

ವಿಜಯಪುರ :
ದೇವನಹಳ್ಳಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎನ್.ಮುನಿರಾಜು ಗುರುವಾರ ವಿಜಯಪುರ ಹೋಬಳಿಯ ಕೋರಮಂಗಲ ಗ್ರಾಪಂಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಕಡತಗಳನ್ನು ಪರಿಶೀಲಿಸಿದರು.
ಕಂದಾಯ ವಸೂಲಾತಿ ಪ್ರಗತಿ, ಹಸಿ ಕಸ ಮತ್ತು ಒಣ ಕಸ ಸಂಗ್ರಹಣೆ ಹಾಗೂ ವಿಲೇವಾರಿ ಪ್ರಕ್ರಿಯೆ ಪರಿಶೀಲಿಸಿದ ಅವರು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಮತ್ತು ಕೊಳವೆಬಾವಿಗಳ ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.
ಸಂತಾನಹರಣ ಕೇಂದ್ರ ವೀಕ್ಷಣೆ :
ಗುಡುವನಹಳ್ಳಿಯಲ್ಲಿ ನಿರ್ಮಿಸಿರುವ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರದ ಕಾರ್ಯವೈಖರಿ ಹಾಗೂ ವಸತಿ ಯೋಜನೆಯಡಿ ನಿವೇಶನ ಹಂಚಿಕೆಗೆ ಗುರುತಿಸಿರುವ ಸ್ಥಳ ಹಾಗೂ ಜಾನುವಾರುಗಳಿಗೆ ಮೇವು ಬೆಳೆಯಲು ನಿಗದಿಪಡಿಸಿರುವ ಜಮೀನನ್ನು ಪರಿಶೀಲಿಸಿದರು.
ಆಡಳಿತಾತ್ಮಕ ಪ್ರಗತಿ : ಗ್ರಾಮ ಆಡಳಿತಾಧಿಕಾರಿಗಳಿಂದ ಎಸ್ಐಆರ್ ಕಾರ್ಯ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆಯ ಪ್ರಗತಿ ಕುರಿತು ವರದಿ ಪಡೆದುಕೊಂಡ ಇಒ, ವಿಕಲಾಂಗ ಫಲಾನುಭವಿಗಳಿಗೆ ವಿಬಿ -ಜಿ ರಾಮ್- ಜಿ ಯೋಜನೆಯ ಕರಪತ್ರ ವಿತರಿಸಿದರು. ಯೋಜನೆಯಡಿ ಲಭ್ಯವಿರುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಅರಿವು ಮೂಡಿಸಿದರು.