ಕಳಸಕೊಪ್ಪ ಕೆರೆ ತುಂಬಿಸುವ ಕಾರ್ಯ ಮುಂದೂಡಿಕೆ

ಹೆರಕಲ್ ಏತ ನೀರಾವರಿ(ದಕ್ಷಿಣ)ಜಾಕ್‌ವೆಲ್‌ನಲ್ಲಿ ಕೆಟ್ಟಿರುವ ಟಿಸಿ
ಹೆರಕಲ್ ಏತ ನೀರಾವರಿ(ದಕ್ಷಿಣ)ಜಾಕ್‌ವೆಲ್‌ನಲ್ಲಿ ಕೆಟ್ಟಿರುವ ಟಿಸಿ
Published on

ಪ್ರಮುಖ ಮುಖ್ಯಾಂಶಗಳು

  • ಹೆರಕಲ್ ಏತ ನೀರಾವರಿ ಜಾಕ್‌ವೆಲ್‌ನಲ್ಲಿ ಸುಟ್ಟ ಟಿಸಿ
  • ರೈತರ ಆತಂಕ
ಕಲಾದಗಿ: ಈ ಭಾಗದ ರೈತರ ಜೀವನಾಡಿ ಕಳಸಕೊಪ್ಪ ಕೆರೆ ತುಂಬಿಸಲು ಗ್ರಾಮದ ಶೆಲ್ಲಿಕೇರಿ ಕ್ರಾಸ್‌ಬಳಿ ಇರುವ ಹೆರಕಲ್ ಏತ ನೀರಾವರಿ(ದಕ್ಷಿಣ) ಜಾಕ್‌ವೆಲ್ ಚಾಲನೆ ನೀಡಬೇಕೆನ್ನುವ ಹೊತ್ತಿನಲ್ಲಿಯೇ ಅಲ್ಲಿರುವ ಟಿಸಿ (ವಿದ್ಯುತ್ ಪರಿವರ್ತಕ) ಏಕಾಏಕಿ ಸುಟ್ಟಿದ್ದು, ರೈತರಲ್ಲಿ ಆತಂಕ ಮೂಡುವುದರೊಂದಿಗೆ ಕೆರೆ ತುಂಬಿಸುವ ಕಾರ್ಯ ಮತ್ತಷ್ಟು ದಿನ ಮುಂದೂಡಿದೆ.
ಮಳೆಗಾಲ ಆರಂಭವಾಗಿ ಇಲ್ಲಿನ ಘಟಪ್ರಭಾ ನದಿಗೆ ಭರಪೂರ ನೀರು ಬರುತ್ತಿದ್ದಂತೆ ಕಾಲುವೆ ಮೂಲಕ ಜಾಕ್‌ವೆಲ್‌ಗೆ ನೀರು ಹರಿಸಿ ಅಲ್ಲಿಂದ ಕಳಸಕೊಪ್ಪ ಕೆರೆ ಸೇರಿ ಇನ್ನಿತರ ಆರು ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿತ್ತು.
ಪ್ರತಿವರ್ಷದಂತೆ ಈ ವರ್ಷವೂ ಶಾಶಕ ಜೆ.ಟಿ. ಪಾಟೀಲರು ಕೆರ ತುಂಬಿಸುವ ಕಾರ್ಯಕ್ಕೆ ಜೂನ್ 20ರಂದು ಕೆರೆ ತುಂಬಿಸುವುದಾಗಿ ನಿರ್ಧಾರ ಮಾಡಿದ್ದರು. ಆದರೆ, ಜೂ.18ರಂದು ಮಧ್ಯಾಹ್ನ ಏಕಾಏಕಿ ಜಾಕ್‌ವೆಲ್‌ಗೆ ವಿದ್ಯುತ್ ಸಂಪರ್ಕ ನೀಡುವ 9ಎಂವಿಎ ಸಾಮರ್ಥ್ಯದ ಟಿಸಿ ಸುಡುವುದುರೊಂದಿಗೆ ಭಾರಿ ಸಮಸ್ಯೆ ತಂದೊಡ್ಡುವುದುರೊಂದಿಗೆ ರೈತರ ಚಿಂತೆಗೆ ಕಾರಣವಾಗಿದೆ.
ಪರ್ಯಾಯ ಟಿಸಿ ಇಲ್ಲ: ಇನ್ನುಳಿದ ಬಹುತೇಕ ಜಾಕ್‌ವೆಲ್‌ಗಳಲ್ಲಿ ಇರುವಂತೆ ಇಲ್ಲಿನ ಜಾಕ್‌ವೆಲ್‌ನಲ್ಲಿ ಪರ್ಯಾಯ ಟಿಸಿ ಇಲ್ಲದಿರುವುದೇ ಈಗ ಭಾರಿ ಸಮಸ್ಯೆಯಾಗಿದೆ. ಇದಕ್ಕೆ ಹೊಂದುವ ಟಿಸಿಯನ್ನು ಮುದ್ದೆಬಿಹಾಳ ತಾಲೂಕಿನ ನಾಗರಬೆಟ್ಟದಲ್ಲಿರುವ ನಾಗರಬೆಟ್ಟ ಏತ ನೀರಾವರಿ ಜಾಕ್‌ವೆಲ್‌ನಿಂದ ತಂದು ಚಾಲನೆ ನೀಡುವ ಹರಸಾಹಸದ ಪ್ರಯತ್ನವನ್ನು ಕೆಬಿಜೆಎನ್‌ಎಲ್ ಅಧಿಕಾರಿಗಳು ಮಾಡುತ್ತಿದ್ದಾರೆ.
ಅದು ಅಷ್ಟು ಸರಳವಲ್ಲ: ನಾಗರಬೆಟ್ಟ ಜಾಕ್‌ವೆಲ್‌ನಲ್ಲಿರುವ 6 ಎಂವಿಎ ಟಿಸಿಯನ್ನು ಇಲ್ಲಿಗೆ ಸ್ಥಳಾಂತರರಿಸಲೆಂದೇ ಬೆಂಗಳೂರಿನಿಂದ ಕೆಪಿಟಿಸಿಎಲ್ ವಿಶೇಷ ಸಿಬ್ಬಂದಿ ನಾಗರಬೆಟ್ಟಕ್ಕೆ ತೆರಳಲಿದ್ದು, ಅಲ್ಲಿಂದ ಅದನ್ನು ಇಲ್ಲಿಗೆ ಸ್ಥಳಾಂತರಿಸಿ ಚಾಲನೆ ನೀಡಲು ಅವರು ಅಲ್ಲಿಗೆ ಹೋದರು ಕನಿಷ್ಠ ಎಂಟತ್ತು ದಿನ ಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಮರೀಚಿಕೆಯಾದ ಪರ್ಯಾಯ ಟಿಸಿ
ಇಲ್ಲಿ ಟಿಸಿ ಸುಡುವುದು ಇದೇ ಮೊದಲೇನಲ್ಲ, ಕಳೆದ 2022ರ ಜುಲೈನಲ್ಲಿ ಇದೇ ರೀತಿ ಕೆರೆಗೆ ನೀರು ತುಂಬಿಸಬೇಕೆನ್ನುವ ಹೊತ್ತಿನಲ್ಲಿಯೇ ಟಿಸಿ ಸುಟ್ಟಿತ್ತು. ಆಗಲೂ ಹರಸಾಹಸ ಪಟ್ಟು ಬೇರೆಡೆಯಿಂದ ಟಿಸಿ ತಂದು ಜಾಕ್‌ವಲ್ ಚಾಲನೆ ನೀಡಲಾಗಿತ್ತು.
ಬಹುತೇಕ ಜಾಕ್‌ವೆಲ್‌ಗಳಲ್ಲಿ ಪರ್ಯಾಯ ಟಿಸಿಯನ್ನು ಇಟ್ಟಿರುತ್ತಾರೆ. ಅದರಂತೆ ಇಲ್ಲಿಯೂ ಪರ್ಯಾಯ ಟಿಸಿ ಇಡಬೇಕು ಎಂಬ ಬೇಡಿಕೆ ಎಲ್ಲರಿಂದ ಕೇಳಿ ಬಂದಿತ್ತು. ಅಂದು ಸರ್ಕಾರದ ಮುಂದೆ ಈ ಬೇಡಿಕೆಯನ್ನು ಕೆಬಿಜೆಎನ್‌ಎಲ್‌ನವರು ಇಟ್ಟಿದ್ದರಾದರೂ ಅದಕ್ಕೆ ಮನ್ನಣೆ ಸಿಗಲೇ ಇಲ್ಲ. ಇನ್ನಾದರು ಇಲ್ಲೊಂದು ಪರ್ಯಾಯ ಟಿಸಿ ವ್ಯವಸ್ಥೆ ಮಾಡಿಡಬೇಕು ಎಂಬ ಮನವಿ ರೈತರಿಂದ ಕೇಳಿ ಬರುತ್ತಿದ್ದು ಇಂದಿನ ಸರ್ಕಾರ ಮನಸ್ಸು ಮಾಡಬೇಕಾಗಿದೆ.
ಆದಷ್ಟು ಬೇಗ ಜಾಕ್‌ವೆಲ್‌ಗೆ ಚಾಲನೆ ನೀಡಿ ಕೆರೆಗಳನ್ನು ತುಂಬಿಸಬೇಕು ಎಂಬುದು ಈ ಭಾಗದ ರೈತರ ಮನವಿಯಾಗಿದ್ದು, ಕೆಬಿಜೆಎನ್‌ಎಲ್ ಮತ್ತು ಕೆಪಿಟಿಸಿಯಲ್‌ನವರು ಎಷ್ಟು ವೇಗವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
"

ಜಾಕ್‌ವೆಲ್ ಚಾಲನೆ ಮಾಡಬೇಕು ಎಂಬುವಷ್ಟರಲ್ಲಿಯೇ ಏಕಾಏಕಿ ಟಿಸಿ ಸುಟ್ಟಿದೆ. ಬೇರೆ ಟಿಸಿ ತಂದು ಕೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಕಳಸಕೊಪ್ಪ ಕೆರೆ ಸೇರಿ ಇನ್ನಿತರ ಆರು ಕೆರಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಇಲ್ಲೊಂದು ಪರ್ಯಾಯ ಟಿಸಿ ಬೇಕೆಂಬುದರ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು.

ಜೆ.ಟಿ.ಪಾಟೀಲ ಶಾಸಕ ಬೀಳಗಿ ಮತಕ್ಷೇತ್ರ.

"

ಮುದ್ದೇಬಿಹಾಳ ಬಳಿಯ ನಾಗರಬೆಟ್ಟ ಏತ ನೀರಾವರಿ ಜಾಕ್‌ವೆಲ್‌ನಿಂದ ಟಿಸಿ ತರುವ ಪ್ರಯತ್ನ ನಡೆದಿದೆ. ಆದಷ್ಟು ಬೇಗ ಅಲ್ಲಿಂದ ಟಿಸಿ ತಂದು ಜಾಕ್‌ವೆಲ್ ಚಾಲನೆಗೊಳಿಸಲಾಗುವುದು.

ನವೀನ ಎಇ ಕೆಬಿಜೆಎನ್‌ಎಲ್ ಆಲಮಟ್ಟಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net