ಎಲ್ಲ ಕೆರೆಗಳಿಗೂ ನೀರು ಹರಿಸಲು ಯೋಜನೆ ಸಿದ್ಧ

ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಶಾಸಕ ಎಚ್.ಕೆ.ಸುರೇಶ್.
ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಶಾಸಕ ಎಚ್.ಕೆ.ಸುರೇಶ್.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಕೆ.ಸುರೇಶ್
  • ಆದ್ಯತೆ ಮೇಲೆ ಕೆಲಸ

ಬೇಲೂರು:

ರೈತರ ಹಿತಾಸಕ್ತಿ ಕಾಪಾಡುವುದು, ಕೆರೆಗಳಿಗೆ ನೀರು ಹರಿಸುವುದು ಹಾಗೂ ಬೆಳೆಗಳಿಗೆ ನ್ಯಾಯಯುತ ಬೆಲೆ ಒದಗಿಸುವ ನಿಟ್ಟಿನಲ್ಲಿ ಆದ್ಯತೆ ಮೇಲೆ ಕೆಲಸ ಮಾಡುತಿದ್ದೇನೆ. ಆದರೆ ನಾನು ಮಾಡಿದ ಕೆಲಸಕ್ಕೆ ಬೇರೆಯವರು ಕ್ರೆಡಿಟ್‌ಗಾಗಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯಡಿ ಬೇಲೂರು ಕ್ಷೇತ್ರದ ವಿವಿಧ ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಹಂತ ಹಂತವಾಗಿ ನಡೆಯುತ್ತಿದೆ. ಜತೆಗೆ ಹಳೇಬೀಡು ದ್ವಾರಸಮುದ್ರ ಕೆರೆ ಈಗಾಗಲೇ ಭರ್ತಿಯಾಗಿದ್ದು, ಅಡುಗೂರು, ಡನ್ನಾಯ್ಕನಹಳ್ಳಿ, ಗೋಣಿಸೋಂನಹಳ್ಳಿ, ಘಟ್ಟದಹಳ್ಳಿ, ದ್ಯಾವಪ್ಪನಹಳ್ಳಿ, ಕೊಮಾರನಹಳ್ಳಿ ಸೇರಿದಂತೆ ಇತರ ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೆರೆಗಳಿಗೆ ನೀರು ಹರಿಸುವ ಸಂಬಂಧ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಈ ಕಾಮಗಾರಿಗೆ ಭೂಸ್ವಾಧೀನ ಹಾಗೂ ತಾಂತ್ರಿಕ ಅಡೆತಡೆ ಎದುರಾಗಿದ್ದವು. ಆದರೆ ಒಬ್ಬ ರೈತರ ಜಮೀನಿನಲ್ಲಿ ಪೈಪ್‌ಲೈನ್ ಹಾದು ಹೋಗಬೇಕಿರುವ ಕಾರಣ ನಾನೇ ಖುದ್ದಾಗಿ ಅಧಿಕಾರಿಗಳೊಂದಿಗೆ ರೈತರ ಮನೆಗೆ ತೆರಳಿ ಅವರ ಮನವೊಲಿಸಿದ್ದರಿಂದ ಅವರೂ ಸಹ ಸಹಕಾರ ನೀಡುವುದಾಗಿ ಹೇಳಿದ್ದು, ಕಾಮಗಾರಿ ಮುಂದುವರಿದಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವ ಸಂದರ್ಭ ಪ್ರವಾಹ ಪರಿಸ್ಥಿತಿ ಉಂಟಾಗದಂತೆ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕ್ಷೇತ್ರದ ಪ್ರತಿ ಕೆರೆಯನ್ನು ತುಂಬಿಸುವ ಗುರಿ ಹೊಂದಿದ್ದು ಇದರಲ್ಲಿ ಪಂಡಿತನಹಳ್ಳಿ, ದೇವಿಹಳ್ಳಿ, ಸೀಗೆಹಳ್ಳಿ ಸೇರಿದಂತೆ ಇತರ ಕೆರೆಗೂ ಲಿಫ್ಟ್ ಇರಿಗೇಷನ್ ಮೂಲಕ ನೀರು ಹರಿಸುವ ಯೋಜನೆ ಇದೆ. ಅರಣ್ಯ ಇಲಾಖೆ ಅನುಮತಿ ಹಾಗೂ ತಾಂತ್ರಿಕ ಅಡೆತಡೆ ನಿವಾರಣೆಯಾದರೆ ಬೇಲೂರು ತಾಲೂಕು ನೀರಾವರಿ ಸೌಲಭ್ಯ ಹೊಂದಿದ ಪ್ರದೇಶವಾಗಿ ರೂಪುಗೊಳ್ಳುವುದರೊಂದಿಗೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಇದರಿಂದ ದನ ಕರುಗಳು, ಕೃಷಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಗಂಗೂರು ಭಾಗದ ರೈತರಿಗೆ ಸೂಕ್ತ ಪರಿಹಾರ ಕೊಡಿಸಬೇಕೆಂಬುದು ತಮ್ಮ ನಿಲುವಾಗಿದೆ. ಸರ್ಕಾರ ನಿಗದಿಪಡಿಸಿರುವ ಪ್ರತಿ ಎಕರೆಗೆ 16.80 ರೂ. ಪರಿಹಾರವೇ ದೊರೆಯಬೇಕೆಂದು ಸರ್ಕಾರ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಪರಿಹಾರಕ್ಕಾಗಿ ಸರ್ಕಾರ ಈಗಾಗಲೇ 28 ಕೋಟಿ ರೂ. ಬಿಡುಗಡೆ ಮಾಡಿದ್ದು, ಆ ಹಣ ಜಿಲ್ಲಾಧಿಕಾರಿ ಖಾತೆಯಲ್ಲಿದೆ. ಯಾವುದೇ ಕಾರಣಕ್ಕೂ ರೈತರನ್ನು ಬಲವಂತವಾಗಿ ತೆರವುಗೊಳಿಸಬಾರದು. ನ್ಯಾಯಯುತ ಪರಿಹಾರ ನೀಡಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಕೆಲವರು ತಾವು ಯಾವುದೇ ಕೆಲಸ ಮಾಡದೆ ನಾನು ಮಾಡಿಸಿದ ಕಾಮಗಾರಿ ಬಳಿ ಫೋಟೋ ತೆಗೆಸಿಕೊಂಡು ಕ್ರೆಡಿಟ್ ಪಡೆಯಲು ಯತ್ನಿಸುತ್ತಿರುವುದು ಸರಿಯಲ್ಲ. ಶ್ರಮಪಟ್ಟು ಕೆಲಸ ಮಾಡಿದವರಿಗೆ ಅದರ ಗೌರವ ಸಿಗಬೇಕು. ಇನ್ನು ಅಧಿಕಾರಿಗಳ ಕಮಿಷನ್ ಆರೋಪ ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಸಾಕ್ಷ್ಯಾಧಾರಗಳೊಂದಿಗೆ ದೂರು ಬಂದರೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಎತ್ತಿನಹೊಳೆ ಯೋಜನಾ ವಿಭಾಗದ ಎಇಇ ವಿವೇಕ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net