ತಾಳಿಕೋಟೆ ಪಟ್ಟಣದ ಶ್ರೀ ಗ್ರಾಮದೇವ ಜಾತ್ರೋತ್ಸವ ಅಂಗವಾಗಿ ರಾಜವಾಡೆಯಲ್ಲಿ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಬಿಸರಳ್ಳಿಯ ಗವಿಸಿದ್ಧೇಶ್ವರ ಶಾಖಾಮಠದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಮಾತನಾಡಿದರು. ಪ್ರಭುಗೌಡ ದೇಸಾಯಿ, ಆರ್.ಎಸ್. ಪಾಟೀಲ, ಮುತ್ತುಗೌಡ ಪಾಟೀಲ ಇತರರಿದ್ದರು.
ತಾಳಿಕೋಟೆ: ಮಕ್ಕಳಿಗೆ ಚಿಕ್ಕವರಿರುವಾಗಲೇ ಒಳ್ಳೆಯ ಸಂಸ್ಕಾರ ಕಲಿಸಿ ಸಂಸ್ಕಾರವಂತರನ್ನಾಗಿ ರೂಪಿಸಿದರೆ ಅವರ ಜೀವನದಲ್ಲಿ ಬೇಕಾದದ್ದನ್ನು ಸಾಧಿಸಬಹುದಾಗಿದೆ ಎಂದು ಬಿಸರಳ್ಳಿಯ ಗವಿಸಿದ್ಧೇಶ್ವರ ಶಾಖಾ ಮಠದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ನುಡಿದರು.
ಪಟ್ಟಣದ ಗ್ರಾಮ ದೇವತಾ ಜಾತ್ರೋತ್ಸವ ಅಂಗವಾಗಿ ರಾಜವಾಡೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧರ್ಮ ಸಭೆ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಮಕ್ಕಳಲ್ಲಿ ಒಳ್ಳೆಯ ಜ್ಞಾನ ಬೆಳೆಯುವಂತೆ ಪಾಲಕರು ಎಚ್ಚರ ವಹಿಸಬೇಕು ಎಂದರು.
ಇಂದಿನ ಕಾಲದಲ್ಲಿ ಮಕ್ಕಳಿಗೆ ಉಣಬಡಿಸಲು ಅವರ ಗಮನ ಸೆಳೆಯಲು ಚಂದಮಾಮಾ ಅಲ್ಲಿದ್ದಾನೆ ತೋರಿಸುವ ಕಾರ್ಯ ನಡೆಯುತ್ತಿತ್ತು. ಆದರೆ ಹಿಂದಿನ ದಿನಮಾನದಲ್ಲಿ ಚಂದಮಾಮನ ಮೊದಲು ಮೊಬೈಲ್ ತೋರಿಸಿ ಮಕ್ಕಳಿಗೆ ಉಣಬಡಿಸುವ ಕಾರ್ಯ ಕೆಲವೆಡೆ ನಡೆದಿದೆ ಎಂದು ವಿಷಾದಿಸಿದರು. ಭಾರತೀಯ ಸಂಸ್ಕೃತಿಯೆಂಬ ಇಲ್ಲಿಯ ಜ್ಞಾನವನ್ನೇ ಉಸಿರಾಗಿಸಿಕೊಂಡು ಬದುಕುವವರೇ ನಿಜವಾದ ಭಾರತೀಯರು ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಖಾಸ್ಗತೇಶ್ವರ ಮಠದ ಪೀಠಾಧಿಪತಿ ಬಾಲಶಿವಯೋಗಿ ಶ್ರೀ ಸಿದ್ಧಲಿಂಗ ದೇವರು ಮಾತನಾಡಿ, ಇಂದು ವರುಣನ ಕೃಪೆಯಾಗಿದೆ ಅದಕ್ಕೆ ಮಳೆ ಬರುತ್ತಿದೆ. ಯಾವ ಮಕ್ಕಳೂ ಉಂಡರೆ ಕೇಡಲ್ಲ. ಅದರಂತೆ ಮಳೆ ಬಂದರೂ ಕೇಡಲ್ಲವೆಂಬಂತೆ ನಮ್ಮೂರ ದೇವತೆ ಮಳೆ ಆಗಮಿಸುತ್ತಿರುವುದು ಸಂತಸ ತಂದಿದೆ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಪ್ರಭುಗೌಡ ದೇಸಾಯಿ, ಜಿಲ್ಲಾ ಭಾಜಪ ಮಾಜಿ ಅಧ್ಯಕ್ಷ ಆರ್.ಎಸ್. ಪಾಟೀಲ, ಮುತ್ತುಗೌಡ ಪಾಟೀಲ, ಶರಣು ಗೊಟಗುಣಕಿ, ಬಾಪುಗೌಡ ಪಾಟೀಲ, ದುಂಡಪ್ಪಗೌಡ ಪಾಟೀಲ, ಗುರುಸಂಗಪ್ಪ ಕಶೆಟ್ಟಿ, ಅಣ್ಣಪ್ಪ ಜಗತಾಪ, ಶಂಕರಗೌಡ ಪಾಟೀಲ, ಮಲ್ಲನಗೌಡ ಹಿರೇಗೌಡರ, ಸುರೇಶ ಪಾಟೀಲ ಇತರರಿದ್ದರು.