ಭಾಲ್ಕಿ: ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನೀರಾವರಿ ಸೌಲಭ್ಯ ವಿಸ್ತರಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದಲ್ಲಿ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಶುಕ್ರವಾರ ಮೋಟಾರ್ ಮತ್ತು ಪಂಪಸೆಟ್ ವಿತರಿಸಿ ಅವರು ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ಅಭಿವೃದ್ಧಿಗೆ ಹಾಗೂ ನೀರಾವರಿ ಸೌಲಭ್ಯ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಗಂಗಾ ಕಲ್ಯಾಣ ಯೋಜನೆಯ ಮೂಲಕ ಸಣ್ಣ ರೈತರಿಗೆ ನೀರಿನ ಸೌಲಭ್ಯ ಒದಗಿಸಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಫಲಾನುಭವಿಗಳು ಈ ಸೌಲಭ್ಯವನ್ನು ಪಡೆದು ಉತ್ತಮ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ನೀರಾವರಿ ಸೌಲಭ್ಯವನ್ನು ಸಮರ್ಥವಾಗಿ ಬಳಸಿಕೊಂಡು ರೈತರು ವಿವಿಧ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ತಿಳಿಸಿದರು. ನಿಗಮದ ಅಧಿಕಾರಿಗಳು, ಪ್ರಮುಖರು, ಫಲಾನುಭವಿಗಳು ಇದ್ದರು.