ನಗರದಲ್ಲಿ ಸದ್ಯ ಎರಡು ಪ್ರತ್ಯೇಕ ಘಟನೆಗಳು ಉದ್ವಿಗ್ನತೆಗೆ ಕಾರಣವಾಗಿವೆ. ಮೊದಲನೆಯದಾಗಿ, ರಂಜಾನ್ ಹಬ್ಬದಂದು ಗೋಸಾಗಾಟ ತಡೆಯಲು ಹೋದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹಾಗೆಯೇ, ಮಾವಿನತೋಪು ಬಡಾವಣೆಯ ಅಂಜುಮಾನ್ ಪಾಠಶಾಲೆಗೆ ಮಂಜೂರಾದ ನಿವೇಶನದಲ್ಲಿ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಮಸೀದಿ ನಿರ್ಮಿಸಲಾಗುತ್ತಿದೆ ಎಂದು ಹಿಂದೂಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಘಟನೆಗಳನ್ನು ಖಂಡಿಸಿ ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿ ವಿರೋಧಿಸಿ ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಮಾ.24ರಂದು "ತಿಪಟೂರು ಬಂದ್'ಗೆ ಕರೆ ನೀಡಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ನಗರದಾದ್ಯಂತ ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.