ಪಟ್ಟಣದ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಕರೆದಿದ್ದ ಆಶ್ರಯ ಸಮಿತಿ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. ಅಕ್ರಂಷರೀಫ್, ಇಕ್ಬಾಲ್, ಬಸವರಾಜು ಶಿಗ್ಗಾವಿ, ರೇವಣ್ಣ ಇತರರಿದ್ದರು.
ಬೇಲೂರು: ಪುರಸಭೆ ವ್ಯಾಪ್ತಿಯಲ್ಲಿರುವ ಅರ್ಹ ಬಡ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮತ್ತು ಹಕ್ಕುಪತ್ರ ವಿತರಣಾ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಶ್ರಯ ಯೋಜನೆಯಲ್ಲಿ ಆಯ್ಕೆಯಾಗುವ ಫಲಾನುಭವಿಗಳಿಗೆ ವಿಳಂಬವಾಗದಂತೆ ನಿವೇಶನ ಹಾಗೂ ಸ್ವಾಧೀನ ಪತ್ರಗಳನ್ನು ಅಧಿಕಾರಿಗಳು ತ್ವರಿತವಾಗಿ ವಿತರಿಸಲು ಮುಂದಾಗಬೇಕು. ಜತೆಗೆ ಆಶ್ರಯ ಯೋಜನೆಯ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಲು ಪ್ರತಿವಾರ ಆಶ್ರಯ ಸಮಿತಿ ಸಭೆ ಕರೆಯಬೇಕು ಎಂದರು.
ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಬೇಕು. ವಿವಾಹಿತರಾಗಿದ್ದು, ಯಾವುದೇ ಜಮೀನು, ನಿವೇಶನ ಅಥವಾ ಆದಾಯದ ಮೂಲ ಹೊಂದಿರದ ನೈಜ ಬಡ ಕುಟುಂಬಗಳಿಗೆ ಮಾತ್ರ ಯೋಜನೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ನಿವೇಶನಗಳನ್ನು ಫಲಾನುಭವಿಗಳ ಮೂಲ ಹೆಸರಿನಲ್ಲೇ ಮಂಜೂರು ಮಾಡಲಾಗುವುದು. ಅಲ್ಲದೆ ಆಶ್ರಯ ಯೋಜನೆಗಾಗಿ ಮೀಸಲಿಟ್ಟಿರುವ 5 ಎಕರೆ ಜಾಗದ ಅಭಿವೃದ್ಧಿ ಕಾಮಗಾರಿಗಳಿಗೆ ನಗರೋತ್ಥಾನ ಯೋಜನೆಯಡಿ 30 ಲಕ್ಷ ರೂ. ವಿಶೇಷ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ. ಜಾಗದ ಗಡಿ ಗುರುತಿಸುವಿಕೆ, ಸ್ಥಳ ಪರಿಶೀಲನೆ, ಸಮತಟ್ಟು ಗೊಳಿಸುವಿಕೆ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಪುರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ಯಾವುದೇ ಒತ್ತಡಕ್ಕೂ ಅವಕಾಶವಿಲ್ಲದಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಧಿಕಾರಿಗಳು ಈ ಬಗ್ಗೆ ಹೆಚ್ಚು ಗಮನಹರಿಸಿ ಶೀಘ್ರವೇ ಎಲ್ಲ ರೀತಿಯ ಕ್ರಮಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಅಕ್ರಂಷರೀಫ್ ಮಾತನಾಡಿ, ಮುಂದಿನ ಶುಕ್ರವಾರ ಅರ್ಹ ಫಲಾನುಭವಿಗಳ ಸಂಪೂರ್ಣ ಮಾಹಿತಿಯುಳ್ಳ ಪಟ್ಟಿಯನ್ನು ಅಂತಿಮಗೊಳಿಸಿ ಅನುಮೋದನೆ ಪಡೆಯಲಾಗುವುದು. ನಂತರ ಸೋಮವಾರದಿಂದ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಸ್ವಾಧೀನ ಪತ್ರವನ್ನು ಪುರಸಭೆಯಿಂದ ವಿತರಿಸಲು ಪ್ರಕ್ರಿಯೆ ಆರಂಭಿಸಲಾಗುವುದು. ಇದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಎಲ್ಲ ಕಡತಗಳನ್ನು ಸಿದ್ಧಪಡಿಸಿಟ್ಟು ಕೊಳ್ಳಬೇಕು ಎಂದು ತಿಳಿಸಿದರು.
ಆಶ್ರಯ ಸಮಿತಿ ಸದಸ್ಯ ಇಕ್ಬಾಲ್ ಮಾತನಾಡಿ, ನ್ಯಾಯಾಲಯದ ವ್ಯಾಜ್ಯದ ನೆಪವೊಡ್ಡಿ ಆಶ್ರಯ ಯೋಜನೆಯ ಕಾಮಗಾರಿಗಳನ್ನು ವಿಳಂಬ ಗೊಳಿಸಬಾರದು. ನ್ಯಾಯಾಲಯದಿಂದ ಅಧಿಕೃತ ತಡೆಯಾಜ್ಞೆ ಬಂದರೆ ಮಾತ್ರ ಕಾಮಗಾರಿ ಸ್ಥಗಿತಗೊಳಿಸಬೇಕು. ಕೇವಲ ಪ್ರಕರಣ ದಾಖಲಾಗಿರುವ ಕಾರಣಕ್ಕೆ ಯೋಜನೆಯನ್ನು ನಿಲ್ಲಿಸುವುದು ಸರಿಯಲ್ಲ. ಇದರಿಂದ ಫಲಾನುಭವಿಗಳಿಗೆ ಅನ್ಯಾಯವಾಗುತ್ತದೆ. ಯೋಜನೆಗೆ ಮಂಜೂರಾಗಿರುವ 5 ಎಕರೆ ಜಾಗದಲ್ಲಿ ಕೇವಲ 2 ಎಕರೆ 17 ಗುಂಟೆ ಪ್ರದೇಶಕ್ಕೆ ಮಾತ್ರ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಉಳಿದ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಮುಂದುವರಿಸ ಬಹುದಾಗಿದೆ. ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಲು ತಹಸೀಲ್ದಾರ್ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆ ರಚಿಸುವಂತೆ ಸಲಹೆ ನೀಡಿದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಆಶ್ರಯ ಯೋಜನೆಗಾಗಿ 5 ಎಕರೆ ಜಮೀನು ಮಂಜೂರು ಮಾಡುವ ಸಂದರ್ಭ ಒಂದೇ ಕಡೆ ಸಂಪೂರ್ಣ ಖಾಲಿ ಜಾಗ ಲಭ್ಯವಾಗಿರಲಿಲ್ಲ. ಮಧ್ಯದಲ್ಲಿನ ಕೆಲವು ಜಾಗಗಳು ಬೇರೆ ಉದ್ದೇಶಗಳಿಗೆ ಮೀಸಲಾಗಿದ್ದ ಕಾರಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಹಿಂದಿನ ಅಧಿಕಾರಿಗಳು ಪ್ರಕ್ರಿಯೆ ನಡೆಸಿದ್ದಾರೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ, ಪಿಐ ರೇವಣ್ಣ, ಆರೋಗ್ಯಾಧಿಕಾರಿ ಲೋಹಿತ್, ಆರ್.ಒ.ಗೋಪಿ, ಇಂಜಿನಿಯರ್ ಮೋಹನ್, ಆಶ್ರಯ ಸಮಿತಿ ಸದಸ್ಯರಾದ ಹರೀಶ್, ನಾಗರಾಜು ಇದ್ದರು.