ರಸ್ತೆ ವಿಸ್ತರಣೆಯಲ್ಲಿ ಪುರಸಭೆ ಆಸ್ತಿ ಕಬಳಿಕೆ / VIJAYAPUR

ವಿಜಯಪುರ ಪಟ್ಟಣದಲ್ಲಿ ರಸ್ತೆ ವಿಸ್ತರಣೆ ನೆಪದಲ್ಲಿ ಪುರಸಭೆ ಜಾಗ ಒತ್ತುವರಿ ಮಾಡುತ್ತಿರುವುದನ್ನು ವಿರೋಧಿಸಿ ನಾಗರಿಕರು ಪ್ರತಿಭಟನೆ ನಡೆಸಿದರು. ಅಂಗಡಿ ಮಾಲೀಕರಾದ ಮನೋಹರ್​, ಸುಹಾಸ್​, ಪುನೀತ್​,ರಮೇಶ್​, ಮನು, ಮುಖಂಡರಾದ ಮೋಹನ್​, ಸುಬ್ಬಣ್ಣ, ರಾಕೇಶ್​, ರಂಜಿತ್​ ಇತರರು ಇದ್ದರು.
ವಿಜಯಪುರ ಪಟ್ಟಣದಲ್ಲಿ ರಸ್ತೆ ವಿಸ್ತರಣೆ ನೆಪದಲ್ಲಿ ಪುರಸಭೆ ಜಾಗ ಒತ್ತುವರಿ ಮಾಡುತ್ತಿರುವುದನ್ನು ವಿರೋಧಿಸಿ ನಾಗರಿಕರು ಪ್ರತಿಭಟನೆ ನಡೆಸಿದರು. ಅಂಗಡಿ ಮಾಲೀಕರಾದ ಮನೋಹರ್​, ಸುಹಾಸ್​, ಪುನೀತ್​,ರಮೇಶ್​, ಮನು, ಮುಖಂಡರಾದ ಮೋಹನ್​, ಸುಬ್ಬಣ್ಣ, ರಾಕೇಶ್​, ರಂಜಿತ್​ ಇತರರು ಇದ್ದರು.
Published on
ವಿಜಯಪುರ : ರಸ್ತೆ ವಿಸ್ತರಣೆ ಕಾಮಗಾರಿ ನೆಪದಲ್ಲಿ ಪುರಸಭೆ ಆಸ್ತಿಯನ್ನೇ ಕಬಳಿಸಲಾಗುತ್ತಿದೆ ಎಂದು ಆರೋಪಿಸಿ ಸ್ಥಳಿಯರು ಪಟ್ಟಣದ ಪುರಸಭೆ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ಕೋಲಾರ ಮುಖ್ಯರಸ್ತೆಯಲ್ಲಿ ರಸ್ತೆ ವಿಸ್ತರಣೆ ಮಾಡುವಾಗ, ರಸ್ತೆಯ ಮಧ್ಯಭಾಗದಿಂದ 40 ಅಡಿ ಅಳತೆ ಮಾಡಿ, ರಸ್ತೆಗೆ ಒತ್ತುವರಿಯಾಗಿದ್ದ ಜಾಗತೆರವುಗೊಳಿಸಲು ಸಮಯಾವಕಾಶ ನೀಡಿ, ಕಾಮಗಾರಿ ಮಾಡಿದ್ದಾರೆ. ಈಗ ಚಿಕ್ಕಬಳ್ಳಾಪುರ ಮುಖ್ಯರಸ್ತೆಯಲ್ಲಿ, ಶಿವಗಣೇಶ ಸರ್ಕಲ್​ನಿಂದ ಕೆಇಬಿವರೆಗೆ ಮತ್ತು ಕೆಇಬಿಯಿಂದ ಕೆರೆಕೋಡಿಯವರೆಗೂ ರಸ್ತೆ ವಿಸ್ತರಣೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದುವರೆಗೂ ಮಧ್ಯರಸ್ತೆಯಿಂದ ಅಳತೆ ಮಾಡಿಲ್ಲ, ಎಲ್ಲಿಯವರೆಗೆ ತೆರವು ಮಾಡಬೇಕು ಎಂದು ಗುರುತಿಸಿಲ್ಲ. ಅಂಗಡಿಗಳ ಮಾಲೀಕರು, ತಮ್ಮ ಅಂಗಡಿಗಳ ಮುಂಭಾಗದಲ್ಲಿನ ಶೀಟ್​ಗಳನ್ನು ತೆರವುಗೊಳಿಸುವಂತೆ ಹೇಳಿದ್ದರು. ಅದರಂತೆ ತೆರವುಗೊಳಿಸಲಾಗಿದೆ. ಆದರೆ, ಮಧ್ಯ ರಸ್ತೆಯಿಂದ ಅಳತೆ ಮಾಡದೇ, ಪುರಸಭೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು, ಕಾಲುವೆ ಮಾಡಿ, ಚರಂಡಿ ನಿಮಾರ್ಣಕ್ಕೆ ಮುಂದಾಗುವ ಮೂಲಕ ಪ್ರಭಾವಿಗಳ ಆಸ್ತಿಉಳಿಸಲು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪುರಸಭೆಗೆ ಮುತ್ತಿಗೆ : ಈ ವೇಳೆ ಪುರಸಭೆಗೆ ಮುತ್ತಿಗೆ ಹಾಕಿದ ನಾಗರಿಕರು, ಪುರಸಭೆಯ ಜಾಗವನ್ನು ಕಬಳಿಕೆ ಮಾಡುತ್ತಿದ್ದರೂ ಅದನ್ನು ಉಳಿಸುವ ಬದ್ಧತೆ ನಿಮಗಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.ಹಿರಿಯ ಮುಖಂಡ ಎಸ್​.ಬಿ.ರಫಿವುಲ್ಲಾ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಬೇಸರ ವ್ಯಕ್ತಪಡಿಸಿದರು.ನಿಮ್ಮ ಆಸ್ತಿಯನ್ನು ಕಬಳಿಸುತ್ತಿದ್ದರೂ ಯಾಕೆ ನೀವು ಮೌನವಾಗಿದ್ದೀರಿ, ಎದ್ದು ಬಂದು ಕೆಲಸ ನಿಲ್ಲಿಸಿ ಎಂದು ಮುಖ್ಯಾಧಿಕಾರಿ ಸತ್ಯನಾರಾಯಣ ಅವರಿಗೆ ದಿಗ್ಬಂಧನ ಹಾಕಿ ಮನವಿ ಸಲ್ಲಿಸಿದರು.
ಈ ವೇಳೆ ಲೋಕೋಪಯೋಗಿ ಇಲಾಖೆಯ ಎಇಇ ರವೀಂದ್ರ ಸಿಂಗ್​ ಅವರಿಗೆ ಕರೆ ಮಾಡಿದ ಮುಖ್ಯಾಧಿಕಾರಿ ಸತ್ಯನಾರಾಯಣ, ನಮ್ಮ ವ್ಯಾಪ್ತಿಯಲ್ಲಿ ನೀವು ಕೆಲಸ ಮಾಡುತ್ತಿದ್ದೀರಿ, ನಮಗೆ ಯಾವುದೇ ದಾಖಲೆಗಳನ್ನು ಕೊಟ್ಟಿಲ್ಲ. ನಮ್ಮ ಪೈಪ್​ ಲೈನ್​ಗಳಿಗೆ ತೊಂದರೆ ಮಾಡಿದ್ದೀರಿ, ನಮ್ಮ ಜಾಗದಲ್ಲಿ ಚರಂಡಿ ಮಾಡುತ್ತಿದ್ದೀರಿ. ಕೂಡಲೇ ಕೆಲಸ ನಿಲ್ಲಿಸಿ, ಡಿಪಿಆರ್​ ತೆಗೆದುಕೊಂಡು ಬಂದು ಸ್ಥಳದಲ್ಲಿ ಅಳತೆ ಮಾಡಿದ ನಂತರ ಕಾಮಗಾರಿ ಮಾಡಿ ಎಂದು ಬೇಸರ ವ್ಯಕ್ತಪಡಿಸಿದ ನಂತರ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net