ಪೊಲೀಸರ ಬೀಟ್ ಕಿತ್ತಾಟ! ಸುಧಾರಿತ ಗಸ್ತು ವ್ಯವಸ್ಥೆಗೆ ಅಸಮಾಧಾನ

ಸುಧಾರಿತ ಗಸ್ತು ವ್ಯವಸ್ಥೆಗೆ ಅಸಮಾಧಾನ
ಸುಧಾರಿತ ಗಸ್ತು ವ್ಯವಸ್ಥೆಗೆ ಅಸಮಾಧಾನ
Published on

ಪ್ರಮುಖ ಮುಖ್ಯಾಂಶಗಳು

  • ಅರ್ಜಿ ಪರಿಶೀಲಿಸಲು ಡಿಜಿಪಿಗೆ ರವಾನೆ
  • ಬದಲಾವಣೆ ತರುವ ಕುರಿತು ಪ್ರಸ್ತಾವನೆಗೆ ಸೂಚನೆ
  • ಸೂಕ್ತ ಕ್ರಮಕ್ಕೆ ಘಟಕದ ಅಧಿಕಾರಿಗಳಿಗೆ ಆದೇಶ

| ಕೀರ್ತಿನಾರಾಯಣ ಸಿ. ಬೆಂಗಳೂರು

ಪೊಲೀಸ್ ಇಲಾಖೆಯಲ್ಲಿ ಅನುಷ್ಠಾನದಲ್ಲಿರುವ ‘ಸುಧಾರಿತ ಬೀಟ್’ ವ್ಯವಸ್ಥೆ ಬಗ್ಗೆ ಕೆಳಹಂತದ ಪೊಲೀಸರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬೀಟ್ ವ್ಯವಸ್ಥೆಯಲ್ಲಿ ಏನೇ ಘಟನೆ ನಡೆದರೂ ಕೆಳಹಂತದ ಸಿಬ್ಬಂದಿಯನ್ನಷ್ಟೇ ಹೊಣೆಗಾರರನ್ನಾಗಿಸಿ ಅಮಾನತು ಮಾಡಲಾಗುತ್ತಿದೆ. ಸಬ್ ಇನ್ಸ್ಪೆಕ್ಟರ್ ಮೇಲ್ಪಟ್ಟ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಕೊಟ್ಟಿಲ್ಲ ಎಂದು 8 ಪುಟಗಳ ದೂರರ್ಜಿಯನ್ನು ಸರ್ಕಾರಕ್ಕೆ ಬರೆದಿದ್ದು, ಈ ಬಗ್ಗೆ ಪರಿಶೀಲಿಸಿ ಬದಲಾವಣೆ ಅಗತ್ಯವಿದ್ದರೆ ಪ್ರಸ್ತಾವಣೆ ಸಲ್ಲಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಒಳಾಡಳಿತ ಇಲಾಖೆ ಲಿಖಿತ ಸೂಚನೆ ಕೊಟ್ಟಿದೆ.

ರಾಜ್ಯದಲ್ಲಿ ಸುಧಾರಿತ ಬೀಟ್ ವ್ಯವಸ್ಥೆ ಬಂದಾಗಿನಿಂದ ಪೊಲೀಸ್ ಗಿರಿ ಇಲ್ಲವಾಗಿದೆ. ಪೊಲೀಸರು ಮನೆ ಮನೆಗೆ ಹೋಗಿ ಜನರ ಯೋಗಕ್ಷೇಮ ವಿಚಾರಿಸುವುದಾಗಿದೆ. ಬೀಟ್ ಮೀಟಿಂಗ್ ಕರೆಯಬೇಕಾದರೆ ಮನೆ ಮನೆಗೆ ಹೋಗಿ ಗೋಗರೆಯುವ ಪರಿಸ್ಥಿತಿ ಇದೆ. ಪಿಎಸ್ಐ ಮೇಲ್ಪಟ್ಟದ ಅಧಿಕಾರಿಗಳು ತಮಗೂ ಬೀಟ್ ವ್ಯವಸ್ಥೆಗೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಸಬ್ ಇನ್ಸ್ಪೆಕ್ಟರ್ಗಳು ಠಾಣೆಯಲ್ಲೇ ಇದ್ದರೂ ದೂರು ದಾಖಲಿಸಿಕೊಳ್ಳುವುದಿಲ್ಲ. ಬದಲಾಗಿ ಎಎಸ್ಐ ಅಥವಾ ಹೆಡ್ ಕಾನ್ಸ್ಟೆಬಲ್ಗೆ ಹೇಳಿ ದಾಖಲಿಸುತ್ತಾರೆ. ತನಿಖೆಯ ಸಂದರ್ಭದಲ್ಲೂ ಸಲಹೆ-ಸೂಚನೆಗಳನ್ನು ಕೊಡುವುದಿಲ್ಲ. ರಾಜ್ಯದ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಸದ್ಯ ಇದೇ ಪರಿಸ್ಥಿತಿ ಇದೆ. ಕಾನ್ಸ್ಟೇಬಲ್​ನಿಂದ ಎಎಸ್ಐವರೆಗೆ ಸಮನ್ಸ್, ವಾರಂಟ್ ಜಾರಿ, ರಾತ್ರಿ ಗಸ್ತು, ತನಿಖೆಗೆ ಸಹಕಾರ, ಬರಹಗಾರ ಕೆಲಸವನ್ನೂ ಮಾಡಬೇಕು. ಇದರ ಜತೆಗೆ ಹಂಚಿಕೆಯಾಗಿರುವ ಏರಿಯಾ ಬೀಟ್ ಕರ್ತವ್ಯ ನಿಭಾಯಿಸಬೇಕು.

ಬೀಟ್​ನಲ್ಲಿ ಕಳ್ಳತನ, ಅಕ್ರಮ ಚಟುವಟಿಕೆ ಸೇರಿ ಏನೇ ಘಟನೆಯಾದರೂ ಕೆಳಹಂತದ ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಬೀಟ್ ಪ್ರದೇಶದಲ್ಲಿ ಏನಾದರು ಆದರೆ ಆಯಾ ಕಾನ್ಸ್ಟೆಬಲ್ ವಿರುದ್ಧ ರಿಪೋರ್ಟ್ ಸಲ್ಲಿಸಿ, ಅವರನ್ನೇ ಅಮಾನತು ಮಾಡಲಾಗುತ್ತಿದೆ. ತಮಗೂ ಆ ಘಟನೆಗೂ ಸಂಬಂಧ ಇಲ್ಲವೆಂಬಂತೆ ಮೇಲಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ಹರಕೆಯ ಕುರಿಯಾಗಿ ಕಾನ್ಸ್​ಟೇಬಲ್​ಗಳನ್ನು ಶಿಕ್ಷೆ ಅನುಭವಿಸುವ ಪರಿಸ್ಥಿತಿ ಇದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಮೇಲಧಿಕಾರಿಗಳ ಸೇವಾವಧಿಯನ್ನು ಒಂದು ಸ್ಥಳದಲ್ಲಿ 1 ವರ್ಷಕ್ಕೆ ಸೀಮಿತಗೊಳಿಸಿ ಸರ್ಕಾರ ಆದೇಶಿಸಿದೆ. ಆದರೆ, ಅದೇ ಜಾಗದಲ್ಲಿ ಎರಡ್ಮೂರು ವರ್ಷಗಳಾದರೂ ವರ್ಗಾವಣೆಯಾಗದೆ ಪ್ರಭಾವ ಬಳಸಿ ಕರ್ತವ್ಯದಲ್ಲಿ ಮುಂದುವರಿಯುತ್ತಿದ್ದಾರೆ.

ಹೀಗಾಗಿ ಕಡ್ಡಾಯವಾಗಿ 1 ವರ್ಷದಲ್ಲೇ ಬೇರೆ ಠಾಣೆ ಅಥವಾ ಘಟಕಕ್ಕೆ ಟ್ರಾನ್ಸ್​ಫರ್​ ಮಾಡಬೇಕು. ಇಲ್ಲವಾದಲ್ಲಿ ಸರ್ವಾಧಿಕಾರಿ ಧೋರಣೆಯಲ್ಲಿ ಕೆಳಹಂತದ ಸಿಬ್ಬಂದಿ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಎಂದು ಆಪಾದಿಸಲಾಗಿದೆ. ಸುಧಾರಿತ ಬೀಟ್ ವ್ಯವಸ್ಥೆಯಲ್ಲಿ ಸ್ಮಾರ್ಟ್ ಇ ಬೀಟ್ ಆಪ್ ಡೌನ್ಲೋಡ್ ಮಾಡಿಕೊಂಡು ರಾತ್ರಿ ಗಸ್ತಿನಲ್ಲಿ ಪಾಯಿಂಟ್​ಗೆ ಹೋಗಿ ಪಂಚ್ ಮಾಡಬೇಕು. ಆದರೆ, ಸ್ಮಾರ್ಟ್​ಫೋನ್​ ಇದ್ದರಷ್ಟೇ ಬೀಟ್ ಮಾಡಲು ಸಾಧ್ಯ. ಆದರೆ, ಪೊಲೀಸ್ ಸಿಬ್ಬಂದಿ ಬಳಿ ಸ್ಮಾರ್ಟ್ ಫೋನ್ ಇದೆಯೋ ಇಲ್ಲವೋ ಎಂಬುದು ಮೇಲಧಿಕಾರಿಗಳಿಗೆ ಗೊತ್ತಿಲ್ಲ. ಸ್ವಂತ ಖರ್ಚಿನಲ್ಲೇ ಮೊಬೈಲ್ ಹಾಗೂ ಕರೆನ್ಸಿ ಹಾಕಿಸಿಕೊಂಡು ಡ್ಯೂಟಿ ಮಾಡಬೇಕು ಎಂದು ಅಲವತ್ತುಕೊಂಡಿದ್ದಾರೆ.

ಕೆಳಹಂತದ ಸಿಬ್ಬಂದಿ ಹೇಳುವುದೇನು?

  • ಪೊಲೀಸ್ ಸಿಬ್ಬಂದಿಗಾಗಿಯೇ ಹಲವಾರು ನಿಯಮಗಳನ್ನು ಜಾರಿಗೆ ತರಲಾಗಿದೆ
  • ಎಸ್ಐ ಮೇಲ್ಪಟ್ಟ ಅಧಿಕಾರಿಗಳಿಗೆ ನಿಯಮಗಳ ಕಟ್ಟುಪಾಡುಗಳಿಲ್ಲ
  • ಕೆಳಹಂತದ ಸಿಬ್ಬಂದಿ ಸಮಸ್ಯೆ ಆಲಿಸಲು ಆದೇಶವಾಗಬೇಕು
  • ಸರ್ಕಾರದ ಆದೇಶವಿದ್ದರೂ ಕಡ್ಡಾಯ ರಜೆ ಕೊಡಲು ಸತಾಯಿಸಲಾಗುತ್ತಿದೆ
  • ಸಾರ್ವಜನಿಕರ ಸಮಸ್ಯೆಗಳು ಕೆಳಹಂತದ ಸಿಬ್ಬಂದಿಗಷ್ಟೇ ಗೊತ್ತಿರುತ್ತದೆ
  • ಠಾಣೆಗಳಲ್ಲಿ ಕೆಳಹಂತದ ಸಿಬ್ಬಂದಿ ಇಲ್ಲ. ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ
  • ರಾತ್ರಿ ಗಸ್ತಿನಲ್ಲಿರುವ ಅಧಿಕಾರಿಗಳು 1 ಅಥವಾ 2 ಗಂಟೆಯವರೆಗೆ ಇದ್ದು, ಮನೆಗೆ ಹೋಗುತ್ತಾರೆ
  • ರಾತ್ರಿ ಪಾಳಿಯ ಕೆಳಹಂತದ ಸಿಬ್ಬಂದಿ ಬೆಳಗಿನ ಜಾವ 5 ಗಂಟೆವರೆಗೆ ಡ್ಯೂಟಿ ಮಾಡಬೇಕು

ಇನ್​ಸರ್ವೀಸ್​ಗೆ ಅನುಪಾತ ಹೆಚ್ಚಿಸಿ

ಇಲಾಖೆಯಲ್ಲಿ ಕಾನ್ಸ್ಟೆಬಲ್ಗಳಾಗಿರುವ ಸಾಕಷ್ಟು ಮಂದಿ ಪದವೀಧರರಾಗಿದ್ದಾರೆ. ಇನ್ಸರ್ವೀಸ್ನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇನ್ಸರ್ವೀಸ್ ಮೀಸಲಾತಿ ಕಡಿಮೆ ಇರುವು ದರಿಂದ ಎಸ್ಐ ಆಗುತ್ತಿಲ್ಲ. ಹೀಗಾಗಿ ಇನ್ಸರ್ವೀಸ್ ಸಿಬ್ಬಂದಿಯನ್ನು 50:50 ಅನುಪಾತದಲ್ಲಿ ನೇಮಕ ಮಾಡಿಕೊಳ್ಳಬೇಕು. ನೇರ ನೇಮಕಾತಿಯಾದ ಎಸ್ಐಗಳಿಗೆ ಇಲಾಖೆಯ ಬಗ್ಗೆ ಜ್ಞಾನ ಹಾಗೂ ಅನುಭವದ ಕೊರತೆ ಇರುತ್ತದೆ. ಹೀಗಾಗಿ ಇನ್ಸರ್ವೀಸ್ ಸಿಬ್ಬಂದಿ ನೇಮಕಕ್ಕೆ ಆದ್ಯತೆ ಕೊಡಬೇಕು ಎಂದು ಕೆಳಹಂತದ ಸಿಬ್ಬಂದಿ ಮನವಿ ಮಾಡಿದ್ದಾರೆ.

ಯಾರಿಗೆಲ್ಲ ದೂರು ಸಲ್ಲಿಕೆ?

ಬೀಟ್ ವ್ಯವಸ್ಥೆಯಿಂದಾಗಿ ತಾವು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸುದೀರ್ಘವಾಗಿ ದೂರಿನ ಅರ್ಜಿ ಬರೆದಿರುವ ಕೆಳಹಂತದ ಸಿಬ್ಬಂದಿ, ದೂರಿನ ಪ್ರತಿಯನ್ನು ಮುಖ್ಯಮಂತ್ರಿ, ಒಳಾಡಳಿತ ಇಲಾಖೆ, ಲೋಕಾಯುಕ್ತರು, ಹೈಕೋರ್ಟ್ ಮುಖ್ಯನ್ಯಾಯಮೂರ್ತಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾನವ ಹಕ್ಕುಗಳ ಆಯೋಗ, ಪೊಲೀಸ್ ದೂರುಗಳ ಪ್ರಾಧಿಕಾರಕ್ಕೂ ಸಲ್ಲಿಸಿದ್ದಾರೆ.

ಡಿಜಿಪಿಗೆ ಸಿಎಸ್ ಸೂಚನೆ

ಸುಧಾರಿತ ಬೀಟ್ ವ್ಯವಸ್ಥೆ ಹಾಗೂ ಪಿಎಸ್ಐ ಮೇಲ್ಪಟ್ಟ ಅಧಿಕಾರಿಗಳು ಮಾಮೂಲಿ ವಸೂಲಿಗಷ್ಟೇ ಕೆಲಸ ಮಾಡುತ್ತಿದ್ದಾರೆಂದು ಪೊಲೀಸ್ ಸಿಬ್ಬಂದಿ ಕೊಟ್ಟಿರುವ ದೂರನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪತ್ರಮುಖೇನ ಡಿಜಿಪಿಗೆ ತಿಳಿಸಿರುವ ಒಳಾಡಳಿತ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಬದಲಾವಣೆ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದಾರೆ. ಬೀಟ್ ವ್ಯವಸ್ಥೆಯಲ್ಲಿ ಮೇಲಧಿಕಾರಿಗಳಿಗೂ ಹೆಚ್ಚಿನ ಜವಾಬ್ದಾರಿ ಕೊಡುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ಆಯುಕ್ತರು, ಎಸ್ಪಿ ಹಾಗೂ ವಲಯ ಅಧಿಕಾರಿಗಳಿಗೆ ಡಿಜಿಪಿ ಡಾ.ಎಂ.ಎ.ಸಲೀಂ ಲಿಖಿತ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net