ಜೈಲುಗಳಲ್ಲಿಯೂ ಬರಲಿದೆ ಪೆಟ್ರೋಲ್ ಬಂಕ್; ಮೊದಲ ಹಂತದಲ್ಲಿ 5 ಜೈಲುಗಳಲ್ಲಿ ಉದ್ಘಾಟನೆ; ಜೈಲನ್ನು ಆದಾಯ ಮೂಲವಾಗಿ ಪರಿವರ್ತಿಸಲು ಪ್ಲಾನ್

DK SHIVAKUMAR
DK SHIVAKUMAR
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಹಂತದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ, ಬಳ್ಳಾರಿ, ಧಾರವಾಡ, ಮೈಸೂರು ಮತ್ತು ಬೆಳಗಾವಿಯಲ್ಲಿ
  • ಮುಂದಿನ ಹಂತಗಳಲ್ಲಿ ಶಿವಮೊಗ್ಗ, ಕಲಬುರಗಿ ಮತ್ತು ವಿಜಯಪುರ ಜೈಲುಗಳಿಗೂ ಇದನ್ನು ವಿಸ್ತರಿಸುವ ಯೋಜನೆ
ಶಿವಾನಂದ ತಗಡೂರು, ಬೆಂಗಳೂರು:
ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯು ಜೈಲುಗಳ ಆವರಣದಲ್ಲಿ ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ಮಾದರಿಯನ್ನು ಆಧರಿಸಿ ಈ ಯೋಜನೆಯನ್ನು ರೂಪಿಸಲಾಗಿದೆ.
ಮೊದಲ ಹಂತದಲ್ಲಿ ಹೆದ್ದಾರಿಗಳಿಗೆ ಹೊಂದಿಕೊಂಡಿರುವ ಖಾಲಿ ಭೂಮಿಯನ್ನು ಹೊಂದಿರುವ 5 ಪ್ರಮುಖ ಕೇಂದ್ರ ಕಾರಾಗೃಹಗಳ ಆವರಣದಲ್ಲಿ ಈ ಇಂಧನ ಕೇಂದ್ರಗಳನ್ನು ತೆರೆಯಲು ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ, ಬಳ್ಳಾರಿ, ಧಾರವಾಡ, ಮೈಸೂರು ಮತ್ತು ಬೆಳಗಾವಿಯಲ್ಲಿ ಮಾಡಬೇಕು ಎನ್ನುವುದು ಕಾರಾಗೃಹ ಇಲಾಖೆ ಉದ್ದೇಶವಾಗಿದೆ.
ಮುಂದಿನ ಹಂತಗಳಲ್ಲಿ ಶಿವಮೊಗ್ಗ, ಕಲಬುರಗಿ ಮತ್ತು ವಿಜಯಪುರ ಜೈಲುಗಳಿಗೂ ಇದನ್ನು ವಿಸ್ತರಿಸುವ ಯೋಜನೆ ಇದೆ.
ಆದಾಯ ವೃದ್ಧಿ:
ಜೈಲು ಇಲಾಖೆಯ ವ್ಯಾಪ್ತಿಯಲ್ಲಿ ಬಳಕೆಯಾಗದೆ ಬಿದ್ದಿರುವ ಬಂಜರು ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿ ಇಲಾಖೆಗೆ ಆದಾಯ ತರುವುದು ಇದರ ಮುಖ್ಯ ಉದ್ದೇಶ.
ಉದ್ಯೋಗ ಮತ್ತು ಸುಧಾರಣೆ:
ಸನ್ನಡತೆಯ ಆಧಾರದ ಮೇಲೆ ಆಯ್ಕೆಯಾಗುವ ಕೈದಿಗಳಿಗೆ ಈ ಬಂಕ್‌ಗಳಲ್ಲಿ ಕೆಲಸ ಮಾಡಲು ವಿಶೇಷ ತರಬೇತಿ ನೀಡಲಾಗುತ್ತದೆ. ಇದರಿಂದ ಅವರು ಜೈಲಿನಿಂದ ಬಿಡುಗಡೆಯಾದ ನಂತರ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಲು ನೆರವಾಗುತ್ತದೆ.
ಕೆಲಸದ ಶಿಫ್ಟ್‌ಗಳು:
ಒಂದು ಅಂದಾಜಿನ ಪ್ರಕಾರ, ಪ್ರತಿ ಪೆಟ್ರೋಲ್ ಬಂಕ್‌ನಲ್ಲಿ ಸುಮಾರು 45 ಕೈದಿಗಳಿಗೆ 3 ಶಿಫ್ಟ್‌ಗಳಲ್ಲಿ (ಪ್ರತಿ ಶಿಫ್ಟ್‌ಗೆ 15 ರಂತೆ) ಕೆಲಸ ಮಾಡಲು ಅವಕಾಶ ಸಿಗಲಿದೆ. ಇವರಿಗೆ ನೀಡಲಾಗುವ ವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
2 ಆಯಿಲ್ ಕಂಪನಿ ಜೊತೆ ಚರ್ಚೆ:
ಇಲಾಖೆಯು ಈ ಯೋಜನೆಗಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮತ್ತು ಭಾರತ್ ಪೆಟ್ರೋಲಿಯಂ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದು, ಜೈಲುಗಳ ಆವರಣದ ಹೊರಭಾಗದಲ್ಲಿ ಸುಮಾರು ಅರ್ಧ ಎಕರೆ ಜಾಗವನ್ನು ಗುರುತಿಸುವ ಪ್ರಕ್ರಿಯೆ ಹಾಗೂ ತಾಂತ್ರಿಕ ಕಾರ್ಯಸಾಧ್ಯತೆಗಳ ಪರಿಶೀಲನೆ ನಡೆದಿದೆ. ಭದ್ರತೆಯ ದೃಷ್ಟಿಯಿಂದ ಈ ಬಂಕ್‌ಗಳಲ್ಲಿ ಸಂಪೂರ್ಣ ಸಿಸಿಟಿವಿ ಕಣ್ಗಾವಲು ಇರಲಿದೆ.
ಇತರೆ ಉತ್ಪನ್ನಗಳ ಮಾರಾಟ:
ಪೆಟ್ರೋಲ್ ಬಂಕ್‌ಗಳ ಪಕ್ಕದಲ್ಲೇ ಜೈಲು ಕೈದಿಗಳು ತಯಾರಿಸುವ ’ಪರಿವರ್ತನಾ’ ಬ್ರ್ಯಾಂಡ್‌ನ ಬೇಕರಿ ಉತ್ಪನ್ನಗಳು, ಕರಕುಶಲ ವಸ್ತುಗಳು ಮತ್ತು ಬಟ್ಟೆಗಳ ಮಾರಾಟ ಮಳಿಗೆಗಳನ್ನು ತೆರೆಯಲು ಸಹ ಇಲಾಖೆ ಯೋಜಿಸಿದೆ.

*ಜೈಲುಗಳ ಜಾಗದಲ್ಲಿ ಪೆಟ್ರೋಲ್ ಬಂಕ್ ಪ್ರಾರಂಭಿಸಲು ಸಿದ್ಧತೆ ನಡೆಯುತ್ತಿದೆ. ಪ್ರಾಯೋಗಿಕವಾಗಿ 5 ಕಡೆಯಲ್ಲಿ ಪೆಟ್ರೋಲ್ ಬಂಕ್ ಮಾಡುವುದಕ್ಕೆ ಸರ್ಕಾರದ ಒಪ್ಪಿಗೆ ಸಿಕ್ಕಿದೆ. ಈ ಬಂಕ್‌ಗಳಿಂದ ಬರುವ ಆದಾಯವನ್ನು ಜೈಲಿನ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು.

-ಕೆ.ವಿ.ಶರತ್ ಚಂದ್ರ, ಎಡಿಜಿಪಿ, ಪ್ರಧಾನ ಕಾರ್ಯದರ್ಶಿ, ಗೃಹ ಇಲಾಖೆ.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net