ಗುಣಾತ್ಮಕ ಶಿಕ್ಷಣದ ತಳಪಾಯ ಪ್ರಾಥಮಿಕ ಹಂತ

Primary stage is the foundation of quality education.
Primary stage is the foundation of quality education.
Published on
ಚಿಕ್ಕನಾಯಕನಹಳ್ಳಿ: ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಕಾರ್ಖಾನೆಗಳೆಂದರೆ ಪ್ರಾಥಮಿಕ ಶಾಲೆಗಳು. ಪ್ರತಿಯೊಬ್ಬರ ಭವಿಷ್ಯ ನಿರ್ಧಾರವಾಗುವುದು ಪ್ರಾಥಮಿಕ ಶಾಲಾ ಹಂತದ ಶಿಕ್ಷಣದಿಂದ. ಇದು ಗುಣಾತ್ಮಕ ಶಿಕ್ಷಣದ ತಳಪಾಯವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.
ಪಟ್ಟಣದ ತೀನಂಶ್ರೀ ಭವನದಲ್ಲಿ ಗುರುವಾರ ತಾಲೂಕಿನ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಣ ಎಲ್ಲರಿಗೂ ಸಿಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ಮಕ್ಕಳಲ್ಲಿ ಕಲಿಕೆ ಬಗ್ಗೆ ಆಸಕ್ತಿ ಮೂಡಿಸಿ. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಉತ್ತಮ ಶಿಕ್ಷಣ ಮುಖ್ಯವಾಗಿದೆ ಎಂದರು.
ಸರ್ಕಾರ ಪ್ರತಿ ಮಗುವಿನ ಮೇಲೆ ವಾರ್ಷಿಕ 50 ರಿಂದ 55 ಸಾವಿರ ರೂ. ವೆಚ್ಚ ಮಾಡುತ್ತಿದೆ. ಗುಣಾತ್ಮಕ ಶಿಕ್ಷಣ ನೀಡಬೇಕು ಹಾಗೂ ಶಾಲೆಗಳನ್ನು ಉಳಿಸುವ ಕೆಲಸವಾಗಬೇಕು. 29ರಿಂದ ಶಾಲೆಗಳು ಪ್ರಾರಂಭವಾಗುತ್ತಿದ್ದು, ಶಿಕ್ಷಕರು, ಆಯಾ ಶಾಲೆಗಳ ಗ್ರಾಮದ ಮುಖಂಡರು, ಅಭಿವೃದ್ಧಿ ಸಮಿತಿ, ಪಾಲಕರ ಸಭೆ ಕರೆದು ಶಾಲೆ ಅಭಿವೃದ್ಧಿ ಬಗ್ಗೆ ಸಹಕಾರ ಪಡೆದು ಉತ್ತಮ ವಾತಾವರಣ ನಿರ್ಮಿಸಿ ಮಕ್ಕಳ ಭವಿಷ್ಯ ರೂಪಿಸಬೇಕು ಎಂದರು.
ಬಿಇಒ ಸಿ.ಎಸ್​.ಕಾಂತರಾಜು ಮಾತನಾಡಿ, ಸರ್ಕಾರದ ಸುತ್ತೋಲೆ, ನಿಯಮದಂತೆ ಶಿಕ್ಷಕರು ಕೆಲಸ ಮಾಡಬೇಕು. ಸಮಯ ವ್ಯರ್ಥಮಾಡಬೇಡಿ, ನಿಯಮಾವಳಿಗಳಲ್ಲಿನ ಬದಲಾವಣೆ ಶೈಕ್ಷಣಿಕವಾಗಿ ಆಗುತ್ತಿರುವ ಬದಲಾವಣೆಗಳಿಗೆ ನಾವು ಹೊಂದಿಕೊಂಡು ಕೆಲಸ ಮಾಡಬೇಕಾಗುತ್ತದೆ. ನಮಗೆ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಅಕ್ಷರದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಗವಿರಂಗಯ್ಯ ಮಾತನಾಡಿ, ಈಗಾಗಲೇ ಎಲ್ಲ ಶಾಲೆಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿ ಒದಗಿಸಲಾಗಿದೆ. ಶಿಕ್ಷಕರು ಗುಣಮಟ್ಟ ಪರೀಕ್ಷಿಸಿಕೊಳ್ಳಿ. ಅಡುಗೆ ಕೋಣೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ, ಎಸ್​ಡಿಎಂಸಿಯವರ ಸಹಕಾರ ಪಡೆಯಿರಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ಶಿಕ್ಷಕರಿಗೆ ತಿಳಿಸಿದರು.
ಸಹಕಾರ ಸಂಘದ ಅಧ್ಯಕ್ಷ ಶಿವಕುಮಾರ್​, ರೇವಣ್ಣ, ನಾಗರಾಜು, ಈರಸಿದ್ದಯ್ಯ, ಯೋಗೀಶ್​, ಪ್ರಕಾಶ್​, ನಟರಾಜ್​ಅರಸ್​ ಹಾಗೂ ವಿವಿಧ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಿಆರ್​ಪಿ, ಬಿಆರ್​ಪಿ, ಇಸಿಒ, ಬಿಆರ್​ಸಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net