ಸಂಪಾದಕೀಯ: ಜನರ ಆರೋಗ್ಯ ರಕ್ಷಿಸಿ

Editorial
Editorial
Published on
ರಾಜ್ಯದಲ್ಲಿ ಬೇಸಿಗೆಯ ಆರಂಭಿಕ ಹಂತದಲ್ಲೇ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿರುವುದು ಕಳವಳಕಾರಿ. ಜನರಿಗೆ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವ ಪರಿಣಾಮ ಕಾಯಿಲೆಗಳು ಉಲ್ಬಣಗೊಳ್ಳುವ ಆತಂಕ ಎದುರಾಗಿದೆ.
ಕುಡಿಯುವ ನೀರಿನ ಗುಣಮಟ್ಟ ಕಾಯ್ದುಕೊಳ್ಳಲು ಸರ್ಕಾರ ಕೆಲ ಕ್ರಮಗಳನ್ನು ಕೈಗೊಂಡಿದ್ದರೂ, ಹಳ್ಳಿಗಳಲ್ಲಿ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ಜನರಿಗೆ ಕುಡಿಯಲು ಪೂರೈಕೆಯಾಗುತ್ತಿರುವ ನೀರಿನಲ್ಲಿ ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾ ಅಂಶಗಳಿರುವ ಸಂಗತಿ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಪ್ರಯೋಗಾಲಯದಲ್ಲಿ ನಡೆಸಿದ ನೀರಿನ ಮಾದರಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಪರಿಣಾಮ ನೀರಿನ ಗುಣಮಟ್ಟ ಸುಧಾರಣೆಗೆ ರೂಪಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.
2023ರಿಂದ 2026ರ ಫೆಬ್ರವರಿವರೆಗೆ, ಅಂದರೆ ಕಳೆದ 3 ವರ್ಷಗಳಲ್ಲಿ 9,34,645 ನೀರಿನ ಮಾದರಿ ಪರೀಕ್ಷಿಸಿದ್ದು, ಇದರಲ್ಲಿ 53,089 ನೀರಿನ ಮಾದರಿಯಲ್ಲಿ ರಾಸಾಯನಿಕ ಹಾಗೂ 7,696 ನೀರಿನ ಮಾದರಿಯಲ್ಲಿ ಬ್ಯಾಕ್ಟೀರಿಯಾ ಹೊಂದಿರುವ ಸಂಗತಿ ಸಾಬೀತಾಗಿದೆ. ಕೆಲ ಜಿಲ್ಲೆಗಳ ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್, ಅರ್ಸೆನಿಕ್, ಐರನ್ ಅಂಶ ಹೆಚ್ಚಿರುವುದು ದೃಢಪಟ್ಟಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಜನರ ಆರೋಗ್ಯ ರಕ್ಷಣೆಯಲ್ಲಿ ಶುದ್ಧ ಕುಡಿಯುವ ನೀರಿನ ಪಾತ್ರ ಮಹತ್ವದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಅಭಿವೃದ್ಧಿ ಎಂದರೆ ಕೇವಲ ಕಣ್ಣಿಗೆ ಕಾಣುವ ಕಟ್ಟಡ, ಸೇತುವೆಗಳಲ್ಲ; ಪ್ರತಿಯೊಬ್ಬ ನಾಗರಿಕನಿಗೂ ಸುರಕ್ಷಿತವಾದ ಕುಡಿಯುವ ನೀರು ಮತ್ತು ನೈರ್ಮಲ್ಯವನ್ನು ಖಾತ್ರಿಪಡಿಸುವುದು ನಿಜವಾದ ಅಭಿವೃದ್ಧಿ. ಸಂಬಂಧಪಟ್ಟವರು ಕೂಡಲೇ ಯುದ್ಧೋಪಾದಿಯಲ್ಲಿ ಹಳೆಯ ಪೈಪ್​ಲೈನ್​ಗಳ ವೈಜ್ಞಾನಿಕ ಮ್ಯಾಪಿಂಗ್ ಮಾಡಬೇಕು. ಅವುಗಳನ್ನು ಬದಲಿಸಿ ಆಧುನಿಕ ಪೈಪ್​ಗಳನ್ನು ಹಾಕಬೇಕು. ನಗರದ ಚರಂಡಿ ವ್ಯವಸ್ಥೆ ಮತ್ತು ನೀರಿನ ಸರಬರಾಜು ಮಾರ್ಗಗಳು ಪರಸ್ಪರ ಬೆರೆಯದಂತೆ ಎಚ್ಚರಿಕೆ ವಹಿಸುವುದು ಆದ್ಯತೆಯಾಗಬೇಕು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ತೊಂದರೆ ಅನುಭವಿಸುವಂತಾಗಬಾರದು.
ಕರ್ನಾಟಕದ ನೂರಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಇಂದಿಗೂ ಮರೀಚಿಕೆಯಾಗಿದೆ. ತುಂಬ ದಿನಗಳಿಂದ ಸಂಗ್ರಹಗೊಂಡ ನೀರನ್ನು ಮತ್ತು ಕಲುಷಿತ ಜಲಮೂಲಗಳಿಂದ ಪಡೆದ ನೀರನ್ನು ಸೇವಿಸುವುದರಿಂದ ಜನರು ಪದೇಪದೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ವಾಂತಿಭೇದಿ, ಅತಿಸಾರ, ಜ್ವರ, ಕಾಲರಾ, ಅಲರ್ಜಿಯಂಥ ಸಮಸ್ಯೆಗಳು ಹೆಚ್ಚಿದ್ದು, ಕಲುಷಿತ ನೀರು ಪ್ರಾಣಕ್ಕೆ ಅಪಾಯ ತಂದೊಡ್ಡುತ್ತಿದೆ. ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ರಾಜ್ಯದಲ್ಲಿ 2024ರಲ್ಲಿ ಅತಿಸಾರದ (ಡಯೇರಿಯಾ) 66 ಸಾವಿರ ಪ್ರಕರಣಗಳು ವರದಿಯಾಗಿದ್ದವು. ಪ್ರಾಣಿಗಳ ಮೂಲಕ ಹರಡುವ ಬ್ಯಾಕ್ಟೀರಿಯಾ ಸೋಂಕು (ಲೆಪ್ಟೊಸ್ಪಿರೋಸಿಸ್) ಕೂಡ ಹಲವರಲ್ಲಿ ಕಾಣಿಸಿಕೊಂಡಿತ್ತು.
ಬೀದರ್, ರಾಯಚೂರು, ಯಾದಗಿರಿ, ಚಿತ್ರದುರ್ಗ, ತುಮಕೂರು, ಮಂಡ್ಯ, ದಾವಣಗೆರೆ, ವಿಜಯಪುರ ಮತ್ತು ಮೈಸೂರು ಜಿಲ್ಲೆಗಳ ಗ್ರಾಮಗಳಲ್ಲಿ ಕಲುಷಿತ ನೀರಿನ ಸೇವನೆಯಿಂದ ಅನಾರೋಗ್ಯದ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಕೊಳಚೆ ನೀರು ಮಿಶ್ರಣ, ಪೈಪ್​ಲೈನ್ ಸೋರಿಕೆ, ಅಪೂರ್ಣ ನೈರ್ಮಲ್ಯ ವ್ಯವಸ್ಥೆಯಿಂದ ಇಂಥ ಘಟನೆಗಳು ಪದೇಪದೆ ಮರುಕಳಿಸುತ್ತಿವೆ. ಈ ಅಪಸವ್ಯಗಳನ್ನು ತಡೆಯಲು ಆಡಳಿತಯಂತ್ರ ಪ್ರಾಮಾಣಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net