ಬಾಣಂತಿಯರಿಗೆ ಕಳಪೆ ಮೊಟ್ಟೆ ವಿತರಣೆ

ಚಿಕ್ಕತಾಂಡಾದ ಬಾಣಂತಿಯೊಬ್ಬರ ಕುಟುಂಬಸ್ಥರು ಕಳಪೆ ಗುಣಮಟ್ಟದ ಮೊಟ್ಟೆ ವಿತರಿಸಿದ್ದಕ್ಕೆ ಅಂಗನವಾಡಿ ಕೇಂದ್ರದ ಮುಂದೆಯೇ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕತಾಂಡಾದ ಬಾಣಂತಿಯೊಬ್ಬರ ಕುಟುಂಬಸ್ಥರು ಕಳಪೆ ಗುಣಮಟ್ಟದ ಮೊಟ್ಟೆ ವಿತರಿಸಿದ್ದಕ್ಕೆ ಅಂಗನವಾಡಿ ಕೇಂದ್ರದ ಮುಂದೆಯೇ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಣಂತಿ ಕುಟುಂಬಸ್ಥರಿಂದ ಆಕ್ರೋಶ
  • ಅಂಗನವಾಡಿ ಕಾರ್ಯಕರ್ತೆಗೆ ನೋಟಿಸ್
ಕನಕಗಿರಿ: ಮಾತೃಪೂರ್ಣ ಯೋಜನೆಯಡಿ ಅಡವಿಬಾವಿ ಚಿಕ್ಕತಾಂಡಾದ ಬಾಣಂತಿಯರಿಗೆ ಅಂಗನವಾಡಿಯಿಂದ ನೀಡಿದ ಮೊಟ್ಟೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದರಿಂದ ಮಂಗಳವಾರ ಕುಟುಂಬಸ್ಥರು ಕೇಂದ್ರದ ಎದುರೇ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಜಾರಿಗೆ ಬಂದಿರುವ ಮಾತೃಪೂರ್ಣ ಯೋಜನೆಯಡಿ ಮಾಸಿಕ 24 ಮೊಟ್ಟೆಗಳನ್ನು ವಿತರಿಸಲಾಗುತ್ತದೆ. ಮೊಟ್ಟೆಗಳನ್ನು ಖರೀದಿಸಿ ಹಂಚಿಕೆ ಮಾಡುವ ಜವಾಬ್ದಾರಿ ಆಯಾ ಅಂಗನವಾಡಿ ಕಾರ್ಯಕರ್ತರಿಗಿದ್ದು, ಗುಣಮಟ್ಟದ ಮೊಟ್ಟೆಗಳನ್ನು ವಿತರಿಸುವ ಕೆಲಸ ಮಾಡಬೇಕು.
 ಆದರೆ, ಚಿಕ್ಕತಾಂಡಾ ಅಂಗನವಾಡಿ ಕೇಂದ್ರ ಸಂಖ್ಯೆ 1ರಲ್ಲಿ ಹಲವು ಗರ್ಭಿಣಿ/ಬಾಣಂತಿಯರಿಗೆ ಇತ್ತೀಚೆಗೆ ಮೊಟ್ಟೆಗಳನ್ನು ವಿತರಿಸಲಾಗಿದೆ. ಇವುಗಳನ್ನು ಕೊಂಡೊಯ್ದವರು ಮನೆಯಲ್ಲಿ ಬೇಯಿಸಿದಾಗ ಐದಾರು ಮೊಟ್ಟೆಗಳು ತೀರಾ ಕಳಪೆಯಿಂದ ಕೂಡಿರುವುದು ಬೆಳಕಿಗೆ ಬಂದಿದೆ. 
ಇದರಿಂದ ಆಕ್ರೋಶಗೊಂಡ ಓರ್ವ ಬಾಣಂತಿಯ ಕುಟುಂಬ ಸದಸ್ಯ ಹರೀಶ್, ಉಳಿದ ಮೊಟ್ಟೆಗಳನ್ನು ಅಂಗನವಾಡಿಗೆ ಮರಳಿಸಿದ್ದಾರೆ. ಗ್ರಾಮಸ್ಥರು ಅಂಗನವಾಡಿ ಕೇಂದ್ರಕ್ಕೆ ತೆರಳಿದ್ದಾಗ ತಾನು ಮರಳಿಸಿದ ಮೊಟ್ಟೆಗಳನ್ನು ಜನತೆಗೆ ತೋರಿಸಲು ಕೇಳಿದಾಗ, ಅಂಗನವಾಡಿಯವರು ಬದಲಿ ಮೊಟ್ಟೆಗಳನ್ನು ನೀಡಿದರು. 
ಇದರಿಂದ ಆಕ್ರೋಶಗೊಂಡು ಮೊಟ್ಟೆಗಳನ್ನು ಸಾರ್ವಜನಿಕವಾಗಿಯೇ ಕೇಂದ್ರದ ಮುಂದೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಗರ್ಭಿಣಿ, ಬಾಣಂತಿಯರು, ಮಕ್ಕಳು ಇಂತಹ ಕಳಪೆ ಗುಣಮಟ್ಟದ ಮೊಟ್ಟೆಗಳನ್ನು ತಿಂದು ತೊಂದರೆಗೊಳಗಾದರೆ ಯಾರು ಹೊಣೆ? ಎಂದು ನಿವಾಸಿ ಮಂಜುನಾಥ ಪ್ರಶ್ನಿಸಿದರು.

ಸ್ಥಳಕ್ಕೆ ಸಿಡಿಪಿಒ ದೌಡು: ಅಂಗನವಾಡಿ ಕೇಂದ್ರಕ್ಕೆ ಸಿಡಿಪಿಒ ವಿಜಯಲಕ್ಷ್ಮೀ ಹಿರೇಮಠ, ಅಂಗನವಾಡಿ ಮೇಲ್ವಿಚಾರಕಿ ಚಂದ್ರಕಲಾ ಭೇಟಿ ನೀಡಿದರು. ಕಳಪೆಯಾಗಿರುವ ಮೊಟ್ಟೆಯ ಚಿತ್ರಗಳನ್ನು ಮೊಬೈಲ್‌ನಲ್ಲಿ ವೀಕ್ಷಿಸಿದ ಸಿಡಿಪಿಒ, ಇಂತಹ ಮೊಟ್ಟೆ ವಿತರಣೆ ಮಾಡಬಾರದೆಂದು ಸೂಚಿಸಿದರು. ಅಂಗನವಾಡಿ ಕೇಂದ್ರ-2ರ ಮೊಟ್ಟೆಗಳನ್ನು ತರಿಸಿ ಪರಿಶೀಲಿಸಿದಾಗ ಅವುಗಳ ಗಾತ್ರವೂ ಚಿಕ್ಕದಾಗಿರುವುದನ್ನು ಕಂಡು ಜನತೆ ಬೇಸರ ವ್ಯಕ್ತಪಡಿಸಿದರು. ನಿವಾಸಿಗಳಾದ ಭೀಮಣ್ಣ, ರಾಘವೇಂದ್ರ, ಚಿನ್ನಯ್ಯ ಇತರರಿದ್ದರು.

ಈ ರೀತಿಯ ಘಟನೆ ಈ ಹಿಂದೆ ಯಾವ ಅಂಗನವಾಡಿಯಲ್ಲಿ ನಡೆದಿರಲಿಲ್ಲ. ಇನ್ಮುಂದೆ ನಡೆಯದಂತೆ ನೋಡಿಕೊಳ್ಳಲಾಗುವುದು. ಮೊಟ್ಟೆ ವಿತರಿಸಿದ ಕಾರ್ಯಕರ್ತೆಗೆ ನೋಟಿಸ್ ನೀಡಲಾಗುವುದು. ಗುಣಮಟ್ಟದ ಮೊಟ್ಟೆಗಳನ್ನು ಖರೀದಿಸಿ ಹಂಚಿಕೆ ಮಾಡಲು ಸೂಚಿಸಲಾಗುವುದು.

— ವಿಜಯಲಕ್ಷ್ಮೀ, ಸಿಡಿಪಿಒ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net