ಸ್ವಚ್ಛ, ಸುಂದರ ಕಲಬುರಗಿಗೆ ಸಂಕಲ್ಪ ಮಾಡಿ

ಕಲಬುರಗಿ ಮಹಾನಗರ ಪಾಲಿಕೆ ಶುಕ್ರವಾರ ಆಯೋಜಿಸಿದ್ದ ಮ್ಯಾರಥಾನ್​ನಲ್ಲಿ ಮೇಯರ್​ ವರ್ಷಾ ಜಾನೆ, ಆಯುಕ್ತ ಅವಿನಾಶ ಶಿಂಧೆ, ಎಸಿ ಸಾಹಿತ್ಯಾ ಆಲದಕಟ್ಟಿ, ಪ್ರಮೀಳಾ ಎಂ.ಕೆ, ಪ್ರವಿಣ ಪುಣೆ ಇತರರಿದ್ದರು.
ಕಲಬುರಗಿ ಮಹಾನಗರ ಪಾಲಿಕೆ ಶುಕ್ರವಾರ ಆಯೋಜಿಸಿದ್ದ ಮ್ಯಾರಥಾನ್​ನಲ್ಲಿ ಮೇಯರ್​ ವರ್ಷಾ ಜಾನೆ, ಆಯುಕ್ತ ಅವಿನಾಶ ಶಿಂಧೆ, ಎಸಿ ಸಾಹಿತ್ಯಾ ಆಲದಕಟ್ಟಿ, ಪ್ರಮೀಳಾ ಎಂ.ಕೆ, ಪ್ರವಿಣ ಪುಣೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ಮೇಯರ್​ ವರ್ಷಾ ಜಾನೆ ಹೇಳಿಕೆ
  • ರನ್​ ಫಾರ್​ ಶತಾಭಿಷೇಕಂ ಮ್ಯಾರಥಾನ್​-ಸೈಕ್ಲೋಥಾನ್​
ಕಲಬುರಗಿ: ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ರಾಷ್ಟ್ರಪ್ರೇಮದ ಸಂದೇಶ ಬೆಸೆದು ಮಹಾನಗರ ಪಾಲಿಕೆ ಶುಕ್ರವಾರ ಆಯೋಜಿಸಿದ್ದ ರನ್​ ಫಾರ್​ ಶತಾಭಿಷೇಕಂ ಮ್ಯಾರಥಾನ್​ ಹಾಗೂ ಸೈಕ್ಲೋಥಾನ್​ ಗಮನಸೆಳೆಯಿತು. ಕಲಬುರಗಿ ಕೋಟೆಯಿಂದ ಆರಂಭಗೊಂಡ ಓಟ ಜಗತ್​ ವೃತ್ತದ ಮೂಲಕ ಎಸ್​ವಿಪಿ ವೃತ್ತದವರೆಗೆ ಸಾಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪಾಲಿಕೆ ಮೇಯರ್​ ವರ್ಷಾ ಜಾನೆ, ಸ್ವಚ್ಛ ನಗರ ನಿರ್ಮಾಣ ಕೇವಲ ಪಾಲಿಕೆ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಇದಕ್ಕಾಗಿ ಎಲ್ಲರೂ ಸಂಕಲ್ಪ ಮಾಡಬೇಕು. ಮನೆಯಿಂದಲೇ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿ ಕೊಡಬೇಕು. ಪೌರ ಕಾರ್ಮಿಕರಿಗೆ ಸೂಕ್ತ ರೀತಿಯಲ್ಲಿ ನೀಡುವ ಮೂಲಕ ತ್ಯಾಜ್ಯ ನಿರ್ವಹಣೆಗೆ ಸಾರ್ವಜನಿಕರು ಸಹಕರಿಸಬೇಕು. ಎಲ್ಲರೂ ಕೈಜೋಡಿಸಿದಾಗ ಮಾತ್ರ ಕಲಬುರಗಿ ಸ್ವಚ್ಛ ಹಾಗೂ ಸುಂದರ ನಗರವನ್ನಾಗಿ ರೂಪಿಸಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಮಾತನಾಡಿ, ಸ್ವಚ್ಛ ಪರಿಸರ ಆರೋಗ್ಯಕರ ಜೀವನಕ್ಕೆ ಆಧಾರ. ಮನೆ, ವಾರ್ಡ್​ ಹಾಗೂ ನಗರದ ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯಬಾರದು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್​ ಸಂಕನೂರ ಮಾತನಾಡಿ, ನಗರದ ಸ್ವಚ್ಛತೆ ಪ್ರವಾಸೋದ್ಯಮ ಹಾಗೂ ಅಭಿವೃದ್ಧಿಗೂ ಪೂರಕ. ಹೊರಗಿನಿಂದ ಬರುವವರು ಮೊದಲು ನಗರದ ಪರಿಸರ ಗಮನಿಸುತ್ತಾರೆ. ಸ್ವಚ್ಛ ನಗರವು ಉತ್ತಮ ವಾತಾವರಣದ ಜತೆಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಹಲವು ಪ್ರಯೋಜನ ಒದಗಿಸುತ್ತದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್​ ರೆಡ್ಡಿ ಮಾತನಾಡಿ, ಪ್ಲಾಸ್ಟಿಕ್​ ಬಳಕೆಯಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮ ಗಂಭೀರವಾಗಿದೆ. ಏಕಬಳಕೆ ಪ್ಲಾಸ್ಟಿಕ್​ ಬಳಕೆ ಕಡಿಮೆ ಮಾಡುವ ಜತೆಗೆ ಪ್ಲಾಸ್ಟಿಕ್​ ತ್ಯಾಜ್ಯ ರಸ್ತೆ ಬದಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದಂತೆ ಜನರು ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.
ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್​ ಶಿಂಧೆ ಮಾತನಾಡಿದರು.
ಪಾಲಿಕೆ ಸದಸ್ಯರಾದ ಅನುಪಮಾ ಕಮಕನೂರ, ಅಯಾಜ್​ ಖಾನ್​, ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ., ಸಹಾಯಕ ಆಯುಕ್ತೆ ಸಾಹಿತ್ಯಾ ಆಲದಕಟ್ಟಿ, ಡಿಸಿಪಿ ಶಾಲೂ ಇತರರಿದ್ದರು.
ಸೈಕ್ಲೋಥಾನ್​ನಲ್ಲಿ ದತ್ತಾತ್ರೇಯ ದೀಪಕ್​ ಪ್ರಥಮ, ವೆಂಕಟೇಶ್​ ಮುರಳೀಧರ ದ್ವೀತಿಯ ಹಾಗೂ ಲಕ್ಷ್ಮೀಪುತ್ರ ಗುರುಲಿಂಗಪ್ಪ ತೃತೀಯ ಸ್ಥಾನ ಪಡೆದರು. ಮ್ಯಾರಥಾನ್​ನಲ್ಲಿ ಪ್ರತಿಕ್​, ಶ್ರೀಲಕ್ಷ್ಮೀ ಹಾಗೂ ರಾಹುಲ್​ ರಾನೋಜಿ ಗಮನಾರ್ಹ ಸಾಧನೆ ಮಾಡಿದರು.
ಓಟದ ಬಳಿಕ ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ಮಕ್ಕಳಿಗಾಗಿ ಸ್ವಚ್ಛ ಭಾರತ ಮತ್ತು ಸ್ವಾತಂತ್ರ ದಿನ ವಿಷಯ ಚಿತ್ರಕಲಾ ಸ್ಪರ್ಧೆ, ತ್ಯಾಜ್ಯ ವಸ್ತುಗಳಿಂದ ಸ್ವಚ್ಛ ಭಾರತದ ಮಾದರಿ ತಯಾರಿಸುವ ಟಾಯ್​ಕಥಾನ್​ ನಡೆಯಿತು.
"

ಮ್ಯಾರಥಾನ್​ ಮತ್ತು ಸೈಕ್ಲೋಥಾನ್​ ಮೂಲಕ ಸ್ವಚ್ಛತೆಯ ಸಂದೇಶ ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಸಾರ್ವಜನಿಕರು ಕಸ ಎಸೆಯದೆ ಪೌರ ಕಾರ್ಮಿಕರ ಶ್ರಮಕ್ಕೆ ಗೌರವ ನೀಡಬೇಕು.

— > ಅವಿನಾಶ ಶಿಂಧೆ, ಆಯುಕ್ತ, ಮಹಾನಗರ ಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net