ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಕೆ ಪ್ರಕರಣ, ವ್ಯವಸ್ಥೆಗೇ ಸವಾಲಾದ ‘ಸಬ್‌ರಜಿಸ್ಟ್ರಾರ್’ ಕಚೇರಿ !

VJP-SUB-REGISTAR-OFFICE
VJP-SUB-REGISTAR-OFFICE
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ಗಮನ ಸೆಳೆದ ಶಾಸಕ ಯತ್ನಾಳ
  • ಕಂದಾಯ ಸಚಿವರಿಂದ ಅಸಮರ್ಪಕ ಉತ್ತರ
  • ಮತ್ತೂ ಗೊಂದಲ-ಅಸ್ಪಷ್ಟ ಮಾಹಿತಿ ಪೂರೈಕೆ
ವಿಜಯಪುರ: ಖೊಟ್ಟಿ ದಾಖಲೆ ಸೃಷ್ಠಿಸಿ ಸಾರ್ವಜನಿಕರ ಆಸ್ತಿ ಕಬಳಿಸುವ ದಂಧೆಗೆ ಸಂಬಂಧಿಸಿದಂತೆ ಸರ್ಕಾರದ ದ್ವಂದ್ವ ನಿಲುವು, ಅಸ್ಪಷ್ಟ ಮಾಹಿತಿ, ಅಸಮರ್ಪಕ ಉತ್ತರ ಹಾಗೂ ನಿರ್ಲಕ್ಷೃ ಧೋರಣೆ ಮತ್ತೂ ಮುಂದುವರಿದಿದ್ದು, ಈ ದಂಧೆ ಹಿಂದೆ ದೊಡ್ಡ ದೊಡ್ಡ ರಾಜಕೀಯ ಕುಳಗಳೇ ಕೆಲಸ ಮಾಡುತ್ತಿವೆ ಎಂಬ ಸಾರ್ವಜನಿಕರ ಆರೋಪಗಳಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ !
ರಾಜ್ಯದಲ್ಲಿ ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುವ ದಂಧೆ ಜೋರಾಗಿದ್ದು, ಈ ಕುರಿತು ‘ವಿಜಯವಾಣಿ’ ಸರಣಿ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆದಿತ್ತು. ಸದನದಲ್ಲಿಯೂ ಚರ್ಚೆಗಳಾಗಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಆದರೆ, ಪ್ರಕರಣಗಳಿಗೆ ಸಂಬಂಧಿಸಿದಂತೆ 2024ರ ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಗೃಹಸಚಿವರು ಹಾಗೂ ಕಂದಾಯ ಸಚಿವರಿಂದ ಬಂದ ಉತ್ತರಗಳು ಸಾಕಷ್ಟು ಗೊಂದಲ ಸೃಷ್ಠಿಸಿದ್ದವು. ಅಂಕಿ-ಅಂಶಗಳು ಒಂದಕ್ಕೊಂದು ತಾಳೆಯಾಗಿರಲಿಲ್ಲ. ಹೀಗಾಗಿ ಅಧಿಕಾರಿಗಳು ಸರ್ಕಾರದ ದಿಕ್ಕು ತಪ್ಪಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಈ ಕುರಿತು ಜು. 31 ರಂದು ವಿಜಯವಾಣಿ ‘ತಪ್ಪು ಮಾಹಿತಿ ನೀಡಿದರೇ ಕಂದಾಯ ಸಚಿವರು?’ ಎಂಬ ತಲೆ ಬರಹದಡಿ ವಿಶೇಷ ವರದಿ ಪ್ರಕಟಿಸಿತ್ತು. ಇದೀಗ 2026ರ ಜನವರಿಯಲ್ಲಿ ನಡೆದ ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಈ ಗೊಂದಲದ ಬಗ್ಗೆ ಮತ್ತೆ ಪ್ರಶ್ನಿಸಿದ್ದು, ಮತ್ತೂ ಅಸ್ಪಷ್ಟ ಹಾಗೂ ಅಸಮರ್ಪಕ ಉತ್ತರ ದೊರೆತಿದೆ.

ಏನಿದು ಗೊಂದಲ?

ಖೊಟ್ಟಿ ದಾಖಲೆ ಸೃಷ್ಠಿಸಿ ಜಮೀನು, ನಿವೇಶನಗಳ ಖರೀದಿ, ಮಾರಾಟ ಮಾಡಿರುವ ಪ್ರಕರಣಗಳಿಗೆ ಸಂಬಂಧಿಸಿದ ಶಾಸಕ ಯತ್ನಾಳರ ಪ್ರಶ್ನೆಗೆ ಕಂದಾಯ ಸಚಿವರು ನೀಡಿದ ಉತ್ತರದಲ್ಲಿ ‘ವಿಜಯಪುರದಲ್ಲಿ ಒಟ್ಟು ಐದು ಉಪ ನೋಂದಣಿ ಕಚೇರಿಗಳಿದ್ದು, ಈ ಪೈಕಿ ವಿಜಯಪುರ ಮತ್ತು ಇಂಡಿ ಉಪ ನೋಂದಣಿ ಕಚೇರಿಯಲ್ಲಿ ಖೊಟ್ಟಿ ದಾಖಲೆ ಸೃಷ್ಠಿಸಿ ಎರಡು ದಸ್ತಾವೇಜು (ದಸ್ತಾವೇಜುಗಳ ಸಂಖ್ಯೆ -4546/24-25 ಮತ್ತು 19503/23-24 ) ಗಳು ನೋಂದಣಿಯಾಗಿವೆ’ ಎಂದು ತಿಳಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಪ್ರಶ್ನೆಗೆ ಗೃಹ ಸಚಿವ ಜಿ. ಪರಮೇಶ್ವರ ಅವರು, ‘2 ವರ್ಷಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸಿರುವ 19 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 9 ಪ್ರಕರಣಗಳು ದಾಖಲಾಗಿದ್ದು, 22 ಆರೋಪಿಗಳನ್ನು ಬಂಧಿಸಲಾಗಿದೆ. 2024ರಲ್ಲಿ 10 ಪ್ರಕರಣ ದಾಖಲಾಗಿದ್ದು, 13 ಆರೋಪಿಗಳನ್ನು ಬಂಧಿಸಲಾಗಿದೆ’ ಎಂದಿದ್ದರು.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ವಿಜಯಪುರದಲ್ಲಿ ಕಂಡು ಬಂದ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ರಚನೆಯಾದ ತನಿಖಾ ತಂಡ ಜ.31ರಂದು ತನಿಖೆ ವರದಿ ಬಹಿರಂಗಪಡಿಸಿತು.

ಆ ಪ್ರಕಾರ 2022 ರಿಂದ 2024ರ ವರೆಗೆ ದಾಖಲಾಗಿದ್ದ 27 ಪ್ರಕರಣಗಳ ಪೈಕಿ 25 ಪ್ರಕರಣಗಳಲ್ಲಿ 200 ಜನರ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಅಲ್ಲದೇ, ಒಟ್ಟು 158.13 ಎಕರೆ ಜಮೀನು ಹಾಗೂ 9 ಎನ್‌ಎ ಪ್ಲಾಟ್‌ಗಳನ್ನು ಕೂಡ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆದರೆ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಈ ಪ್ರಕರಣಗಳಲ್ಲಿ ಬಾಂಡ್ ರೈಟರ್‌ಗಳು, ಏಜೆನ್ಸಿಗಳು ಹಾಗೂ ಖಾಸಗಿ ವ್ಯಕ್ತಿಗಳನ್ನೇ ಗುರಿಯಾಗಿಸಿದ್ದು, ಸಂಬಂಧಿಸಿದ ಅಧಿಕಾರಿಯನ್ನೇ ಹೊರಗಿಟ್ಟಿರುವ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಪ್ರಕರಣದಲ್ಲಿ ಉಪನೋಂದಣಾಧಿಕಾರಿ ಸಹಿ ಇದೆ, ಅವರು ಸಹ ಹೆಬ್ಬೆರಳಿನ ರುಜು ನೀಡಿದ್ದಾರೆ ಎನ್ನುವ ತನಿಖಾಧಿಕಾರಿಗಳು ಆ ಅಧಿಕಾರಿಯ ಹೆಸರು ಚಾರ್ಜ್‌ಶೀಟ್‌ನಲ್ಲಿ ನಮೂದಿಸದಿರುವುದಕ್ಕೆ ಕಾರಣವೇನೆಂಬ ಪ್ರಶ್ನೆಗೆ ಉತ್ತರ ಇನ್ನೂ ನಿಗೂಢ.

ಮುಂದುವರಿದ ಗೊಂದಲ

ಇದೀಗ ಈ ಗೊಂದಲದ ಉತ್ತರಗಳಿಗೆ ಸಂಬಂಧಿಸಿದಂತೆ ಶಾಸಕ ಯತ್ನಾಳರು ಸರ್ಕಾರದ ಗಮನ ಸೆಳೆಯಲಾಗಿ ಮತ್ತೂ ಅಸ್ಪಷ್ಟ ಹಾಗೂ ಅಸಮರ್ಪಕ ಉತ್ತರ ದೊರೆತಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡರು ನೀಡಿದ ಉತ್ತರದಲ್ಲಿ ಸಬ್‌ರಜಿಸ್ಟ್ರಾರ್ ನೀಡಿದ ವರದಿ ಉಲ್ಲೇಖಿಸಲಾಗಿದೆಯಾದರೂ ಅಂಕಿ-ಅಂಶಗಳ ವ್ಯತ್ಯಾಸಕ್ಕೆ ಕಾರಣವೇನು? ಅಸಲಿಗೆ ದಾಖಲಾದ ಪ್ರಕರಣಗಳೆಷ್ಟು? ಈವರೆಗೆ ಕೈಗೊಂಡ ಕಠಿಣ ಕ್ರಮಗಳೇನು? ಎಂಬ ಅಂಶಗಳಿಲ್ಲ.
ಬದಲಾಗಿ ‘ವಿಜಯಪುರ ಜಿಲ್ಲೆಯ ಅಧೀನದಲ್ಲಿ ಆರು ಉಪನೋಂದಣಾಧಿಕಾರಿ ಕಚೇರಿಗಳಿದ್ದು, ವಿಜಯಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಒಂದು ಮತ್ತು ಇಂಡಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2ಪ್ರಕರಣ ದಾಖಲಾಗಿದ್ದು ಎಫ್‌ಐಆರ್ ದಾಖಲಿಸಲಾಗಿದೆ. ಕಾವೇರಿ 2.0 ತಂತ್ರಾಂಶ ಬಂದ ನಂತರ ಆಧಾರ್ ಕಾರ್ಡ್ ದೃಢೀಕರಣ ಮತ್ತು ಆಧಾರ್ ಒಟಿಪಿ ಜಾರಿಗೆ ಬಂದ ನಂತರ ಖೊಟ್ಟಿ ದಾಖಲೆ ಸೃಷ್ಠಿಸಿ ಆಸ್ತಿ ಕಬಳಿಸುವ ಯಾವುದೇ ಪ್ರಕರಣ ಕಂಡು ಬಂದಿಲ್ಲ....ಅಲ್ಲದೇ ನಕಲಿ ವ್ಯಕ್ತಿಗಳು ಅಸಲಿ ಎಂದು ಬಂಬಿಸಿ ಸ್ಥಿರಾಸ್ತಿ ದಸ್ತಾವೇಜುಗಳನ್ನು ನೋಂದಾಯಿಸಿಕೊಳ್ಳುವುದನ್ನು ತಡೆಗಟ್ಟಬಹುದಾಗಿದೆ’ ಎಂದು ತಿಳಿಸಲಾಗಿದೆ.
ಗಮನೀಯ ಅಂಶವೆಂದರೆ ಉತ್ತರದಲ್ಲೆಲ್ಲೂ ಯತ್ನಾಳರು ಕೇಳಿದ ಪ್ರಕರಣಗಳಿಗೆ ಸಂಬಂಧಿಸಿದ ಗೊಂದಲ, ಅಂಕಿ ಅಂಶಗಳಲ್ಲಿರುವ ವ್ಯತ್ತಾಸ ಕುರಿತು ಸ್ಪಷ್ಟತೆ ಇಲ್ಲ. ಹೀಗಾಗಿ ಸಬ್‌ರಜಿಸ್ಟ್ರಾರ್ ಕಚೇರಿಯ ಎಲ್ಲ ಕುಕೃತ್ಯಗಳ ಹಿಂದೆ ಪ್ರಭಾವಿ ರಾಜಕಾರಣಿಗಳು ಹಾಗೂ ಆಡಳಿತ ಪಕ್ಷದ ಕೈವಾಡ ಇಲ್ಲದೇ ಇರಲು ಹೇಗೆ ಸಾಧ್ಯ ? ಎಂಬ ಪ್ರಶ್ನೆ ಮತ್ತೂ ಪ್ರಶ್ನೆಯಾಗಿಯೇ ಉಳಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net