೆ ತಾಲೂಕು ಕಚೇರಿ ವೃತ್ತದವರೆಗೆ ಸಾಗಿತು. ಕುದುರೆ ಗಾಡಿಯಲ್ಲಿ ಮುಖಂಡರು ಸಾಗಿದರು. ಬಳಿಕ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನಾಕಾರರು ಸೌದೆ ಒಲೆಯಲ್ಲಿ ಟೀ ತಯಾರಿಸಿ ಕುಡಿಯುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡು ಬಂದಿದೆ. ನೀಟ್ ಪರೀಕ್ಷೆ ರದ್ದು ಮಾಡಿರುವುದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಕೂಡಲೇ ಕೇಂದ್ರ ಶಿಕ್ಷಣ ಸಚಿವ ಧಮೇಂರ್ದ್ರ ಪ್ರಧಾನ್ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರ ರೈತರು, ಬಡವರ ಪರವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ ಮಾತನಾಡಿ, ನೀಟ್ ಅಕ್ರಮದಿಂದ ವಿದ್ಯಾರ್ಥಿಗಳು ಸಾವಿಗಿಡಾಗುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ. ಕೂಡಲೇ ಇದನ್ನು ಇಳಿಕೆ ಮಾಡಬೇಕು. ಸರಣಿಯಾಗಿ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.