ತಾಳಿಕೋಟೆ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ 5 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಸಿ.ಎಸ್. ನಾಡಗೌಡಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ರಾಜು ಎಸ್ ರಾಠೋಡ್, ವಿಜಯಕುಮಾರ, ಎಲ್.ಬಿ.ಲಮಾಣೆ, ಸಿದ್ದನಗೌಡ ಪಾಟೀಲ ಮತ್ತಿತರರದ್ದರು.
ತಾಳಿಕೋಟೆ: ಮತಕ್ಷೇತ್ರದಲ್ಲಿ ಅಭಿವೃದ್ಧಿಗೆ ಮೊದಲು ಆದ್ಯತೆ ನೀಡುತ್ತಾ ಬಂದಿದ್ದೇನೆ, ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುವುದು ಸಲ್ಲದು ಎಂದು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಸುಮಾರು 5 ಕೋಟಿ ರೂ. ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ನಂತರ ಸಭಾ ಭವನದಲ್ಲಿ ನಡೆದ ಕಾರ್ಯ ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಗಣದಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ, ಮುಖ್ಯ ದ್ವಾರಬಾಗಿಲು ಕಾಂಪೌಂಡ್ ವಾಲ್ ಓವರ್ ಟ್ಯಾಂಕ್ ನಿರ್ಮಾಣ, ಮೂತ್ರಾಲಯ ಹಾಗೂ ಆಡಳಿತ ಕಚೇರಿ ಸುಧಾರಣೆ ಕಾರ್ಯ ನಡೆಯಲಿದೆ. ಇದಲ್ಲದೇ ನಾಲತವಾಡ ಮಾರುಕಟ್ಟೆ ಅಭಿವೃದ್ಧಿಗೆ 1 ಕೋಟಿ 70 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಇನ್ನೂ 5 ಕೋಟಿ ರೂ. ವೆಚ್ಚದ ನಬಾರ್ಡ ಯೋಜನೆಯಡಿ ಕೆಲಸವು ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಹೇಳಿದರು.
ತಾಳಿಕೋಟೆ ಪ್ರಾಚೀನ ಕಾಲದಿಂದಲೂ ವ್ಯಾಪಾರ ಕೇಂದ್ರವಾಗಿದೆ. ವಾಣಿಜ್ಯದ ಕೆಲಸ ಕಾರ್ಯಗಳು ನಿತ್ಯ ನಡೆಯುತ್ತಿರುವ ಗಮನಾರ್ಹ ಸಂಗತಿ. ಹಿಂದಿನ ಸರ್ಕಾರದಲ್ಲಿ ಆರ್ಥಿಕ ಶಿಸ್ತಿಲ್ಲದೆ ಕೆಲಸಗಳಿಗೆ ಅನುಮೋದನೆ ನೀಡಿದ್ದಕ್ಕೆ ಗುತ್ತಿಗೆದಾರರಿಗೆ ಬಹಳ ತೊಂದರೆ ಉಂಟಾಗಿರುವುದನ್ನು ನಾನು ಅರಿಯಬಲ್ಲೆ. ಏಕೆಂದರೆ ಬಜೆಟ್‌ನಲ್ಲಿ ದುಡ್ಡೇ ಇಲ್ಲದಿದ್ದರೆ ಹಣ ಕೊಡಲು ಹೇಗೆ ಸಾಧ್ಯ ಎಂದರು.
ಎಪಿಎಂಸಿ ಕಾರ್ಯದರ್ಶಿ ರಾಜು ಎಸ್ ರಾಠೋಡ್, ಬೆಳಗಾವಿಯ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ, ವಿಜಯಪುರದ ಕಾರ್ಯನಿರ್ವಾಹಕ ಅಭಿಯಂತರ ಎಲ್.ಬಿ.ಲಮಾಣೆ, ಸಿದ್ದನಗೌಡ ಪಾಟೀಲ, ಎಂ.ಎಸ್.ಸರಶೆಟ್ಟಿ, ಪ್ರಭುಗೌಡ ಮದರಕಲ್ಲ, ಅಕ್ಕಮಹಾದೇವಿ ಕಟ್ಟಿಮನಿ, ಸುರೇಶ ನಾಡಗೌಡ, ಶರಣು ದೇಶಮುಖ ಮತ್ತಿತರರಿದ್ದರು.