ನಿವೃತ್ತಿ ಕಾರಣಕ್ಕೆ ಕಾಯಂ ಸ್ಥಾನಮಾನ ನಿರಾಕರಿಸುವಂತಿಲ್ಲ| High Court ಆದೇಶ

ಹೈಕೋರ್ಟ್​
ಹೈಕೋರ್ಟ್​
Published on
ಬೆಂಗಳೂರು: ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ ಎಂಬ ಕಾರಣಕ್ಕೆ ನೌಕರರ ಕಾಯಂ ಸ್ಥಾನಮಾನದ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ಮಹತ್ವದ ಆದೇಶ ನೀಡಿದೆ. ಈ ಮೂಲಕ ಉತ್ತರ ಕನ್ನಡದ ಶಿರಸಿ ತಾಲೂಕಿನ ಕುಳವೆ ಗ್ರಾ.ಪಂ.ನಲ್ಲಿ 21 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರಮೇಶ್​ ವೆಂಕಟರಮಣ ಹೆಗಡೆ ಅವರಿಗೆ ಕಾಯಂ ಸ್ಥಾನಮಾನ ಆಧಾರಿತ ಸೌಲಭ್ಯಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ರಮೇಶ್​ ವೆಂಕಟರಮಣ ಹೆಗಡೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸ್ನನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ತಾತ್ಕಾಲಿಕ, ದಿನಗೂಲಿ ಅಥವಾ ಯಾವುದೇ ರೀತಿಯ ನೇಮಕಾತಿಗೆ ಒಳಪಟ್ಟ ನೌಕರರು 10 ವರ್ಷಗಳ ಸೇವೆ ಪೂರ್ಣಗೊಳಿಸಿದ ನಂತರ ಅಥವಾ ಹುದ್ದೆಗೆ ಅರ್ಹತೆ ಪಡೆದ ನಂತರ ಸೇವಾ ಕ್ರಮಬದ್ಧತೆಗೆ ಅರ್ಹರಾಗಿರುತ್ತಾರೆ. ಅವರಿಗೆ ಆ ಸೌಲಭ್ಯಗಳನ್ನು ನಿರಾಕರಿಸಿದರೆ ಅದು ಶೋಷಣೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 
ಅರ್ಜಿದಾರರು 21 ವರ್ಷಗಳ ಕಾಲ ಅಟೆಂಡರ್​ ಮತ್ತು ಬಿಲ್​ ಕಲೆಕ್ಟರ್​ ಆಗಿ 1994ರಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅವರು ಈಗ ನಿವೃತ್ತರಾಗಿದ್ದರೂ ಅವರ ಸೇವೆಯನ್ನು ಕಾಯಂ ವ್ಯಾಪ್ತಿಯಲ್ಲಿಯೇ ಪರಿಗಣಿಸಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್​ ನೀಡಿರುವ ತೀರ್ಪುಗಳನ್ನು ಪ್ರಸ್ತುತ ಪ್ರಕರಣದಲ್ಲಿ ರ್ನಿಲಸಲು ಸಾಧ್ಯವಿಲ್ಲ. ನ್ಯಾಯಾಲಯದ ನಿರ್ದೇಶನಗಳನ್ನು ಕಡೆಗಣಿಸಿ ಅರ್ಜಿದಾರರನ್ನು ಸರ್ಕಾರ ಮತ್ತೊಮ್ಮೆ ಪ್ರಕರಣಗಳ ಸುಳಿಗೆ ತಳ್ಳಬಾರದು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

2014ರಲ್ಲೇ ಆದೇಶ:

ರಮೇಶ್​ ವೆಂಕಟರಮಣ ಹೆಗಡೆ ಅವರ ಸೇವೆಯನ್ನು ಕಾಯಂಗೊಳಿಸುವಂತೆ ಹೈಕೋರ್ಟ್​ 2014ರಲ್ಲೇ ಆದೇಶ ನೀಡಿತ್ತು. ಆದರೆ, ಸರ್ಕಾರ ಕ್ರಮ ಕೈಗೊಂಡಿರಲಿಲ್ಲ. ಇದನ್ನು ಅವರು ಮತ್ತೆ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠ, 2004ರಿಂದ ಅನ್ವಯವಾಗುವಂತೆ ಕಾಯಂ ಸ್ಥಾನಮಾನದ ಸೌಲಭ್ಯಗಳನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net