ಸಮರ್ಪಕ ಚಿಕಿತ್ಸೆಯಿಂದ ಸ್ಕಿಜೋಫ್ರೆನಿಯಾ ದೂರ

ಡಾ.ಚಂದ್ರಶೇಖರ ಹಳಿಂಗಳೆ
ಡಾ.ಚಂದ್ರಶೇಖರ ಹಳಿಂಗಳೆ
Published on
ಕಾಗವಾಡ: ಸ್ಕಿಜೋಫ್ರೆನಿಯಾ ಎಂಬುದು ಗಂಭೀರ ಮಾನಸಿಕ ಅಸ್ವಸ್ಥತೆಯಾಗಿದ್ದರೂ ಸಮರ್ಪಕ ಚಿಕಿತ್ಸೆ, ಕುಟುಂಬದ ಬೆಂಬಲ ಹಾಗೂ ಸಮಾಜದ ಸಹಕಾರ ದೊರೆತರೆ ರೋಗಿ ಮತ್ತೆ ಗೌರವಯುತ ಜೀವನ ನಡೆಸಬಹುದೆಂದು ನಿರ್ಮ ಆಸ್ಪತ್ರೆ ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ಸಂಸ್ಥಾಪಕ ಡಾ.ಚಂದ್ರಶೇಖರ ಹಳಿಂಗಳೆ ಹೇಳಿದರು.
ಮಿರಜ ಪಟ್ಟಣದ ನಿರ್ಮಲ ಆಸ್ಪತ್ರೆ ಸಭಾಭವನದಲ್ಲಿ ಮೇ 24ರಂದು ನಡೆಯಲಿರುವ ವಿಶ್ವ ಸ್ಕಿಜೋಫ್ರೆನಿಯಾ ಜಾಗೃತಿ ದಿನದ ಪೂರ್ವಭಾವಿ ಜನಜಾಗೃತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಅವರು, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು. ತಪ್ಪು ಕಲ್ಪನೆಗಳನ್ನು ದೂರ ಮಾಡುವುದು ಹಾಗೂ ರೋಗಿಗಳಿಗೆ ಸಮಾಜದಲ್ಲಿ ಗೌರವಯುತ ಸ್ಥಾನ ಕಲ್ಪಿಸುವುದು ವಿಶ್ವ ಸ್ಕಿಜೋಫ್ರೆನಿಯಾ ಜಾಗೃತಿ ದಿನದ ಉದ್ದೇಶವಾಗಿದೆ ಎಂದರು.
ಸ್ಕಿಜೋಫ್ರೆನಿಯಾಗೆ ಮೆದುಳಿನ ರಾಸಾಯನಿಕ ಅಸಮತೋಲನ, ತೀವ್ರ ಮಾನಸಿಕ ಒತ್ತಡ, ವ್ಯಸನ ಹಾಗೂ ಏಕಾಂಗಿತನ ಸೇರಿದಂತೆ ಹಲವು ಕಾರಣಗಳಿವೆ. ಸದಾ ಅನುಮಾನ ಪಡುವುದು. ಇಲ್ಲದ ಧ್ವನಿಗಳನ್ನು ಕೇಳಿಸಿಕೊಳ್ಳುವುದು. ಅಸ್ತವ್ಯಸ್ತ ಜೀವನ, ಸಮಾಜದಿಂದ ದೂರವಿರುವುದು, ಭಯ ಹಾಗೂ ನಿದ್ರಾಹೀನತೆ ಮೊದಲಾದವುಗಳು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ವಿಶ್ವಾದ್ಯಂತ ಅಂದಾಜು 2.40 ಲಕ್ಷ ಜನರು ಸ್ಕಿಜೋಫ್ರೆನಿಯಾದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ 40 ಲಕ್ಷ ಜನರಲ್ಲಿ ಈ ಕಾಯಿಲೆ ಕಂಡುಬಂದಿದೆ ಎಂದು ತಿಳಿಸಿದರು.
ಪ್ಯಾರನಾಯ್ಡಾ, ಕ್ಯಾಟಟೋನಿಕ್, ಡಿಸ್‌ಆರ್ಗನೈಜೇಷನ್ ಹಾಗೂ ರೆಸಿಡ್ಯುಯಲ್ ಸೇರಿದಂತೆ ಸ್ಕಿಜೋಫ್ರೆನಿಯಾದ ವಿವಿಧ ಪ್ರಕಾರಗಳ ಬಗ್ಗೆ ಮಾಹಿತಿ ನೀಡಿದ ಅವರು, ನಿರಂತರ ಔಷಧೋಪಚಾರ, ಸಮಾಲೋಚನೆ, ಕುಟುಂಬದ ಸಹಕಾರ ಹಾಗೂ ಪುನರ್ವಸತಿ ಮೂಲಕ ರೋಗವನ್ನು ನಿಯಂತ್ರಿಸಬಹುದು. ಮಾನಸಿಕ ಅಸ್ವಸ್ಥತೆಯಿಂದ ಬಳಲುವವರನ್ನು ಹುಚ್ಚ ಎಂದು ದೂರ ತಳ್ಳದೆ, ಅವರಿಗೆ ಬೆಂಬಲ ನೀಡುವುದು ಸಮಾಜದ ಜವಾಬ್ದಾರಿಯಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net