ದ್ವೇಷ ಬಹಿಷ್ಕಾರಕ್ಕೆ ಜೈಲು ಶಿಕ್ಷೆ; ಭಾಷಣ, ಅಪರಾಧದ ವ್ಯಾಖ್ಯಾನಕ್ಕೆ ಬಿಜೆಪಿ ಆಕ್ಷೇಪ, ತೀವ್ರ ಆಕ್ರೋಶ

ಗೃಹಸಚಿವ ಡಾ. ಜಿ ಪರಮೇಶ್ವರ್​
ಗೃಹಸಚಿವ ಡಾ. ಜಿ ಪರಮೇಶ್ವರ್​
Published on

ಪ್ರಮುಖ ಮುಖ್ಯಾಂಶಗಳು

  • ದ್ವೇಷ ಅಪರಾಧಗಳ ಮಸೂದೆಗೆ ವಿಧಾನಸಭೆಯಲ್ಲಿ ಅನುಮೋದನೆ
  • ಭಾಷಣ, ಅಪರಾಧದ ವ್ಯಾಖ್ಯಾನಕ್ಕೆ ಬಿಜೆಪಿ ಆಕ್ಷೇಪ, ತೀವ್ರ ಆಕ್ರೋಶ

ಬೆಳಗಾವಿ: ಪ್ರತಿಪಕ್ಷಗಳ ತೀವ್ರ ವಿರೋಧ, ಪ್ರತಿಭಟನೆ ನಡುವೆಯೇ ‘ದ್ವೇಷ ಭಾಷಣ, ಅಪರಾಧ’ಕ್ಕೆ ಅಂಕುಶ, ಸಾಮಾಜಿಕ ಬಹಿಷ್ಕಾರಕ್ಕೆ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಇವೆರಡೂ ಸೇರಿದಂತೆ ಒಟ್ಟು ನಾಲ್ಕು ಮಹತ್ವದ ಮಸೂದೆಗಳು ಗುರುವಾರ ಅನುಮೋದನೆ ಪಡೆದುಕೊಂಡವು.

ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರ್ಯಾಲೋಚನೆಗೆ ತಂದರು. ಗದ್ದಲದ ನಡುವೆ ಅಂಗೀಕಾರಕ್ಕೆ ಮುನ್ನ, ಪುನರಾವರ್ತಿತ ಅಪರಾಧಕ್ಕೆ ಜೈಲು ಶಿಕ್ಷೆಯನ್ನು 10 ರಿಂದ ಏಳು ವರ್ಷಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು. ಸಚಿವರು ಮಸೂದೆ ಕುರಿತು ವಿವರ ನೀಡುತ್ತಿರುವಾಗಲೇ ಪ್ರತಿಪಕ್ಷ ನಾಯಕ ಆರ್.ಅಶೋಕ್, ಹಿರಿಯ ಶಾಸಕ ವಿ.ಸುನಿಲ್​ಕುಮಾರ್ ಇನ್ನಿತರರು ‘ದ್ವೇಷ ಭಾಷಣ ಹಾಗೂ ಅಪರಾಧ’ದ ಅರ್ಥ, ವ್ಯಾಖ್ಯಾನದ ಕುರಿತು ತಕರಾರು ತೆಗೆದರು. ಒಂದು ಧರ್ಮದಲ್ಲಿರುವ ಉಪದೇಶಗಳು, ಸಾರಾಂಶಗಳು ಈ ಮಸೂದೆಯಲ್ಲಿನ ಉಲ್ಲೇಖಗಳನ್ನು ಧ್ವನಿಸುತ್ತವೆ. ಧರ್ಮ ಉಲ್ಲೇಖಿಸಿ ಭಾಷಣ ಮಾಡಿದವರನ್ನೂ ದ್ವೇಷ ಪ್ರತಿಬಂಧ ಕಾಯ್ದೆಯಡಿ ತರಲು ಸಾಧ್ಯವೆ? ಎಂಬ ಜಿಜ್ಞಾಸೆ ತೋಡಿಕೊಂಡರು.

ಕಿಡಿ ಹಚ್ಚಿದ ಕರಾವಳಿ ಬೆಂಕಿ: ಸಂವಿಧಾನ ವಿರೋಧಿ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವ ಅಂಶ ಮಸೂದೆಯಲ್ಲಿದ್ದು, ಸರ್ಕಾರವೇ ದ್ವೇಷ ಸಾಧಿಸಲು ಹೊರಟಿದೆ ಎಂದು ವಿಪಕ್ಷಗಳ ಸದಸ್ಯರು ದೂರಿದರು. ಈ ವೇಳೆ ಕರಾವಳಿ ಭಾಗದ ಶಾಸಕರು ಏಕಕಾಲಕ್ಕೆ ಎದ್ದುನಿಂತು ವಿರೋಧ ವ್ಯಕ್ತಪಡಿಸಿದಾಗ ಮಧ್ಯ ಪ್ರವೇಶಿಸಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ‘ಕರಾವಳಿಗೆ ಬೆಂಕಿ ಹಚ್ಚಿ, ಇಲ್ಲಿಯೂ ಅಡ್ಡಿಪಡಿಸುತ್ತಿದ್ದೀರಿ’ ಎಂದಾಗ ಕರಾವಳಿ ಶಾಸಕರು ತೀವ್ರವಾಗಿ ವಿರೋಧಿಸಿ ಸ್ಪೀಕರ್ ಪೀಠದ ಮುಂದೆ ಧರಣಿ ಹೂಡಿದರು.

"

ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದ ಪಕ್ಷದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಇಂತಹ ಪೂರ್ವಾಗ್ರಹಪೀಡಿತ ಮಸೂದೆಗಳ ಜಾರಿಯಿಂದ ರಾಜ್ಯದಲ್ಲಿ ಪೊಲೀಸರ ದೌರ್ಜನ್ಯ ಹೆಚ್ಚಾಗಲಿದೆ, ಹಿಟ್ಲರ್​ಗಳಾಗಲಿದ್ದಾರೆ. ಮಾಧ್ಯಮಗಳು ಸೇರಿದಂತೆ ಜನರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ.

ಬಾಯ್ಕಾಟ್ ನಿಷೇಧ

ಸಾಮಾಜಿಕ ಬಹಿಷ್ಕಾರಕ್ಕೆ ಮೂರು ವರ್ಷ ಜೈಲು ಶಿಕ್ಷೆ, ಒಂದು ಲಕ್ಷ ರೂ. ದಂಡ ಪ್ರಸ್ತಾಪಿತ ‘ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ, 2025’ಕ್ಕೆ ಸದನ ಅಸ್ತು ಎಂದಿತು. ಇದಕ್ಕೂ ಮುನ್ನ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮಸೂದೆಗೆ ಕಾರಣ, ಉದ್ದೇಶಗಳನ್ನು ವಿವರಿಸಿ, ಮಾನವ ಹಕ್ಕುಗಳು, ಸ್ವಾತಂತ್ರ್ಯ, ಸ್ವಾಭಿಮಾನ, ವ್ಯಕ್ತಿ ಘನತೆ-ಗೌರವಕ್ಕೆ ಧಕ್ಕೆ ತರುವ, ಸಂವಿಧಾನಬಾಹಿರವಾದ ಈ ಅನಿಷ್ಠ ಪದ್ಧತಿಯನ್ನು ಬಿಗಿ ಕಾನೂನು ಕ್ರಮದ ಮೂಲಕ ನಿಷೇಧಿಸುವ ಅಗತ್ಯವಿದೆ ಎಂದರು. ಈ ಮಸೂದೆಗೆ ಪಕ್ಷಾತೀತವಾಗಿ ಒಪ್ಪಿಗೆ ದೊರೆತು, ಸಾಮಾಜಿಕ ಬಹಿಷ್ಕಾರ ಇನ್ನೂ ಆಚರಣೆಯಲ್ಲಿ ಇರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿ, ಅಮಾನುಷ ಕೃತ್ಯವೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net