ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿರುವ ಪ್ರಜ್ವಲ್ ರೇವಣ್ಣ ಇದ್ದ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಪತ್ತೆಯಾಗಿದ್ದ ನೋಟ್ ಬುಕ್‌ನಲ್ಲಿ 20ಕ್ಕೂ ಹೆಚ್ಚು ಜನರ ಹೆಸರು, ಮೊಬೈಲ್ ನಂಬರ್ ಜತೆ ಕೆಲ ಯುವತಿಯರ ನಂಬರ್‌ಗಳು ಪತ್ತೆಯಾಗಿದೆ.
ಸಿಸಿಬಿ ನಡೆಸಿದ ದಾಳಿ ವೇಳೆ ದೊರೆತಿದ್ದ ಅಂಡ್ರಾಯಿಡ್ ಮೊಬೈಲ್ ಪಾಸ್‌ವರ್ಡ್ ಹೇಳಲು ನಿರಾಕರಿಸಿರುವ ಪರಿಣಾಮ ಪೊಲೀಸರು ಮೊಬೈಲ್‌ನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರಜ್ವಲ್ ಜೈಲಿನಲ್ಲಿದ್ದುಕೊಂಡು ಸ್ನೇಹಿತೆಯರೊಂದಿಗೆ ಮಾತನಾಡಿರುವುದು, ಸಂದೇಶ ಕಳುಹಿಸಿರುವುದು ಮೊಬೈಲ್‌ನಲ್ಲಿದೆ ಎನ್ನಲಾಗಿದೆ.
ಪಾಕೆಟ್ ಮಾದರಿಯ ನೋಟ್ ಬುಕ್‌ನಲ್ಲಿ ಕುಟುಂಬಸದ ಸದಸ್ಯರ ಹೆಸರು, ನಂಬರ್‌ಗಳು ಇರುವುದು ಬೆಳಕಿಗೆ ಬಂದಿದೆ. ತಾಯಿ ಹೆಸರನ್ನು ಪಾರ್ವತಿ, ತಂದೆ ಹೆಸರನ್ನು ಶಿವಯ್ಯ ಎಂದು ಬರೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪ್ರಜ್ವಲ್ ವಶಕ್ಕೆ ಪಡೆಯುವ ಸಾಧ್ಯತೆ:
ಜೈಲಿನಲ್ಲಿ ನಿಷೇಧಿ ವಸ್ತುಗಳ ಬಳಕೆ ಹಾಗೂ ಮೊಬೈಲ್‌ನಲ್ಲಿ ರಿಟ್ರಿವ್ ವೇಳೆ ದೊರೆಯುವ ಮಾಹಿತಿ ಆಧಾರದ ಮೇಲೆ ಅಪರಾಧಿ ಪ್ರಜ್ವಲ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೈಲಿನ ವಿಐಪಿ ಬ್ಯಾರಕ್‌ನಲ್ಲಿ ದೊರೆ ವಸ್ತುಗಳ ಕುರಿತು ದಾಖಲಾಗಿದ್ದ ಎ್ಐಆರ್ ಅನ್ವಯ ಪರಪ್ಪನ ಗ್ರಹಾರದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಲು ಮುಂದಾಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಗೃಹ ಇಲಾಖೆ ಅಪರಾಧಿ ಪ್ರಜ್ವಲ್ ರೇವಣ್ಣ ಮತ್ತು ವಿಚಾರಣಾಧೀನ ಕೈದಿ ಪ್ರತಾಪ್ ರಾಯ್‌ನನ್ನು ಕೋರ್ಟ್ ಅನುಮತಿ ಪಡೆದು ಕಸ್ಟಡಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೇಲ್ವಿಚಾರಕನ ವಿರುದ್ಧ ಹಳೇ ಪ್ರಕರಣ:
ಪರಪ್ಪನ ಅಗ್ರಹಾರದ ಮೇಲೆ ಹಿಂದೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ, ಅಮಾನತುಗೊಂಡ ಈರಣ್ಣ ರಂಗಾಪುರ, ಅರ್ಧ ಗಂಟೆಗಳ ಕಾಲ ಅಧಿಕಾರಿಗಳನ್ನು ಒಳಗಡೆ ಬಿಡಲು ಹಿಂದೇಟು ಹಾಕಿದರು. ಅದೇ ವೇಳೆ ತಮ್ಮ ಇತರೆ ಸಿಬ್ಬಂದಿ ಮೂಲಕ ದರ್ಶನ್ ಸೇರಿ ಕೆಲ ಕೈದಿಗಳಿದ್ದ ಕೆಲ ಬ್ಯಾರಕ್‌ಗಳಲ್ಲಿದ್ದ ನಿಷೇಧಿತ ವಸ್ತುಗಳನ್ನು ಬೇರೆಡೆ ಸ್ಥಳಾಂತರ ಮಾಡಿಸುತ್ತಿದ್ದರು. ಹೀಗಾಗಿಯೇ ಈ ಹಿಂದೆಯೂ ಅಮಾನತುಗೊಂಡಿದ್ದರು ಎಂದು ಜೈಲಿನ ಮೂಲಗಳು ತಿಳಿಸಿವೆ.
ಮತ್ತೊಂದು ಎಫ್‌ಐಆರ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣನ ಕೋಣೆಯಲ್ಲಿ ಮೊಬೈಲ್, ಪೆನ್‌ಡ್ರೈವ್ ಪತ್ತೆಯಾದ ಬೆನ್ನಲ್ಲೇ ಜೈಲಿನ ಅಧಿಕಾರಿಗಳೇ ಇಡೀ ಜೈಲಿನ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಆಗಲೂ ಪೆನ್‌ಡ್ರೈವ್, ಮೊಬೈಲ್ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ.
ಸಿಸಿಬಿ ಪೊಲೀಸರು ದಾಳಿ ನಡೆಸಿದ ಬೆನ್ನಲ್ಲೇ ಅದೇ ದಿನ (ಆ.11ರಂದು) ರಾತ್ರಿ 11 ಗಂಟೆಯಿಂದ ಆ.13ರ ಮಧ್ಯಾಹ್ನ 2ರವರೆಗೆ ಭದ್ರತಾ ವಿಭಾಗ-1, 2 ಮತ್ತು 3ರಲ್ಲಿ ತಪಾಸಣೆ ನಡೆಸಲಾಗಿತ್ತು. ಸಿಮ್ ಕಾರ್ಡ್ ಇರದ ಅಂಡ್ರಾಯಿಡ್ ಮೊಬೈಲ್(ಒಡೆದ ರೀತಿಯಲ್ಲಿ), 32 ಜಿಬಿ ಪೆನ್‌ಡ್ರೈವ್ ಪತ್ತೆಯಾಗಿದೆ.
ಈ ಸಂಬಂಧ ಕಾರಾಗೃಹದ ಪ್ರಭಾರ ಅಧೀಕ್ಷಕ ಬಿ.ಆರ್.ಅಂದಾನಿ ಅವರು ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಿಷೇಧಿತ ವಸ್ತುಗಳನ್ನು ಕಾರಾಗೃಹಕ್ಕೆ ಸಾಗಿಸಿದವರು, ಸಹಕಾರ ನೀಡಿದವರು ಹಾಗೂ ಕಾರಾಗೃಹದಲ್ಲಿ ನಿಷೇಧಿತ ಮೊಬೈಲ್ ಬಳಕೆದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಬಿ.ಆರ್.ಅಂದಾನಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದುಕೊಂಡೆ ಮೊಬೈಲ್‌ನಲ್ಲಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದು 2025ರ ವಿಡಿಯೊ ಎಂದು ಹೇಳಲಾಗಿದೆ. ಪ್ರಜ್ವಲ್ ಬಳಕೆಯ ಮೊಬೈಲ್ ಮೊದಲಿನಿಂದಲೂ ಇತ್ತು ಎಂಬುದು ಗೊತ್ತಾಗಿದೆ. ವಿಡಿಯೋ ಕುರಿತು ಪ್ರಜ್ವಲ್ ರೇವಣ್ಣನ ಪ್ರಶ್ನಿಸಲಾಗಿದ್ದು, ಆತ 2024ರ ವಿಡಿಯೋಎಂದು ಹೇಳುತ್ತಿದ್ದಾನೆ. ಆದರೆ, 2025ರ ವಿಡಿಯೊ ಇರಬಹುದು ಎಂಬುದು ತಿಳಿದು ಬಂದಿದೆ.
ಜೈಲಿನಲ್ಲಿ ದೊರೆತ ಮೊಬೈಲ್, ಪೆನ್‌ಡ್ರೈವ್ ಕುರಿತು ಮಾಹಿತಿ ನೀಡಿರುವ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ಎಂ.ನಾರಾಯಣ್, ಸಿಸಿಬಿ ಪೊಲೀಸರ ದಾಳಿ ವಳೆ ಹೈಸೆಕ್ಯೂರಿಟಿ ಬ್ಯಾರಕ್‌ನಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿದೆ. ಪೆನ್‌ಡ್ರೈವ್‌ನಲ್ಲಿ ಸದ್ಯ ಯಾವುದೇ ವಿಡಿಯೋಗಳು ಸಿಕ್ಕಿಲ್ಲ. ಆ ರೀತಿಯ ವರದಿಗಳು ಸತ್ಯಕ್ಕೆ ದೂರವಾದವು. ಮೊಬೈಲ್ ಪಾಸ್‌ವರ್ಡ್ ಕೂಡ ಆರೋಪಿಗಳು ಹೇಳಿಲ್ಲ. ಫೋನ್ ಯಾರು ಬಳಕೆ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಲಿದೆ. ಮೊಬೈಲ್ ಹೇಗೆ ಒಳಗೆ ಬಂತು? ಅಂತ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.