ಗುಂಡ್ಲುಪೇಟೆ: ಸರ್ಕಾರದ ವತಿಯಿಂದ ಬರುವ ಸವಲತ್ತುಗಳನ್ನು ಜನರಿಗೆ ನೇರವಾಗಿ ತಲುಪುವಂತೆ ಮಾಡಲಾಗುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ದೇಪಾಪುರ ಗ್ರಾಮದಲ್ಲಿ ಸೋಮವಾರ 20 ಲಕ್ಷ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ನಿರ್ಮಾಣವಾಗದ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ತಾಲೂಕಿನಲ್ಲಿ ನೂರಾರು ಸಮುದಾಯಗಳಿಗೆ ಭವನವನ್ನು ನಿರ್ಮಿಸಿಕೊಟ್ಟಿದ್ದರೂ ಸರಿಯಾದ ನಿರ್ವಹಣೆಯಿಲ್ಲದೆ ಪಾಳು ಬೀಳುತ್ತಿವೆ. ಆದ್ದರಿಂದ ಜನರು ಒಗ್ಗಟ್ಟಾಗಿ ಸಮುದಾಯದ ಚಟುವಟಿಕೆಗಳಿಗೆ ಪೂರಕವಾಗಿ ಭವನವನ್ನು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು, ಉಳಿದ ಸಂದರ್ಭದಲ್ಲಿ ಶಾಂತಿಯುತವಾಗಿ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಸಮಾಜಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಲೆಮಹದೇಶ್ವರಬೆಟ್ಟ ಧರ್ಮದರ್ಶಿ ಮಂಡಲಿಯ ಮಾಜಿ ಅಧ್ಯಕ್ಷ ಡಿ.ಎಸ್.ಸಿದ್ದಪ್ಪ, ಕೊಡಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿಕ್ಕಮ್ಮಣ್ಣಿ, ಸದಸ್ಯ ಡಿ.ಎಸ್.ಶಿವಸ್ವಾಮಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಕುಂದಕೆರೆ ರಾಜು, ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನಪ್ಪ, ಮಹದೇವಪ್ಪ, ಬಸವಣ್ಣ ಇತರರು ಇದ್ದರು.