ಪೂರ್ವ ಮುಂಗಾರು ಮಳೆ ಬೆಳೆಗಳಿಗೆ ವರ; ಶುಂಠಿ, ತರಕಾರಿ ಬೆಳೆಗಾರರಿಗೆ ಅನುಕೂಲ

ಶುಂಠಿ, ತರಕಾರಿ ಬೆಳೆಗಾರರಿಗೆ ಅನುಕೂಲ
ಶುಂಠಿ, ತರಕಾರಿ ಬೆಳೆಗಾರರಿಗೆ ಅನುಕೂಲ
Published on

ಬೆಂಗಳೂರು: ಪ್ರಸ್ತುತ ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದು, ಶುಂಠಿ ಸೇರಿ ಇತರ ಬೆಳೆಗಳಿಗೆ ಅನುಕೂಲವಾಗುತ್ತಿದೆ. ಮಳೆಯಿಂದಾಗಿ ಬೋರ್​ವೆಲ್​ಗಳ ಮೇಲೆ ಅವಲಂಬನೆಯೂ ತುಸು ತಗ್ಗಿದೆ.

ಬೇಸಿಗೆ ಹಂಗಾಮಿನಲ್ಲಿ ಕಾವೇರಿ ಅಚ್ಚುಕಟ್ಟು ಹಾಗೂ ಕೆರೆ ಅಚ್ಚುಕಟ್ಟು ಪ್ರದೇಶ ಮತ್ತು ಬಯಲುಸೀಮೆಯ ನೀರಾವರಿ ಪ್ರದೇಶಗಳಲ್ಲಿ ಏಕದಳ ಧಾನ್ಯ ಹಾಗೂ ತರಕಾರಿ ಬೆಳೆಯುತ್ತಾರೆ. ಹಾಸನ, ತುಮಕೂರು, ಕೋಲಾರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ರಾಮನಗರ, ಬೆಂ. ಗ್ರಾಮಾಂತರ ರೈತರು, ಆಲೂಗಡ್ಡೆ, ಟೊಮ್ಯಾಟೊ ಸೇರಿ ವಿವಿಧ ತರಕಾರಿ ಬೆಳೆಯುತ್ತಾರೆ. 

ಮೈಸೂರು ಭಾಗದ ನಂಜನಗೂಡು ಸುತ್ತಮುತ್ತ ದ್ವಿದಳ ಧಾನ್ಯಗಳನ್ನು ಬೆಳೆಯುತ್ತಾರೆ. ಉ.ಕರ್ನಾಟಕ ಭಾಗದಲ್ಲಿ ಹೆಸರು, ಉದ್ದು, ಸೋಯಾ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭತ್ತ ಬೆಳೆಯಲಾಗುತ್ತದೆ. ಪೂರ್ವ ಮುಂಗಾರಿನ ಮಳೆಯಿಂದಾಗಿ ಇಳೆಗೆ ತಂಪು ಜತೆಗೆ ಬೆಳೆಗಳಿಗೂ ನೀರು ಸಿಗಲಿದೆ. ಅದರಂತೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ 3-4 ಬಾರಿ ಉತ್ತಮ ಮಳೆ ಸುರಿದಿದ್ದು, ಬೆಳೆಗಳಿಗೆ ವರದಾನವಾಗಿದೆ.

ವರ್ಷಕ್ಕೆ 2 ಬೆಳೆ

ಮುಂಗಾರಿಗೂ ಮುನ್ನ ರೈತರು ಅಲ್ಪಾವಧಿ ಬೆಳೆಗೆ ಆದ್ಯತೆ ನೀಡಿದರೆ ವರ್ಷದಲ್ಲಿ 2 ಬೆಳೆ ಬೆಳೆಯಬಹುದು. ಏಕೆಂದರೆ, ಹಲವು ವರ್ಷಗಳಿಂದ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಸಾಮಾನ್ಯವಾಗಿ ಅಂತರ್ಜಲ ಕುಸಿತವಾಗಿ ಬೋರ್​ವೆಲ್ ಬತ್ತಲಿವೆ. ಆದರೆ, ಏಪ್ರಿಲ್, ಮೇನಲ್ಲಿ ಉತ್ತಮ ಮಳೆಯಾಗುವುದರಿಂದ ಅಂತರ್ಜಲ ಮರುಪೂರಣವಾಗುವ ಜತೆಗೆ ಅಲ್ಪಾವಧಿ ಬೆಳೆಗಳಿಗೆ ಅನುಕೂಲವಾಗಲಿದೆ. ಕೊಳವೆಬಾವಿ, ವಿದ್ಯುತ್ ಬಳಕೆ ಮೇಲೆ ಅವಲಂಬನೆ ಕಡಿಮೆಯಾಗಲಿದ್ದು, ಜಾನುವಾರು ಗಳ ಮೇವಿಗೂ ಸಹಕಾರಿಯಾಗಲಿದೆ ಎಂದು ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಹೇಳುತ್ತಾರೆ.

ವಾಡಿಕೆಗಿಂತ ಅಧಿಕ ಮಳೆ

ಪ್ರಸಕ್ತ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ. ವಾಡಿಕೆಯಂತೆ 30 ಮಿಮೀ ಮಳೆಯಾಗಬೇಕಿತ್ತು. ಆದರೆ. 60 ಮಿಮೀ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈಗಾಗಲೇ ಮುನ್ಸೂಚನೆ ಕೊಟ್ಟಿದೆ.

ವಾಡಿಕೆಯಂತೆ ಉಷ್ಣಾಂಶ ದಾಖಲು

ಆಗಾಗ್ಗೆ ಮಳೆ ಸುರಿಯುತ್ತಿರುವುದು, ಮೋಡ ಕವಿದ ವಾತಾವರಣ ಸೇರಿ ಇತರ ಕಾರಣಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಯಂತೆ ಉಷ್ಣಾಂಶ ದಾಖಲಾಗುತ್ತಿದೆ. ಕೆಲ ಜಿಲ್ಲೆಗಳ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 2-3 ಡಿ.ಸೆ.ಕುಸಿತವಾಗಿದೆ. ಕನಿಷ್ಠ ತಾಪಮಾನದಲ್ಲಿ 1-2 ಡಿ.ಸೆ. ಇಳಿಮುಖವಾಗಿದೆ. ಆದರೆ. ಬಿಸಿಲಿನ ತೀವ್ರತೆ ಹೆಚ್ಚು ಪರಿಣಾಮಕಾರಿಯಾಗಿದೆ.

ಬಿರುಗಾಳಿ ಸಹಿತ ವರ್ಷಧಾರೆ

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಕೋಲಾರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಲಬುರಗಿಯಲ್ಲಿ ಏ.6ರಿಂದ 12ರವರೆಗೆ ಬಿರುಗಾಳಿ ಸಹಿತ ಮಳೆ ಬೀಳಲಿದೆ. ಬೆಳಗಾವಿ, ಧಾರವಾಡ, ಗದಗ, ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ಮುಂದಿನ 3 ದಿನ ಮತ್ತು ರಾಯಚೂರಿನಲ್ಲಿ ಏ.7ರಿಂದ 9ರವರೆಗೆ ಹಾಗೂ ಯಾದಗಿರಿಯಲ್ಲಿ ಏ.9ರಿಂದ 2ರವರೆಗೆ ಸಾಧಾರಣ ಮಳೆ ಸುರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net