22 ಸಾವಿರ ಹಕ್ಕುಪತ್ರ ವಿತರಿಸಲು ಯೋಜನೆ

Plan to distribute 22,000 title deeds
Plan to distribute 22,000 title deeds
Published on
ವಿಜಯವಾಣಿ ಸುದ್ದಿಜಾಲ ಹುತ್ರಿದುರ್ಗ
ಜಿಲ್ಲೆಯಲ್ಲಿ ವಿಶೇಷ ಸಮಾವೇಶ ಮಾಡಿ ಕಂದಾಯ ಗ್ರಾಮಗಳಿಂದ ಕೈಬಿಟ್ಟ ಹಟ್ಟಿ, ತಾಂಡಾಗಳಲ್ಲಿ ನಿರ್ಮಿಸಿರುವ ಮನೆಗಳಿಗೆ ಸುಮಾರು ಇಪ್ಪತೆರಡು ಸಾವಿರ ಹಕ್ಕುಪತ್ರ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.
ಕುಣಿಗಲ್ ತಾಲೂಕು ಹುತ್ರಿದುರ್ಗ ಹೋಬಳಿಯ ಸಂತೆಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮಗಳಲ್ಲೇ ಜನಸಂಪರ್ಕ ಸಭೆ ಆಯೋಜನೆ ಮಾಡಿದ್ದು, ಸ್ಥಳೀಯವಾಗಿ ಬರುವ ದೂರುಗಳಿಗೆ ಸ್ಥಳದಲ್ಲೇ ಸ್ಪಂದಿಸಲಾಗುವುದು ಎಂದರು.
ಹುತ್ರಿದುರ್ಗ ಹೋಬಳಿಯಲ್ಲಿ 35 ಅರ್ಜಿಗಳು ಬಂದಿದ್ದು, ಚರಂಡಿಗಳಲ್ಲಿ ಕಸದ ಸಮಸ್ಯೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜೆಜೆಎಂ ಕಾಮಾಗಾರಿಗಳದ್ದೇ ಬಹುತೇಕ ದೂರುಗಳು ಆಗಿವೆ. ಈ ಸಂಬಂಧ ಇಒ ಅವರಿಗೆ ಕ್ರಮಕ್ಕೆ ಸೂಚಿಸಲಾಗಿದೆ. ಇದಲ್ಲದೆ ಸ್ಮಶಾನ ಭೂಮಿಗಳ ಒತ್ತುವರಿ ಹಾಗೂ ಆಶ್ರಯ ಯೋಜನೆಯ ಭೂಮಿಗಳ ಬಗ್ಗೆ ದೂರು ಕೇಳಿಬಂದಿದೆ. ಮಧ್ಯಾಹ್ನ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ 130 ಅರ್ಜಿಗಳು ಬಂದಿದೆ. ಬಂದಿರುವ ಅರ್ಜಿಗಳನ್ನು ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ನೋಂದಾಯಿಸಿ ತ್ವರಿತಗತಿಯಲ್ಲಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಜನಸಂಪರ್ಕ ಸಭೆಯಲ್ಲಿ ವಿಶೇಷವಾಗಿ ಮೂರು ರೀತಿಯ ಅದಾಲತ್ ಮಾಡಲಾಗುವುದು, ಮಕ್ಕಳಿಗೆ ಹಲವು ವರ್ಷಗಳಿಂದ ಆಧಾರ್ ಸಮಸ್ಯೆ ಇರುವುದನ್ನು ಸರಿಪಡಿಸುವುದು, ಆಹಾರ ಅದಾಲತ್ ಮೂಲಕ ಬಿಪಿಎಲ್ ಪಡಿತರ ಚೀಟಿಯಿಂದ ಹೆಸರು ಕೈಬಿಟ್ಟಿದ್ದಲ್ಲಿ, ಕಾಯಿಲೆಗೆ ತುತ್ತಾಗಿದ್ದರೆ ಅವರಿಗೆ ಸ್ಥಳದಲ್ಲಿ ಅನುಕೂಲ ಮಾಡಿಕೊಡಲಾಗುವುದು, ಪೌತಿ ಖಾತಿ ಆಂದೋಲನದಲ್ಲಿ ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿದ್ದು, ಕಳೆದ ಒಂದು ವಾರದಲ್ಲಿ ಎಂಟು ಸಾವಿರ ಅರ್ಜಿಗಳನ್ನು ನೋಂದಾಯಿಸಲಾಗಿದೆ, ಈ ವಿಷಯದಲ್ಲಿ ಜಿಲ್ಲೆಯಲ್ಲಿ ಉತ್ತಮ ಪ್ರಗತಿ ಆಗುತ್ತಿದೆ. ಗ್ರಾಮ ಆಡಳಿತ ಅಧಿಕಾರಿಗಳು ವಾರದಲ್ಲಿ ಕನಿಷ್ಠ 3 ದಿನಗಳು ಗ್ರಾಮಗಳಿಗೆ ತೆರಳಿ ಅಲ್ಲಿನ ಸಮಸ್ಯೆ ಆಲಿಸಬೇಕು ಎಂದು ಡಿಸಿ ಸೂಚಿಸಿದರು.
ಸ್ಥಳೀಯವಾಗಿ ಬರುವ ಅರ್ಜಿಗಳನ್ನು ಆನ್‌ಲೈನ್ ಮೂಲಕ ನೋಂದಾಯಿಸಲು ತಿಳಿಸಲಾಗಿದೆ ಎಂದೂ ವಿವರಿಸಿದರು. ತುಮಕೂರು ಉಪ ವಿಭಾಗಾಧಿಕಾರಿ ನಹೀದಾ ಜಮ್‌ಜಮ್, ತಹಸೀಲ್ದಾರ್ ಕರಿಯನಾಯ್ಕ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಮರಿಯಪ್ಪ,ಉಪ ತಹಸೀಲ್ದಾರ್ ರವೀಂದ್ರ, ಜಗದೀಶ್,ಕಂದಾಯ ನಿರೀಕ್ಷಕ ವಿಜಯ್ ಕುಮಾರ್ ಉಪಸ್ಥಿತರಿದ್ದರು.
18 ಹುತ್ರಿದುರ್ಗ 01
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net