

ವಿಜಯಪುರ: ‘ಇಡಿ, ಐಟಿ, ಸಿಬಿಐನಂಥ ಸಂಸ್ಥೆಗಳನ್ನೆಲ್ಲ ಬಳಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಅವರ ಫೋನ್ ಟ್ಯಾಪಿಂಗ್ ಮಾಡುವ ವಿಷಯ ದೊಡ್ಡದೇನಲ್ಲ. ಈ ಕುರಿತು ತನಿಖೆಯಾಗಬೇಕು’ ಎಂದು ರಾಜ್ಯ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಲೋಕಸಭಾ ವಿರೋಧ ಪಕ್ಷಗಳ ನಾಯಕ ಹಾಗೂ ಕಾಂಗ್ರೆಸ್ ಪ್ರಮುಖ ರಾಹುಲ್ ಗಾಂಧಿ ಅವರಿಗೆ ಫೋನ್ ಟ್ಯಾಪಿಂಗ್ ಅನುಭವ ಆಗಿರಬೇಕು. ಏಕೆಂದರೆ ಜೆನ್‌ಝಿ ಹೋರಾಟ, ಮತಪಟ್ಟಿ ಪರಿಷ್ಕರಣ ವಿಚಾರ, ನಿರುದ್ಯೋಗ ಸಮಸ್ಯೆ, ಪರೀಕ್ಷಾ ಅಕ್ರಮಗಳ ವಿರುದ್ಧದ ಹೋರಾಟದಲ್ಲಿ ರಾಹುಲ್ ಗಾಂಧಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಹತಾಶಗೊಂಡ ಬಿಜೆಪಿ ಫೋನ್ ಟ್ಯಾಪಿಂಗ್ ಕೃತ್ಯದಲ್ಲಿ ಭಾಗಿಯಾಗಿರಬಹುದೆಂದು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವರ್ಚಸ್ಸು ಕುಗ್ಗುತ್ತಿದೆ, ಹೀಗಾಗಿ ಹತಾಶಗೊಂಡ ಬಿಜೆಪಿ ಫೋನ್ ಟ್ಯಾಪಿಂಗ್‌ನಂಥ ಷಡ್ಯಂತ್ರದಲ್ಲಿ ಭಾಗಿಯಾದರೂ ಅಚ್ಚರಿಯಿಲ್ಲ. ಇವಿಎಂ ಯಂತ್ರ ಹ್ಯಾಕ್ ಮಾಡೋದು, ಫೋನ್ ಟ್ಯಾಪಿಂಗ್ ಮಾಡೋದು ಬಿಜೆಪಿ ಪಾಲಿಗೆ ಹೊಸದೇನಲ್ಲ ಎಂದಿದ್ದಾರೆ.
ಇನ್ನು ನಮ್ಮ ಮೆಟ್ರೋನ ಪಿಂಕ್ ಲೇನ್ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ಅವರನ್ನು ಲೇವಡಿ ಮಾಡಿದ ಸಚಿವರು, ಕೇವಲ ಏಳು ಕಿಮೀ ಮೆಟ್ರೋ ಚಾಲನೆಗೆ ಪ್ರಧಾನಿ ಬರಬೇಕಿತ್ತಾ? ಎಂದು ಅಪಹಾಸ್ಯ ಮಾಡಿದ್ದಾರೆ.
ಬಹುತೇಕ ಅಭಿವೃದ್ಧಿ ಕಾಮಗಾರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪಾಲು ಇರುತ್ತದೆ. ಆದರೆ, ಭದ್ರಾ ಮೇಲ್ದಂಡೆಯಂಥ ಬೃಹತ್ ಯೋಜನೆಗಳಿಗೆ ಕ್ಯಾಬಿನೆಟ್‌ನಲ್ಲಿ 5 ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿರುವ ಬಿಜೆಪಿ ಈವರೆಗೂ ಕೊಟ್ಟಿಲ್ಲ. ಅದನ್ನು ಮೊದಲು ಕೊಡಲಿ.
ಕಬ್ಬು ಬೆಳೆಗಾರರಿಗೆ ಎಂಎಸ್‌ಪಿ, ಎಫ್‌ಆರ್‌ಪಿ ನಿಗದಿ ಮಾಡಲಿ. ಬರ ಪರಿಹಾರ ಕೊಡಲಿ. ಈ ಬಗ್ಗೆ ನಾನು ಅನೇಕ ಸಲ ಗಮನಕ್ಕೆ ತಂದಿದ್ದಾರೆ. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬೇಡಿ ಎಂದಿದ್ದಾರೆ. ಆದರೂ, ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಬೃಹತ್ ಕೈಗಾರಿಕೆಗಳು ಬರದಂತೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.