ನಿತ್ಯ 5 ಲಕ್ಷ ಮಾನವ ದಿನ ಸೃಜನೆಗೆ ಸಲಹೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ
Published on
ಬೆಂಗಳೂರು: ಬರಗಾಲದ ಹಿನ್ನೆಲೆಯಲ್ಲಿ ಅರ್ಹ ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿಪಡಿಸಲು ಮತ್ತು ನಿತ್ಯ 5 ಲಕ್ಷ ಮಾನವ ದಿನ ಸೃಜನೆಗಾಗಿ ಗರಿಷ್ಠ ಉದ್ಯೋಗ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಪ್ರಮಾಣಿತ ಕಾರ್ಯಾಚರಣೆ ಮಾನದಂಡ, ಆಡಳಿತಾತ್ಮಕ, ತಾಂತ್ರಿಕ ಮಾರ್ಗಸೂಚಿಗಳನ್ನು ಗ್ರಾಪಂಗಳಿಗೆ ಕಳುಹಿಸಿ ಗರಿಷ್ಠ ಪ್ರಮಾಣದಲ್ಲಿ ಉದ್ಯೋಗ ನೀಡಿ, ಶಾಶ್ವತ ಮತ್ತು ಗುಣಮಟ್ಟದ ಆಸ್ತಿ ಸೃಷ್ಟಿಸುವಂತೆ ಆದೇಶಿಸಿದ್ದಾರೆ.
ಕೆಲ ಪಿಡಿಒಗಳು ಸ್ಪಷ್ಟ ಮಾರ್ಗಸೂಚಿ ಇಲ್ಲದ ಕಾರಣ ತಾಂತ್ರಿಕ ತೊಡಕಾಗಿದೆ ಎಂದು ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ), ತಾಂತ್ರಿಕ ಮತ್ತು ಆಡಳಿತಾತ್ಮಕ ಮಾರ್ಗಸೂಚಿ, ಮಾದರಿ, ಅಂದಾಜು, ಕಾಮಗಾರಿ, ವೆಚ್ಚದ ಮಿತಿ, 60:40 ಕೂಲಿ-ಸಾಮಗ್ರಿ ಅನುಪಾತ, ಯುಕ್ತಧಾರಾ ಪೋರ್ಟಲ್ ಕಾರ್ಯವಿಧಾನ ಹಾಗೂ ಹೊಣೆಗಾರಿಕೆ ನಕ್ಷೆ, ಕ್ರಿಯಾಯೋಜನೆ ಸ್ವರೂಪ ಕುರಿತಂತೆ ಸ್ಪಷ್ಟ ಮಾಹಿತಿ ನೀಡಲು ಸಚಿವರು ಸೂಚಿಸಿದ್ದಾರೆ.
ಜನರು ಗುಳೆ ಹೋಗುತ್ತಿರುವುದನ್ನು ತಪ್ಪಿಸಲು ಅನುಮೋದಿತ 318 ಕಾಮಗಾರಿಗಳ ವಿವರ, ಮಾದರಿ, ವಿನ್ಯಾಸ, ಬಿಒಸಿ ದರಪಟ್ಟಿ ಇತ್ಯಾದಿ ಸ್ಪಷ್ಟ ಮಾರ್ಗಸೂಚಿಯನ್ನು ವಾರಾಂತ್ಯದೊಳಗೆ ಅನುಷ್ಠಾನಾಧಿಕಾರಿಗಳಿಗೆ ರವಾನಿಸಿ, ಕಟ್ಟುನಿಟ್ಟಾಗಿ ಜಾರಿಗೆ ತರಲು ಕಟ್ಟಾಜ್ಞೆ ಮಾಡಿದ್ದಾರೆ.
ಮನೆ ಮನೆ ಪ್ರಚಾರ ಮಾಡಿ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಬೇಕು. ರಾಜ್ಯದಲ್ಲಿ ಪ್ರತಿ ನಿತ್ಯ ಕನಿಷ್ಠ 5 ಲಕ್ಷ ಜನರಿಗೆ ಉದ್ಯೋಗದ ಖಾತ್ರಿ ಒದಗಿಸಲು ಮತ್ತು ಪ್ರತಿ ತಿಂಗಳು ಕನಿಷ್ಠ 1.5 ಕೋಟಿ ಮಾನವ ದಿನ ಹಾಗೂ ಶಾಶ್ವತವಾದ ಗುಣಮಟ್ಟದ ಗ್ರಾಮೀಣ ಆಸ್ತಿ ಸೃಜನೆಗೆ ಕ್ರಮವಹಿಸಲು ಸಚಿವರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net