ಯಳಂದೂರು: ಕ್ಷೇತ್ರಾದ್ಯಂತ ಪರಿಶಿಷ್ಟ ವರ್ಗಗಳ ವ್ಯಾಪ್ತಿಯ ಸಮುದಾಯ ಭವನಗಳಿಗೆ ಇದುವರೆವಿಗೆ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದ್ದು, ಹಲವು ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.
ತಾಲೂಕಿನ ಯರಿಯೂರು ಗ್ರಾಮದಲ್ಲಿ ಭಾನುವಾರ ನಾಯಕ ಸಮುದಾಯ ಭವನದ ಮುಂದುವರಿದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಯಳಂದೂರು ಪಟ್ಟಣದ ವಾಲ್ಮೀಕಿ ಭವನಕ್ಕೆ 1 ಕೋಟಿ ರೂ., ಹೊಂಗನೂರು ನಾಯಕ ಸಮುದಾಯ ಭವನಕ್ಕೆ 25 ಲಕ್ಷ ರೂ. ಬಿಳಿಗಿರಿರಂಗನಬೆಟ್ಟಕ್ಕೆ 25 ಲಕ್ಷ, ಯರಕನಗದ್ದೆಗೆ 20 ಲಕ್ಷ ರೂ. ಕೆಸ್ತೂರಿಗೆ 20 ಲಕ್ಷ ರೂ. ಅಗರ ಗ್ರಾಮದ ನಾಯಕ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ 25 ಲಕ್ಷ ರೂ. ಹಾಗೂ ಯರಿಯೂರು ಗ್ರಾಮದ ನಾಯಕ ಸಮುದಾಯ ಭವನದ ಕಾಮಗಾರಿಗೆ 20 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.
ಈ ಕಾಮಗಾರಿ ನಿರ್ಮಿತಿ ಕೇಂದ್ರದ ವತಿಯಿಂದ ನಡೆಯಲಿದೆ. ಮುಂದಿನ 6 ತಿಂಗಳಲ್ಲಿ ಇದು ಪೂರ್ಣಗೊಳ್ಳಲಿದೆ. ಇದರೊಂದಿಗೆ ನನ್ನ ಶಾಸಕರ ನಿಧಿಯಿಂದ ಈ ಹಿಂದೆ ಬಂದಿದ್ದ 25 ಕೋಟಿ ರೂ. ಅನುದಾನವನ್ನು ಪರಿಶಿಷ್ಟ ಜಾತಿ, ವರ್ಗ, ಸೇರಿದಂತೆ ಉಪ್ಪಾರ, ಮಡಿವಾಳ, ಕುಂಬಾರ, ಸವಿತಾ ಸಮಾಜ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಜನಾಂಗದ ಸಣ್ಣಪುಟ್ಟ ಸಮುದಾಯಗಳ ಭವನಗಳಿಗೆ ನಾನು ಅನುದಾನ ನೀಡಿದ್ದೇನೆ. ಇದರ ಉದ್ದೇಶ ಸ್ಪಷ್ಟವಾಗಿದ್ದು, ಇದು ಪೂರ್ಣಗೊಳ್ಳಬೇಕು. ಈ ಭವನಗಳು ಆಯಾ ಜನಾಂಗಗಳ ಶಕ್ತಿ ಕೇಂದ್ರಗಳಾಗಬೇಕು ಎಂಬ ಉದ್ದೇಶವಿದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ನ್ಯಾಯ ಒದಗಿಸಿದ್ದೇನೆ ಎಂಬ ಆತ್ಮತೃಪ್ತಿ ಇದೆ. ಮುಂದಿನ ದಿನಗಳಲ್ಲಿ ಎಲ್ಲ ಸಮುದಾಯಗಳ ಇತರೆ ಕೆಲಸಗಳನ್ನು ಮಾಡಿ ಸೇವೆ ಮಾಡಲು ಬದ್ಧನಾಗಿದ್ದೇನೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಲಾವಣ್ಯ ಕುಮಾರ್, ಉಪಾಧ್ಯಕ್ಷ ಚಿನ್ನಸ್ವಾಮಿ ಸದಸ್ಯರಾದ ಮಹದೇವಯ್ಯ, ಪ್ರವೀಣ್, ಅಂಬಳೆ ಗ್ರಾಪಂ ಅಧ್ಯಕ್ಷ ನವೀನ್ ಸದಸ್ಯ ಸಿದ್ಧನಾಯಕ, ಎಂಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಜಯರಾಮ್, ನಟರಾಜು, ಪಪಂ ಮಾಜಿ ಸದಸ್ಯ ಬಿ.ರವಿ, ನಿರ್ಮಿತಿ ಕೇಂದ್ರದ ಜೆಇ ನಂದೀಶ್ ಇತರರು ಇದ್ದರು.