ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ: ಎರಡನೇ ಬಾರಿಗೆ ಚಂದ್ರಶೇಖರ ನುಗ್ಗಲಿ ರಾಜ್ಯಾಧ್ಯಕ್ಷ, ಯಾರೆಲ್ಲ ಆಯ್ಕೆ?

ಚಂದ್ರಶೇಖರ ನುಗ್ಗಲಿ
ಚಂದ್ರಶೇಖರ ನುಗ್ಗಲಿ
Published on

ಪ್ರಮುಖ ಮುಖ್ಯಾಂಶಗಳು

  • ಸಂಘದ ರಾಜ್ಯಾಧ್ಯಕ್ಷರಾಗಿ ಎರಡನೇ ಅವಧಿಗೆ ಚಂದ್ರಶೇಖರ ನುಗ್ಗಲಿ ಮತ್ತು ಪ್ರಧಾನ ಕಾರ್ಯದರ್ಶಿ ಚೇತನ್ ಎಚ್.ಎಸ್. ಮರು ಆಯ್ಕೆ
  • ರಾಜ್ಯಮಟ್ಟದ ಪದಾಧಿಕಾರಿಗಳ ಇಡೀ ತಂಡ ಅವಿರೋಧ ಆಯ್ಕೆ
  • ಸಂಘಟನೆಯ ನಾಯಕತ್ವ ಸುಲಭದ ಕೆಲಸವಲ್ಲ, ನಮ್ಮ ಮುಂದೆ ಸವಾಲುಗಳ ರಾಶಿಯೇ ಇದೆ ಎಂದ ನುಗ್ಗಲಿ
ಬೆಂಗಳೂರು: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಮಟ್ಟದ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದಾರೆಂದು ರಾಜ್ಯ ಚುನಾವಣಾಧಿಕಾರಿ ಮೆಹಬೂಬ್ ಪಾಷಾ ಮೂಲಿಮನಿ ತಿಳಿಸಿದ್ದಾರೆ.
ಸಂಘದ ರಾಜ್ಯಾಧ್ಯಕ್ಷರಾಗಿ ಎರಡನೇ ಅವಧಿಗೆ ಚಂದ್ರಶೇಖರ ನುಗ್ಗಲಿ ಮತ್ತು ಪ್ರಧಾನ ಕಾರ್ಯದರ್ಶಿ ಚೇತನ್ ಎಚ್.ಎಸ್. ಮರು ಆಯ್ಕೆಯಾಗಿದ್ದಾರೆ. ಖಜಾಂಚಿ- ರಾಜಶೇಖರ ಎಂ. ಹೊನ್ನಪ್ಪನವರ, ಉಪಾಧ್ಯಕ್ಷೆ- ಪದ್ಮಲತಾ ಜೆ., ಉಪಾಧ್ಯಕ್ಷ- ಮಾರುತೇಶ ಆರ್., ಸಹ ಕಾರ್ಯದರ್ಶಿ- ಪ್ರಮೀಳಾ ತಿಪ್ಪಣ್ಣ ಕಾಮನಹಳ್ಳಿ, ಸಹ ಕಾರ್ಯದರ್ಶಿ- ಜಯಾ ರಾ ಹೆಬಳಿ, ಸಂಘಟನಾ ಕಾರ್ಯದರ್ಶಿ- ಸುಂದರೇಶ್ ಬಿ.ಎಸ್.. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ 5 ವರ್ಷಗಳ ಅವಧಿಗೆ ಈ ತಂಡವು ಸಂಘವನ್ನು ಮುನ್ನೆಡಸಲಿದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಚಂದ್ರಶೇಖರ ನುಗ್ಗಲಿ, 55 ವರ್ಷಗಳ ಇತಿಹಾಸವಿರುವ ಸಂಘಟನೆಯ ನಾಯಕತ್ವ ಸುಲಭದ ಕೆಲಸವಲ್ಲ, ನಮ್ಮ ಮುಂದೆ ಸವಾಲುಗಳ ರಾಶಿಯೇ ಇದೆ. ಪದವಿ ಪೂರೈಸಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ಹೆಚ್ಚುವರಿ ವೇತನ ಬಡ್ತಿ ಕೊಡಿಸುವುದು, ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲೆಗಳಿಗೆ ಬಡ್ತಿ ಕೊಡಿಸುವುದು, ಶಿಕ್ಷಕರ ಸಂಘಕ್ಕೆ ಸ್ವಂತ ನಿವೇಶನ ಪಡೆದು ಸುಸಜ್ಜಿತ ಕಟ್ಟಡ ಹಾಗೂ ರಾಜ್ಯಾದ್ಯಂತ ಬರುವ ಶಿಕ್ಷಕರಿಗೆ ವಸತಿ ಕೊಠಡಿಗಳನ್ನು ನಿರ್ಮಾಣ ಮಾಡುವುದು ನಮ್ಮ ಪ್ರಮುಖ ಗುರಿಯಾಗಿದೆ. 
ಇದರೊಂದಿಗೆ ರಾಜ್ಯದ ಎಲ್ಲ ತಾಲೂಕು ಮತ್ತು ಜಿಲ್ಲೆಗಳಲ್ಲಿ ಸಂಘಟನೆಯನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಿ, ಶಿಕ್ಷಕರ ನಿರಂತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ನಮ್ಮ ತಂಡ ಬದ್ಧವಾಗಿದೆ ಎಂಬ ಭರವಸೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net