ಗೃಹ ಸಚಿವರ ಎದುರು ಪೊಲೀಸ್ ಕುಟುಂಬಗಳ ಅಳಲು

ಗೃಹ ಸಚಿವರ ಎದುರು ಪೊಲೀಸ್ ಕುಟುಂಬಗಳ ಅಳಲು
ಗೃಹ ಸಚಿವರ ಎದುರು ಪೊಲೀಸ್ ಕುಟುಂಬಗಳ ಅಳಲು
Published on

ಪ್ರಮುಖ ಮುಖ್ಯಾಂಶಗಳು

  • 40ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರಿಂದ ಗೃಹ ಸಚಿವರಿಗೆ ಮನವಿ
  • ಮಗ ಊರಿಗೆ ಬರುತ್ತಿಲ್ಲ, ಕಾನೂನಾತ್ಮಕ ಅಂತರ್‌ಜಿಲ್ಲಾ ವರ್ಗಾವಣೆಗೆ ಒತ್ತಾಯ
ಬೆಂಗಳೂರು: ಪೊಲೀಸ್ ನೌಕರಿಗೆ ಹೋದ ಮಗ ಹುಟ್ಟಿದೂರಿಗೆ ಬರುತ್ತಿಲ್ಲ. ಕಾನೂನಿಕ ಪ್ರಕಾರ ಅವರಿಗೆ ಅಂತರ್‌ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಿದರೆ, ಮುಪ್ಪಿನ ಕಾಲದಲ್ಲಿ ಅವರೊಟ್ಟಿಗೆ ಖುಷಿಯಾಗಿ ಜೀವನ ಕಳೆಯುತ್ತೇವೆ ಎಂದು ಪೊಲೀಸ್ ಸಿಬ್ಬಂದಿಯ ಕುಟುಂಬಗಳು, ಗೃಹ ಸಚಿವರ ಬಳಿ ಅಳಲು ತೋಡಿಕೊಂಡರು.
ಬೆಂಗಳುರು ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ 40ಕ್ಕೂ ಹೆಚ್ಚು ಪೊಲೀಸ್ ಪೆದೆಗಳ ಕುಟುಂಬಸ್ಥರು ಸೋಮವಾರ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿ, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಪೊಲೀಸ್ ಪೆದೆಗಳ ವೃದ್ಧ ತಂದೆ-ತಾಯಂದಿರು, 2016ನೇ ಸಾಲಿನಲ್ಲಿ ನಮ್ಮ ಮಕ್ಕಳು ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿ ಬೆಂಗಳೂರಿನಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಕಾನೂನಿನ ಪ್ರಕಾರ ಅವರು ವರ್ಗಾವಣೆಗೆ ಅರ್ಹರಿದ್ದಾರೆ ಆದರೂ ಸಹ ಅವರ ವರ್ಗಾವಣೆ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿದರು.
ಪತಿ-ಪತ್ನಿ ಪ್ರಕರಣದಲ್ಲಿ 2025 ಮತ್ತು 2026ರಲ್ಲಿ ಒಂದೇ ಸ್ಥಳದಲ್ಲಿ 7 ವರ್ಷ ಸೇವೆ ಪೂರೈಸಿದ 200ಕ್ಕೂ ಅಧಿಕ ಸಿಬ್ಬಂದಿಯ ಅಂತರ್‌ಜಿಲ್ಲಾ ವರ್ಗಾವಣೆ ಆಗಿದೆ. ಮಾಜಿ ಸೈನಿಕರ ಪ್ರಕರಣದಲ್ಲೂ ಅಂದಾಜು 162 ಸಿಬ್ಬಂದಿಯ ವರ್ಗಾವಣೆ ಆಗಿದೆ. ಆದರೆ ಬೆಂಗಳೂರು ನಗರದಲ್ಲಿನ ಸಾಮಾನ್ಯ ಪ್ರಕರಣಕ್ಕೆ ಒಳಪಟ್ಟ ಪೊಲೀಸ್ ಸಿಬ್ಬಂದಿ 11 ವರ್ಷ ಸೇವಾವಧಿ ಪೂರೈಸಿ, 3 ಬಾರಿ ಪದೋನ್ನತಿ ತ್ಯಜಿಸಿದರೂ ಅವರಿಗೆ ವರ್ಗಾವಣೆ ಭಾಗ್ಯ ಸಿಕ್ಕಿಲ್ಲ ಎಂದು ಸಮಸ್ಯೆಯ ಬಗ್ಗೆ ಸಚಿವರ ಬಳಿ ವಿವರಿಸಿದರು.

ಮಕ್ಕಳಿಗೆ ವರ್ಗಾವಣೆ ಕೊಡಿ, ಇಲ್ಲದಿದ್ದರೇ
ನಮಗೆ ದಯಾಮರಣ ಅವಕಾಶ ನೀಡಿ..!

ಬೆಂಗಳೂರು ನಗರ ಘಟಕದಲ್ಲಿ 10 ವರ್ಷ ಸೇವಾವಧಿ ಪೂರ್ಣಗೊಳಿಸಿರುವ 2016ನೇ ಸಾಲಿನ ಸಿವಿಲ್ ಕಾನ್‌ಸ್ಟೇಬಲ್ (ಸಾಮಾನ್ಯ ಪ್ರಕರಣ)ಗಳ ಅಂತರ್‌ಜಿಲ್ಲಾ ವರ್ಗಾವಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಈ ಸಿಬ್ಬಂದಿ ಹಾಗೂ ಅವರನ್ನು ಅವಲಂಬಿತ ಕುಟುಂಬಸ್ಥರಿಗೆ ದಯಾಮರಣಕ್ಕೆ ಅವಕಾಶ ನೀಡಬೇಕೆಂದು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಿಬ್ಬಂದಿಯ ವೃದ್ಧ ತಂದೆ-ತಾಯಂದಿರು ಹಾಗೂ ಕುಟುಂಬಸ್ಥರು ಸಚಿವರಿಗೆ ಮನವಿ ಮಾಡಿದರು.

ಸಚಿವರಿಂದ ಸಕಾರಾತ್ಮಕ ಸ್ಪಂದನೆ

ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರ ಮನವಿಗೆ ಸ್ಪಂದಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು, ನಾನು ಅಧಿಕಾರ ಸ್ವೀಕರಿಸಿ ಕೇವಲ 7 ವಾರಗಳಾಗಿವೆ. ಅಂತರ್‌ಜಿಲ್ಲಾ ವರ್ಗಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಿಮ್ಮ ಮನವಿಯ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸುವ ಬಗ್ಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆಂದು ಸಕಾರಾತ್ಮಕವಾಗಿ ಸಚಿವರು ಸ್ಪಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net