ಕ್ಲಸ್ಟರ್‌ಗೊಬ್ಬರಂತೆ ದೈಹಿಕ ಶಿಕ್ಷಣ ಶಿಕ್ಷಕರು ನೇಮಕವಾಗಲಿ

ಚನ್ನರಾಯಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾಕೂಟಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ಎಸ್.ಎಸ್.ಸತೀಶ್, ಕೆ.ಎನ್.ಅನಿಲ್, ಎಚ್. ಎನ್.ಲೋಕೇಶ್, ವಿ.ಜಿ.ದ್ಯಾವೇಗೌಡ, ಕೆ.ಟಿ.ಆನಂದ್ ಇತರರಿದ್ದರು.
ಚನ್ನರಾಯಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಕ್ರೀಡಾಕೂಟಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ಎಸ್.ಎಸ್.ಸತೀಶ್, ಕೆ.ಎನ್.ಅನಿಲ್, ಎಚ್. ಎನ್.ಲೋಕೇಶ್, ವಿ.ಜಿ.ದ್ಯಾವೇಗೌಡ, ಕೆ.ಟಿ.ಆನಂದ್ ಇತರರಿದ್ದರು.
Published on
ಚನ್ನರಾಯಪಟ್ಟಣ: ತಾಲೂಕಿನ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿಂದಾಗಿ ವಿಷಯವಾರು ಶಿಕ್ಷಕರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಎದುರಾಗುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.

ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ತಾಪಂ, ಬಿಇಒ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕಾರ್ಯಾಲಯ ಹಾಗೂ ಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆ, (ಪ್ರಾಥಮಿಕ ಶಾಲಾ ವಿಭಾಗ) ಸಹಯೋಗದಲ್ಲಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಕಸಬಾ ಹೋಬಳಿಮಟ್ಟದ 14 ವರ್ಷದೊಳಗಿನ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಲೂಕಿನಲ್ಲಿ ಬಹುತೇಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಶಿಕ್ಷಣ ಇಲಾಖೆಯ ಮಾಹಿತಿಯಂತೆ, ತಾಲೂಕಿನಲ್ಲಿ ಒಟ್ಟು 150 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 5 ದೈಹಿಕ ಶಿಕ್ಷಣ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳಲ್ಲಿ ಕ್ರೀಡಾ ತರಬೇತಿ ನೀಡುವ ಜವಾಬ್ದಾರಿಯೂ ಸಾಮಾನ್ಯ ಶಿಕ್ಷಕರ ಮೇಲಿದೆ ಎಂದರು.

ದೈಹಿಕ ಶಿಕ್ಷಣವು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಅತ್ಯಗತ್ಯವಾಗಿದ್ದು, ಅದರ ಜವಾಬ್ದಾರಿಯನ್ನು ಪಠ್ಯ ಶಿಕ್ಷಕರು ನಿಭಾಯಿಸಬೇಕಾಗಿ ಬಂದಾಗ ಶಿಕ್ಷಣದ ಗುಣಮಟ್ಟ ಮತ್ತು ಶಿಕ್ಷಕರ ಆರೋಗ್ಯ ಎರಡರ ಮೇಲೂ ಪರಿಣಾಮ ಬೀರುತ್ತದೆ. ಜತೆಗೆ ್ತ ವಿದ್ಯಾರ್ಥಿಗಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಕ್ರೀಡಾಸಕ್ತಿಯನ್ನು ಬೆಳೆಸುವುದು ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಕ್ಲಸ್ಟರ್ ಒಬ್ಬರಂತೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಬಿಇಇಒ ಎಚ್.ಎಚ್.ಸತೀಶ್ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್.ಅನಿಲ್ ತಂಡಗಳ ಪರಿಚಯ ಮಾಡಿಕೊಂಡರು, ಕಸಾಪ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಕ್ರೀಡಾಜ್ಯೋತಿ ಸ್ವಾಗತಿಸಿದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕೆ.ಟಿ.ಆನಂದ್, ಅನ್ನದಾಸೋಹ ಸಹಾಯಕ ನಿರ್ದೇಶಕ ಎಚ್.ಡಿ.ಉಮಾಶಂಕರ್, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಆರ್.ವೆಂಕಟೇಶಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಿ. ಎನ್. ಗೋಪಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಟಿ.ಮಂಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಜಿ.ದ್ಯಾವೇಗೌಡ, ಪ್ರಧಾನ ಕಾರ್ಯದರ್ಶಿ ಸಿ.ಆರ್. ಮಂಜುನಾಥ, ಸಂಘಟನಾ ಕಾರ್ಯದರ್ಶಿ ರೇವಣ ಸ್ವಾಮಿ, ರಾಜ್ಯ ಪರಿಷತ್ ಸದಸ್ಯ ಎ.ಎಸ್.ಪ್ರಮೋದ್, ಶಿಕ್ಷಣ ಸಂಯೋಜಕ ಜಿ.ಇ.ಲೋಕೇಶ್ ಇತರರು ಇದ್ದರು. 700 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net