ಹಾಸನ: ಆಲೂಗಡ್ಡೆ ಬೆಳೆಯುವ ಬಹುತೇಕ ಭಾಗಗಳಲ್ಲಿ ಮಳೆಯಾಗಿದ್ದು, ಬಿತ್ತನೆ ಕಾರ್ಯ ಶೇ.90ರಷ್ಟು ಪೂರ್ಣಗೊಂಡಿದೆ. ಜುಲೈನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆಯಿದ್ದು, ಕೀಟ ಹಾಗೂ ರೋಗ ಕಂಡುಬರುವ ಸಂಭವವಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಯೋಗೇಶ್ ತಿಳಿಸಿದ್ದಾರೆ.
ಬಿತ್ತನೆಯಾದ 10 ದಿನಗಳ ನಂತರ ಗಡ್ಡೆಗಳು ಚಿಗುರೊಡೆದಿರುವ ಬಗ್ಗೆ ಪರಿಶೀಲಿಸಿ, ಗಡ್ಡೆಗಳು ಕೊಳೆತಿರುವ ಹಾಗೂ ಮೊಳಕೆ ಒಡೆಯದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಗಡ್ಡೆಗಳು ಕೊಳೆತಿದ್ದಲ್ಲಿ ಅಂತಹ ಗಡ್ಡೆಗಳನ್ನು ನಾಶಪಡಿಸಬೇಕು. ಮಳೆ ನೀರು ನಿಲ್ಲುವ ಜಾಗದಲ್ಲಿ ನೀರು ಬಸಿದು ಹೋಗುವಂತೆ ನೋಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಾತಾವರಣ ತಂಪಾಗಿರುವುದರಿಂದ ಹಾಗೂ ಭಾಗಶಃ ಬಿಸಿಲು ಬರುತ್ತಿರುವುದರಿಂದ ಅಂಗಮಾರಿ ರೋಗ ಹಾಗೂ ರಸ ಹೀರುವ ಕೀಟಗಳ ಹಾವಳಿಯಿಂದ ನಂಜಾಣು ರೋಗ ಹರಡುವ ಸಾಧ್ಯತೆ ಇದೆ. ಬಿತ್ತನೆಯಾದ 25-30 ದಿನಗಳ ಬೆಳೆಗೆ ಒಂದು ಲೀಟರ್ ನೀರಿಗೆ ಮ್ಯಾಂಕೋಜೆಬ್ 3ಗ್ರಾಂ+ಡೈಮಿಥೋಯೆಟ್ 1.70 ಮಿ.ಲೀ ಅಥವಾ ಮ್ಯಾಂಕೋಜೆಬ್ 3ಗ್ರಾಂ+ ಇಮಿಡಕ್ಲೋಪ್ರಿಡ್ 0.50 ಮಿ.ಲೀ. ಔಷಧಗಳನ್ನು ಬೆರೆಸಿ ಗಿಡದ ಎಲ್ಲ ಭಾಗಗಳು ನೆನೆಯುವಂತೆ ಸಿಂಪಡಣೆ ಮಾಡಬೇಕು. ಬಿತ್ತನೆಯಾದ 40-45 ದಿನಗಳ ಬೆಳೆಗೆ ಒಂದು ಲೀಟರ್ ನೀರಿಗೆ ಮ್ಯಾಂಕೋಜೆಬ್ 3ಗ್ರಾಂ + ಸೈಮೋಕ್ಸಾನಿಲ್ 3ಗ್ರಾಂ ಬೆರೆಸಿ ಗಿಡದ ಎಲ್ಲ ಭಾಗಗಳು ನೆನೆಯುವಂತೆ ಸಿಂಪಡಣೆ ಮಾಡಬೇಕು.
ಬಿತ್ತನೆಯಾದ 55-60 ದಿನಗಳ ಬೆಳೆಗೆ ಒಂದು ಲೀಟರ್ ನೀರಿಗೆ ಡೈಮಿಥೋಮಾರ್ಫ್ 1 ಗ್ರಾಂ+ ಮ್ಯಾಂಕೋಜೆಬ್ 3 ಗ್ರಾಂ ಅಥವಾ ಮ್ಯಾಂಕೋಜೆಬ್ + ಫೆನಾಮಿಡೋನ್ 3ಗ್ರಾಂ ಬೆರೆಸಿ ಗಿಡದ ಎಲ್ಲ ಭಾಗಗಳು ನೆನೆಯುವಂತೆ ಸಿಂಪಡಣೆ ಮಾಡಬೇಕು. ಅಂತೆಯೇ ಬಿತ್ತನೆಯಾದ 65-70 ದಿನಗಳ ಬೆಳೆಗೆ ಒಂದು ಲೀಟರ್ ನೀರಿಗೆ ಫೇಮಾಕ್ಸಾಡೋನ್ + ಸೈಮೋಕ್ಸನಿಲ್ 1ಮಿ.ಲೀ. ಅಥವಾ ಅಮೆಟೋ ಕ್ಟ್ರಾಡಿನ್ 27% + ಡೈಮೆಥೋಮಾರ್ಫ್ 20.27%. . 2ಮಿ.ಲೀ. ಬೆರೆಸಿ ಗಿಡದ ಎಲ್ಲ ಭಾಗಗಳು ನೆನೆಯುವಂತೆ ಸಿಂಪಡಣೆ ಮಾಡಬೇಕು.
ಮಳೆ ಇರುವುದರಿಂದ ಔಷಧಗಳು ಗಿಡಗಳ ಭಾಗಗಳ ಮೇಲೆ ಸ್ವಲ್ಪ ಸಮಯದ ಕಾಲ ಇರುವುದಕ್ಕೆ ಅಂಟು ದ್ರಾವಣವನ್ನು ಉಪಯೋಗಿಸಬೇಕು. ಆಲೂಗಡ್ಡೆ ಬೆಳವಣಿಗೆ ಹಂತಗಳಲ್ಲಿ ಅಂಗಮಾರಿ ರೋಗ ಕಂಡು ಬಾರದಿದ್ದರೂ ಒಂದು ಲೀಟರ್ ನೀರಿಗೆ 3 ಗ್ರಾಂ ಮ್ಯಾಂಕೋಜೆಬ್ ಶಿಲೀಂಧ್ರ ನಾಶಕ ಬೆರೆಸಿ ಎಲ್ಲ ಹಂತಗಳಲ್ಲೂ ಸಿಂಪಡಿಸಬೇಕು, ಅನಗತ್ಯವಾಗಿ ಬೇರೆ ಶಿಲೀಂಧ್ರ ನಾಶಕವನ್ನು ಸಿಂಪಡಿಸಬಾರದು.
ಗಿಡಗಳಲ್ಲಿ ಹೂ ಬಿಡುವ ಸಂದರ್ಭದಲ್ಲಿ ಕೀಟನಾಶಗಳನ್ನು ಉಪಯೋಗಿಸಬಾರದು. ಇದು ಪರಾಗ ಸಂಗ್ರಹ ಮಾಡುವ ಜೇನು ನೋಣಗಳಿಗೆ ಮಾರಕವಾಗುತ್ತದೆ. ಅಲ್ಲದೆ ಗಡ್ಡೆಗಳು ಸೂರ್ಯನ ಬೆಳಕಿಗೆ ಒಡ್ಡದಂತೆ ಕಾಲಕಾಲಕ್ಕೆ ಮಣ್ಣು ಏರಿಸುತ್ತಿರಬೇಕು. ಬೇಸಾಯ ಮತ್ತು ಸಸ್ಯ ಸಂರಕ್ಷಣಾ ಕ್ರಮಗಳನ್ನು ಪಾಲಿಸಬೇಕು.ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು.